ಹಸಿರ ಮಡಿಲಲ್ಲಿ ಹಾಲಿನ ಹೊನಲು: ಮನಸೆಳೆಯುತ್ತಿದೆ ಕುದುರೆಮುಖದ ಹನುಮನಗುಂಡಿ ಜಲಪಾತ – Kannada News | Chikkamagaluru: Hanumangundi Falls’ Monsoon Splendor in Kudremukh National Park

ಚಿಕ್ಕಮಗಳೂರು, ಜು.8: ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂಗಾರು ಮಳೆ ಭಾರಿ ಚುರುಕಾಗಿದ್ದು, ಪ್ರಕೃತಿಯ ಸೌಂದರ್ಯ ಇಮ್ಮಡಿಗೊಂಡಿದೆ. ವಿಶೇಷವಾಗಿ ಕುದುರೆಮುಖ ಘಟ್ಟಪ್ರದೇಶದಲ್ಲಿ ಕಳೆದ ಎರಡು ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ, ಪ್ರಸಿದ್ಧ ಹನುಮನಗುಂಡಿ ಜಲಪಾತದಲ್ಲಿ ಜಲವೈಭವ ಸೃಷ್ಟಿಯಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ (Kudremukh National Park) ದಟ್ಟ ಅರಣ್ಯದ ವ್ಯಾಪ್ತಿಯಲ್ಲಿ ಬರುವ ಈ ಹನುಮನಗುಂಡಿ ಜಲಪಾತವು ಪ್ರಸ್ತುತ ಮಳೆಯ ಆರ್ಭಟಕ್ಕೆ ಮೈದುಂಬಿ ಹರಿಯುತ್ತಿದೆ. ಎತ್ತರದ ಬಂಡೆಗಳ ಮೇಲಿಂದ ಭೋರ್ಗರೆಯುತ್ತಾ, ಹಾಲಿನ ಹೊರೆಯಂತೆ ಕೆಳಕ್ಕೆ ಧುಮುಕುತ್ತಿರುವ ಜಲರಾಶಿಯ ದೃಶ್ಯ ಪ್ರವಾಸಿಗರ ಕಣ್ಣುಮನ ಸೆಳೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ಅರಣ್ಯ ವಲಯದಲ್ಲಿ ಈ ಸುಂದರ ಜಲಪಾತವಿದ್ದು, ಪಶ್ಚಿಮ ಘಟ್ಟ ಸಾಲಿನಲ್ಲಿ ಮಳೆ ಮುಂದುವರಿದಿರುವುದರಿಂದ ಜಲಪಾತಕ್ಕೆ ನೀರಿನ ಹರಿವು ಗಣನೀಯವಾಗಿ ಹೆಚ್ಚಾಗಿದೆ. ಮಲೆನಾಡಿನ ಈ ಅಪೂರ್ವ ಜಲವೈಭವವನ್ನು ಕಣ್ಣುತುಂಬಿಕೊಳ್ಳಲು ಮಳೆಯ ನಡುವೆಯೂ ಪ್ರಕೃತಿ ಪ್ರೇಮಿಗಳು ಆಗಮಿಸುತ್ತಿದ್ದಾರೆ. ಘಟ್ಟಪ್ರದೇಶ ಹಾಗೂ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮತ್ತು ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಜಲಪಾತದ ಬಳಿ ತೆರಳುವಾಗ ಸಾರ್ವಜನಿಕರು ಹಾಗೂ ಪ್ರವಾಸಿಗರು ಹೆಚ್ಚಿನ ಜಾಗರೂಕತೆ ವಹಿಸುವಂತೆ ಸ್ಥಳೀಯ ಆಡಳಿತ ಮತ್ತು ಅರಣ್ಯ ಇಲಾಖೆ ಮನವಿ ಮಾಡಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *