ಬರಿಯಾರ್‌ಪುರ, ಏಪ್ರಿಲ್ 29: ಮಂಗಲ ವಾದ್ಯಗಳು ಮೊಳಗಬೇಕಿದ್ದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ. ಮದುವೆಗೆ ಸಿದ್ಧವಾಗಲು ಸಡಗರದಿಂದ ಬ್ಯೂಟಿ ಪಾರ್ಲರ್‌ಗೆ ಹೊರಟಿದ್ದ 22 ವರ್ಷದ ವಧು, ಮನೆಗೆ ಹೆಣವಾಗಿ ಹಿಂದಿರುಗಿದ ಘೋರ ದುರಂತ ಉತ್ತರ ಪ್ರದೇಶದಲ್ಲಿ ನಡೆದಿದೆ. ಬರಿಯಾರ್‌ಪುರದ ಗೌರ್ ಕೋಥಿ ಗ್ರಾಮದ ರಚನಾ (22) ಅವರ ವಿವಾಹ(Marriage)ವು ಅದೇ ದಿನ ಸಂಜೆ ನಡೆಯಬೇಕಿತ್ತು. ವಧುವಿನ ಅಲಂಕಾರಕ್ಕಾಗಿ ರಚನಾ ತನ್ನ ಕಿರಿಯ ಸಹೋದರನೊಂದಿಗೆ ಬೈಕ್ನಲ್ಲಿ ಹತ್ತಿರದ ಬ್ಯೂಟಿ ಪಾರ್ಲರ್‌ಗೆ ಹೊರಟಿದ್ದರು. ಆದರೆ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದೆ, ಇದೇ ವೇಳೆ ಎದುರುಗಡೆಯಿಂದ ವೇಗವಾಗಿ ಬಂದ ಟ್ರಕ್ ರಚನಾ ಮೇಲೆ ಹರಿದಿದೆ.
ಅಪಘಾತದ ತೀವ್ರತೆಗೆ ರಚನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಬಂದಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಮಗಳ ಮದುವೆ ಮುಗಿಸಿ ಬೀಳ್ಕೊಡಬೇಕಿದ್ದ ತಂದೆ ಮತ್ತು ಕುಟುಂಬಸ್ಥರು ಈ ಸುದ್ದಿಯನ್ನು ಕೇಳಿ ದಿಗ್ಭ್ರಾಂತರಾಗಿದ್ದಾರೆ. ವರನ ಕಡೆಯವರು ಮೆರವಣಿಗೆಯೊಂದಿಗೆ ಬರಬೇಕಿದ್ದ ಸಮಯದಲ್ಲಿ, ಮಗಳ ಶವಯಾತ್ರೆ ನಡೆಸಬೇಕಾದ ಅನಿವಾರ್ಯತೆ ಆ ತಂದೆಗೆ ಎದುರಾಗಿದೆ.
ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಟ್ರೇಲರ್ ಅನ್ನು ವಶಪಡಿಸಿಕೊಂಡಿದ್ದು, ಚಾಲಕನನ್ನು ಬಂಧಿಸಿದ್ದಾರೆ. ಟ್ರೇಲರ್ ಅಡಿಯಲ್ಲಿ ಸಿಲುಕಿ ವಧು ಸಾವನ್ನಪ್ಪಿದ್ದಾರೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ದೀಪಕ್ ಸಿಂಗ್ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಅನಾಥಾಶ್ರಮದಲ್ಲಿ ಮದ್ವೆ ಸಂಭ್ರಮ: ಅನಾಥೆ ಬಾಳಲ್ಲಿ ಹೊಸ ಬೆಳಕು, ತುಂಬು ಮನೆ ಸೇರಿದ ಮೈನಾ
ಸ್ಥಳೀಯ ಪ್ರತಿನಿಧಿ ರಾಜೇಶ್ ರಾಜ್‌ಭರ್ ಈ ಘಟನೆಯನ್ನು ಅತ್ಯಂತ ದುರಂತ ಎಂದು ಬಣ್ಣಿಸಿದ್ದಾರೆ. ಮದುವೆಯ ಸಿದ್ಧತೆಗಳಿಗಾಗಿ ಅದ್ದೂರಿಯಾಗಿ ಸಿಂಗಾರಗೊಂಡಿದ್ದ ಮನೆ, ಈಗ ಶೋಕಸಾಗರದಲ್ಲಿ ಮುಳುಗಿದೆ. ನೂರಾರು ಕನಸು ಹೊತ್ತು ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಯುವತಿಯ ಅಕಾಲಿಕ ಮರಣವು ಇಡೀ ಗ್ರಾಮಸ್ಥರ ಕಣ್ಣುಗಳನ್ನು ತೇವಗೊಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
