
ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ ದಂಪತಿ ಕಳೆದ ತಿಂಗಳು ಬಲು ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಜೈಪುರದಲ್ಲಿ ನಡೆದ ಇವರ ಮದುವೆ ದೇಶದಾದ್ಯಂತ ಸುದ್ದಿ ಆಗಿತ್ತು, ರಶ್ಮಿಕಾ-ವಿಜಯ್ ಅವರ ಫೋಟೊಗಳು ಸಖತ್ ವೈರಲ್ ಆಗಿದ್ದವು. ಬಳಿಕ ಹೈದರಾಬಾದ್ನಲ್ಲಿ ಅದ್ಧೂರಿ ರಿಸೆಪ್ಷನ್ ಸಹ ನಡೆಯಿತು. ವಿವಾಹದ ಬಳಿಕ ಥಾಯ್ಲೆಂಡ್ಗೆ ಹನಿಮೂನ್ ಪ್ರವಾಸಕ್ಕೂ ಸಹ ಈ ಜೋಡಿ ಹೋಗಿ ಬಂತು. ಇದೀಗ ಮದುವೆಯಾಗಿ ತಿಂಗಳ ಬಳಿಕ ಇಬ್ಬರೂ ಕೆಲಸಕ್ಕೆ ಮರಳಿದ್ದಾರೆ. ರಶ್ಮಿಕಾ ಮತ್ತು ವಿಜಯ್ ಒಟ್ಟಿಗೆ ‘ರಣಬಲಿ’ ಸಿನಿಮಾನಲ್ಲಿ ನಟಿಸುತ್ತಿದ್ದು, ಸೆಟ್ಗೆ ಒಟ್ಟಿಗೆ ಮರಳಿದ್ದಾರೆ. ನವ ವಧು-ವರರನ್ನು ಆರತಿ ಮಾಡುವ ಮೂಲಕ ಸೆಟ್ಗೆ ಸ್ವಾಗತಿಸಿರುವುದು ವಿಶೇಷ.
ಮದುವೆಗೆ ಮುಂಚೆ ಈ ಜೋಡಿ ‘ರಣಬಲಿ’ ಸಿನಿಮಾ ಒಪ್ಪಿಕೊಂಡಿದ್ದರು. ಇದೀಗ ಮದುವೆ ಬಳಿಕ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, ಒಟ್ಟಿಗೆ ಸೆಟ್ಗೆ ಬಂದಿದ್ದಾರೆ. ‘ರಣಬಲಿ’ ಒಂದು ಪಿರಿಯಡ್ ಆಕ್ಷನ್ ಡ್ರಾಮಾ ಆಗಿದ್ದು, ರಾಹುಲ್ ಸಂಕೃತ್ಯನ್ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಒಂದು ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ಗಮನ ಸೆಳೆದಿತ್ತು. ಮದುವೆ ಬಳಿಕ ಇಬ್ಬರೂ ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ. ಜೊತೆಗೆ ಇಬ್ಬರೂ ಒಟ್ಟಿಗೆ ನಟಿಸುತ್ತಿರುವ ಮೂರನೇ ಸಿನಿಮಾ ಇದಾಗಿದೆ.
ಇದನ್ನೂ ಓದಿ:ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹಕ್ಕೆ ಅಂತಿಮವಾಗಿ ಖರ್ಚಾಗಿದ್ದೆಷ್ಟು?
ವಿಜಯ್ ಹಾಗೂ ರಶ್ಮಿಕಾ ಅವರಿಗೆ ‘ರಣಬಲಿ’ ಸೆಟ್ನಲ್ಲಿ ಆರತಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿಡಿಯೋನಲ್ಲಿ ರಶ್ಮಿಕಾ, ಹಣೆಗೆ ಕುಂಕುಮ, ಕೆನ್ನೆಗೆ ಅರಿಶಿಣ ಧರಿಸಿ ಬಹಳ ಖುಷಿಯಿಂದ ಆರತಿ ಮಾಡಿಸಿಕೊಂಡಿದ್ದಾರೆ. ಜೊತೆಯಲ್ಲಿ ವಿಜಯ್ ದೇವರಕೊಂಡ ಸಹ ಇದ್ದಾರೆ. ಇಡೀ ಚಿತ್ರತಂಡ ನೂತನ ವಧು-ವರರಿಗೆ ಮದುವೆಯ ಶುಭಾಶಯಗಳನ್ನು ಕೋರಿದೆ.
ರಶ್ಮಿಕಾ ಮಂದಣ್ಣ ನಟಿಸಿರುವ ‘ಕಾಕ್ಟೇಲ್ 2’ ಸಿನಿಮಾ ಮುಂದಿನ ತಿಂಗಳು ಬಿಡುಗಡೆ ಆಗಲಿದೆ. ಇದೀಗ ಅವರು ‘ರಣಬಲಿ’ ಸಿನಿಮಾನಲ್ಲಿ ನಟಿಸಲು ಆರಂಭಿಸಿದ್ದಾರೆ. ಇದರ ಜೊತೆಗೆ ಇನ್ನೂ ಒಂದು ಹಿಂದಿ ಸಿನಿಮಾ ಹಾಗೂ ಅಲ್ಲು ಅರ್ಜುನ್ ಜೊತೆಗೆ ಅಟ್ಲಿ ನಿರ್ದೇಶಿಸಲಿರುವ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ಸಹ ನಟಿಸಲಿದ್ದಾರೆ. ಇನ್ನು ವಿಜಯ್ ದೇವರಕೊಂಡ ‘ರಣಬಲಿ’ಯ ಜೊತೆಗೆ ‘ರೌಡಿ ಜನಾರ್ಧನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ರಣಬಲಿ’ ಬಳಿಕ ರಶ್ಮಿಕಾ ಮತ್ತು ವಿಜಯ್ ಅವರು ಒಟ್ಟಿಗೆ ‘ಗೀತಾ ಗೋವಿಂದಂ 2’ ಸಿನಿಮಾನಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ