ರಾಜೀವ್ ಗಾಂಧಿ ಥೀಮ್ ಪಾರ್ಕ್Image Credit source: tv9 kannada
ಕಲಬುರಗಿ, ಆಗಸ್ಟ್ 09: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ (kalaburagi) ನಗರದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಹಾಗೂ ಎಲ್ಲ ವಯೋಮಾನದವರಿಗೆ ಒಂದೇ ಸೂರಿನಡಿ ಮನರಂಜನೆ ನೀಡುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿದ್ದ ಬೃಹತ್ ‘ರಾಜೀವ್ ಗಾಂಧಿ ಥೀಮ್ ಪಾರ್ಕ್’ (Rajiv Gandhi Theme Park) ಯೋಜನೆ ಕಳೆದ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಸ್ಥಳೀಯರ ಕನಸಿನ ಕೂಸಾಗಿದ್ದ ಈ ಪಾರ್ಕ್, ಇದೀಗ ಹಳ್ಳ ಹಿಡಿದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
18 ಎಕರೆಯಲ್ಲಿ 9 ಕೋಟಿ ರೂ ವೆಚ್ಚದ ಯೋಜನೆ
ಕಲಬುರಗಿ ನಗರದ ಧರಿಯಾಪುರ ಕೋಟನೂರ್ ಬಡಾವಣೆಯ 18 ಎಕರೆ ವಿಶಾಲ ಪ್ರದೇಶದಲ್ಲಿ 2014ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಯೋಜನೆಗೆ ಚಾಲನೆ ನೀಡಿತ್ತು. ಕೆಕೆಆರ್‌ಡಿಬಿ ಮ್ಯಾಕ್ರೋ ಯೋಜನೆಯಡಿ 9 ಕೋಟಿ ರೂ ವೆಚ್ಚದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಿಸಲು ಯೋಜಿಸಲಾಗಿತ್ತು.
ಇದನ್ನೂ ಓದಿ: ನೆರೆಯಲ್ಲಿ ಶವಸಂಸ್ಕಾರದ ಹರಸಾಹಸ: ಹರಿವ ನದಿಯಲ್ಲೇ ಟ್ರ್ಯಾಕ್ಟರ್ ಓಡಿಸಿ ಅಂತ್ಯಕ್ರಿಯೆ ನೆರವೇರಿಸಿದ ಜನರು
ಈ ಪೈಕಿ 3 ಕೋಟಿ ರೂ ಹಣ ಮಂಜೂರಾಗಿದ್ದು, ಕಾಮಗಾರಿಯ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ಯೋಜನೆಯ ಪ್ರಕಾರ 7ಡಿ ಥಿಯೇಟರ್, ಫನ್ ಕಾಂಪ್ಲೆಕ್ಸ್, ಮಕ್ಕಳ ವಸತಿ, ಕೀಟಗಳ ಮನೆ ಹಾಗೂ ಮತ್ಸ್ಯಾಗಾರಗಳನ್ನು ಒಳಗೊಂಡ ಅತ್ಯಾಧುನಿಕ ಉದ್ಯಾನವನವನ್ನು ಒಂದೆರಡು ವರ್ಷಗಳಲ್ಲೇ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕಿತ್ತು.
ಕಳಪೆ ಕಾಮಗಾರಿ, ಸ್ಥಗಿತಗೊಂಡ ಕೆಲಸ
2014-15ರಲ್ಲಿ ಆರಂಭಗೊಂಡ ಕಾಮಗಾರಿಯು ಆರಂಭದಲ್ಲೇ ತೀವ್ರ ಕಳಪೆಯಿಂದ ಕೂಡಿದ್ದರಿಂದ ಕೆಲಸವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ 10 ವರ್ಷಗಳು ಕಳೆದರೂ ಕಾಮಗಾರಿಯನ್ನು ಪುನರಾರಂಭಿಸಲು ಯಾವುದೇ ಕ್ರಮಕೈಗೊಂಡಿಲ್ಲ. ಪರಿಣಾಮವಾಗಿ ಪಾರ್ಕ್‌ನಲ್ಲಿದ್ದ ನಾಲ್ಕು ಹೈಮಾಸ್ಟ್ ದೀಪಗಳು, ಆರು ಕಾರಂಜಿಗಳು, ಕಾಂಪೌಂಡ್ ಗೋಡೆಗಳು ಒಡೆದು ಹೋಗಿದ್ದು, ಕಬ್ಬಿಣದ ಗೇಟ್‌ಗಳು ತುಕ್ಕು ಹಿಡಿದಿವೆ. ಜೊತೆಗೆ ಸುತ್ತಲಿನ ಸ್ಟ್ರೀಟ್ ಲೈಟ್‌ಗಳು ಹಾಳಾಗಿದ್ದು, ಅರ್ಧಕ್ಕೆ ನಿಂತ ಕಟ್ಟಡಗಳು ದನದ ಕೊಟ್ಟಿಗೆಗಳಂತಾಗಿವೆ.
ಅನೈತಿಕ ಚಟುವಟಿಕೆ ತಾಣ; ಸಾರ್ವಜನಿಕರ ಆಕ್ರೋಶ
ಹಸಿರು ಉದ್ಯಾನವನದಿಂದ ಕಂಗೊಳಿಸಬೇಕಿದ್ದ ಈ ಪಾರ್ಕ್ನಲ್ಲಿ ಇಂದು ಎಲ್ಲೆಂದರಲ್ಲಿ ಮುಳ್ಳು ಕಂಟಿಗಳು, ಜಾಲಿ ಗಿಡಗಳು ಬೆಳೆದು ನಿಂತಿವೆ. ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಪ್ಯಾಕೆಟ್‌ಗಳು ಬಿದ್ದಿದ್ದು, ಕತ್ತಲಾಗುತ್ತಿದ್ದಂತೆ ಪುಂಡಪೋಕರಿಗಳ ತಾಣವಾಗುತ್ತಿದೆ. ಎಮ್ಮೆ-ದನಗಳು ಮೇಯುವ ಸ್ಥಳವಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ: “ನಮ್ಮ ಶಾಲೆಗೆ ರಸ್ತೆ ಮಾಡಿಸಿಕೊಡಿ”: ಯಡ್ರಾಮಿಯಲ್ಲಿ ಅಧಿಕಾರಿಗಳ ವಿರುದ್ಧ ಶಾಲಾ ಮಕ್ಕಳ ಆಕ್ರೋಶ
ಸಾರ್ವಜನಿಕರ ತೆರಿಗೆ ಹಣ ಅರೆಬರೆ ಕಾಮಗಾರಿಯಿಂದಾಗಿ ಪೋಲಾಗುತ್ತಿದ್ದು, ಈ ಕುರಿತು ಜನರು ಹಲವು ಬಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ಸ್ಥಗಿತಗೊಂಡಿರುವ ಕಾಮಗಾರಿಯನ್ನು ತಕ್ಷಣವೇ ಪುನರಾರಂಭಿಸಿ ಪೂರ್ಣಗೊಳಿಸಬೇಕು ಎಂದು ಕಲಬುರಗಿ ನಿವಾಸಿಗಳು ತೀವ್ರವಾಗಿ ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
