ಹಲಸಿನ ಹಣ್ಣಿನ ಪಡ್ಡುImage Credit source: Getty Images
ದಕ್ಷಿಣ ಭಾರತೀಯರ ನೆಚ್ಚಿನ ಖಾದ್ಯಗಳಲ್ಲಿ ಪಡ್ಡು (Paddu) ಕೂಡ ಒಂದು. ಸಾಮಾನ್ಯವಾಗಿ ಹೆಚ್ಚಿನವರ ಮನೆಗಳಲ್ಲಿ ರುಚಿರುಚಿಯಾದ ಮಸಾಲ ಪಡ್ಡು, ರವೆ-ಮೊಸರು ಪಡ್ಡು ತಯಾರಿಸುತ್ತಾರೆ. ಇದರ ಜೊತೆಗೆ ಹಲಸಿನ ಹಣ್ಣಿನ ಸ್ವೀಟ್ ಪಡ್ಡು ಕೂಡ ತಯಾರಿಸಬಹುದು. ಮಳೆಗಾಲದ ಋತುವಿನಲ್ಲಿ ಹಲಸಿನ ಹಣ್ಣಿನ ಭರಾಟೆ ತುಂಬಾನೇ ಜೋರಿರುತ್ತವೆ. ಪೋಷಕಾಂಶಗಳ ಗಣಿಯಾಗಿರುವ ಈ ಹಣ್ಣು ತಿನ್ನಲು ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಇಂತಹ ಹಲಸಿನ ಹಣ್ಣನ್ನು ಬರೀ ತಿಂದು ಬೋರಾಗಿದ್ರೆ, ಇದರಿಂದ ಒಂದು ಸಲ ಸ್ವೀಟ್ ಪಡ್ಡು ತಯಾರಿಸಿ. ಈ ಸ್ಪೆಷಲ್ ಪಡ್ಡು ರೆಸಿಪಿಯ ಸಂಪೂರ್ಣ ವಿವರ ಇಲ್ಲಿದೆ.
ಸ್ವಾದಿಷ್ಟಕರ ಹಲಸಿನ ಹಣ್ಣಿನ ಪಡ್ಡು ರೆಸಿಪಿ:
ಸ್ವಾದಿಷ್ಟಕರವಾದ ಹಲಸಿನ ಹಣ್ಣಿನ ಪಡ್ಡನ್ನು ತಯಾರಿಸುವುದು ತುಂಬಾನೇ ಸುಲಭ, ಜೊತೆಗೆ ಇದಕ್ಕೆ ಹೆಚ್ಚಿನ ಪದಾರ್ಥಗಳು ಕೂಡ ಬೇಕಿಲ್ಲ. ಕೇವಲ ನಾಲ್ಕರಿಂದ ಐದು ಪದಾರ್ಥಗಳನ್ನು ಬಳಸಿ ಸಖತ್ ಟೇಸ್ಟಿಯಾಗಿರುವ ಹಲಸಿನ ಹಣ್ಣಿನ ಸ್ವೀಟ್ ಪಡ್ಡು ತಯಾರಿಸಬಹುದು.
ಹಲಸಿನ ಹಣ್ಣಿನ ಪಡ್ಡು ತಯಾರಿಸಲು ಬೇಕಾದ ಸಾಮಾಗ್ರಿಗಳು:
- ಒಂದು ಕಪ್ ದೋಸೆ ಅಕ್ಕಿ
- ತೆಂಗಿನಕಾಯಿ ತುರಿ
- ಬೆಲ್ಲ
- ಹಲಸಿನ ಹಣ್ಣಿನ ತೊಳೆ
- ರುಚಿಗೆ ತಕ್ಕಷ್ಟು ಉಪ್ಪು
- ತುಪ್ಪ
- ಏಲಕ್ಕಿ
ಇದನ್ನೂ ಓದಿ: ಚಹಾ ತಯಾರಿಸುವಾಗ, ಸೇವಿಸುವಾಗ ಮಾಡುವ ಈ ತಪ್ಪುಗಳು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು
ಹಲಸಿನ ಹಣ್ಣಿನ ಪಡ್ಡು ತಯಾರಿಸುವ ವಿಧಾನ:
- ಮೊದಲಿಗೆ ಅಕ್ಕಿಯನ್ನು ಒಂದರಿಂದ ಎರಡು ಗಂಟೆಗಳ ಕಾಲ ನೆನೆಸಿಡಿ.
- ಬಳಿಕ ಒಂದು ಮಿಕ್ಸಿ ಜಾರ್‌ಗೆ ನೆನೆಸಿದ ಅಕ್ಕಿ, ಸಿಹಿಗೆ ತಕ್ಕಷ್ಟು ಬೆಲ್ಲ, ಒಂದೆರಡು ಏಲಕ್ಕಿ, ತೆಂಗಿನಕಾಯಿ ತುರಿ, ಒಂದು ಕಪ್ ಹಲಸಿನ ತೊಳೆ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಎಲ್ಲವನ್ನು ನುಣ್ಣಗೆ ರುಬ್ಬಿಕೊಳ್ಳಿ. ಈ ಹಿಟ್ಟು ಸಾಮಾನ್ಯ ಪಡ್ಡು ತಯಾರಿಸುವ ಹಿಟ್ಟಿನ ಹದಕ್ಕೆ ಇರಲಿ.
- ಹಿಟ್ಟು ರುಬ್ಬಿದ ಬಳಿಕ ಗ್ಯಾಸ್ ಒಲೆ ಮೇಲೆ ಪಡ್ಡು ಪ್ಯಾನ್ ಇಟ್ಟು ಅದಕ್ಕೆ ತುಪ್ಪವನ್ನು ಸುರಿಸಿ, ತುಪ್ಪ ಕಾದ ಬಳಿಕ ಸ್ಪೂನ್ ಸಹಾಯದಿಂದ ಹಿಡ್ಡನ್ನು ಪ್ಯಾನ್‌ಗೆ ಹಾಕಿ ಸ್ವಲ್ಪ ಹೊತ್ತು ಮುಚ್ಚಳ ಮುಚ್ಚಿ ಬೇಯಿಸಿ, ನಂತರ ಪಡ್ಡು ಮಗುಚಿ ಅದರ ಇನ್ನೊಂದು ಭಾಗವನ್ನು ಕೂಡ ಬೇಯಲು ಬಿಡಿ. ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದರೆ ಪಡ್ಡು ಸವಿಯಲು ರೆಡಿ.
ನೀವು ಕೂಡ ಹಲಸಿನ ಹಣ್ಣಿನ ಈ ಸೀಸನ್‌ನಲ್ಲಿ ರುಚಿಕರ ಹಲಸಿನ ಹಣ್ಣಿನ ಪಡ್ಡು ಒಮ್ಮೆ ಮಾಡಿ ಸವಿಯಿರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
