ಹಾಗಲಕಾಯಿ (bitter gourd) ಅಂದ ತಕ್ಷಣ ಮೂಗು ಮುರಿಯುವವರೇ ಹೆಚ್ಚು. ಹೌದು ಹಾಗಲಕಾಯಿಯ ಕಹಿ ಅಂಶದ ಕಾರಣದಿಂದಾಗಿ ಇದನ್ನು ಯಾರು ತಿನ್ನು ಅಷ್ಟಾಇ ಇಷ್ಟಪಡುವುದಿಲ್ಲ. ಆದರೆ ಗುಣದಲ್ಲಿ ಕಹಿ ಇದ್ದರೂ ಈ ತರಕಾರಿ ಆರೋಗ್ಯಕ್ಕೆ ಸಖತ್ ಪ್ರಯೋಜನಕಾರಿ. ಇದರಲ್ಲಿ ವಿಟಮಿನ್ ಎ, ಸಿ, ಕಬ್ಬಿಣಾಂಶ, ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳು ಸಮೃದ್ಧವಾಗಿದ್ದು, ಇದು ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಹಾಗಲಕಾಯಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದಿದ್ದರೂ ಬಹುತೇಕರು ಕಹಿ ಗುಣದ ಕಾರಣ ಇದನ್ನು ಇಷ್ಟಪಡುವುದಿಲ್ಲ. ಹೀಗಿರುವಾಗ ಈ ಕೆಲವೊಂದು ಸುಲಭ ಸಲಹೆಗಳನ್ನು ಪಾಲಿಸುವ ಮೂಲಕ ನೀವು ಹಾಗಲಕಾಯಿಯ ಪೌಷ್ಟಿಕಾಂಶದ ಮೌಲ್ಯಕ್ಕೆ ಧಕ್ಕೆಯಾಗದಂತೆ ಅದರ ಕಹಿಯನ್ನು ತೊಡೆದುಹಾಕಬಹುದು ಮತ್ತು ಹಾಗಲಕಾಯಿಯ ರುಚಿಯಾದ ಭಕ್ಷ್ಯಗಳನ್ನು ತಯಾರಿಸಿ ತಿನ್ನುವ ಮೂಲಕ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಹಾಗಲಕಾಯಿ ಕಹಿ ತೆಗೆಯುವ ವಿಧಾನ:
ಉಪ್ಪು: ಹಾಗಲಕಾಯಿಯ ಕಹಿಯನ್ನು ತೆಗೆದುಹಾಕಲು, ನೀವು ಉಪ್ಪನ್ನು ಬಳಸಬಹುದು. ಹಾಗಲಕಾಯಿಯನ್ನು ಸಿಪ್ಪೆ ತೆಗೆದು ಕತ್ತರಿಸಿ, ಅದರ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ, ಒಂದು ಗಂಟೆ ಹಾಗೆಯೇ ಬಿಡಿ. ಉಪ್ಪು ಕಹಿ ರಸವನ್ನು ಹೊರಹಾಕುತ್ತದೆ. ನಂತರ, ಹಾಗಲಕಾಯಿಯನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಇದು ಕಹಿಯನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ.
ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿ: ಕತ್ತರಿಸಿದ ಹಾಗಲಕಾಯಿಯನ್ನು 15-20 ನಿಮಿಷಗಳ ಕಾಲ ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸುವುದರಿಂದ ಅದರ ಕಹಿ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಬೇಕಾದರೆ ನೀವು ಸ್ವಲ್ಪ ಉಪ್ಪನ್ನು ಕೂಡ ಸೇರಿಸಬಹುದು.
ನಿಂಬೆ ರಸ: ತುಂಡರಿಸಿದ ಹಾಗಲಕಾಯಿ ಮೇಲೆ ಸುರಿಯಿರಿ ಮತ್ತು 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಿಂಬೆಯ ಹುಳಿಯು ಹಾಗಲಕಾಯಿಯ ಕಹಿಯನ್ನು ಸಮತೋಲನಗೊಳಿಸುತ್ತದೆ.
ವಿನೆಗರ್ ಮತ್ತು ಸಕ್ಕರೆಯ ಬಳಕೆ: ಹಾಗಲಕಾಯಿಯನ್ನು ವಿನೆಗರ್ ಮತ್ತು ಸ್ವಲ್ಪ ಸಕ್ಕರೆಯಲ್ಲಿ ಸ್ವಲ್ಪ ಹೊತ್ತು ಮ್ಯಾರಿನೇಟ್ ಮಾಡಿ. ವಿನೆಗರ್ ನ ಆಮ್ಲೀಯ ಗುಣ ಮತ್ತು ಸಕ್ಕರೆಯ ಸಿಹಿ ರುಚಿ ಹಾಗಲಕಾಯಿಯ ಕಹಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೊಸರು ಬಳಸಿ: ಹಾಗಲಕಾಯಿಯ ಕಹಿಯನ್ನು ತೆಗೆದುಹಾಕಲು ನೀವು ಮೊಸರನ್ನು ಸಹ ಬಳಸಬಹುದು. ಮೊದಲು ಹಾಗಲಕಾಯಿಯನ್ನು ತೊಳೆದು ಕತ್ತರಿಸಿ. ನಂತರ, ಅದನ್ನು ಮೊಸರು ಅಥವಾ ಮಜ್ಜಿಗೆಯಲ್ಲಿ ಸ್ವಲ್ಪ ಸಮಯ ನೆನೆಸಿಡಿ. ಇದು ಹಾಗಲಕಾಯಿಯ ಕಹಿಯನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಅಡುಗೆ ಮಾಡುವ ಮೊದಲು ಕೋಳಿ ಮಾಂಸವನ್ನು ತೊಳೆಯಬಾರದಂತೆ? ಏಕೆ ಗೊತ್ತಾ?
ಎಣ್ಣೆ ಬಳಸಿ: ಹಾಗಲಕಾಯಿಯನ್ನು ಎಣ್ಣೆಯಲ್ಲಿ ಹುರಿಯುವುದರಿಂದ ಅದರ ಕಹಿ ನಿವಾರಣೆಯಾಗುತ್ತದೆ. ಇದನ್ನು ಮಾಡಲು, ಹಾಗಲಕಾಯಿಯನ್ನು ಕತ್ತರಿಸಿ, ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಅದರಲ್ಲಿ ಹಾಗಲಕಾಯಿಯನ್ನು ಹುರಿಯಿರಿ. ಇದು ಕಹಿಯನ್ನು ತೆಗೆದುಹಾಕುವುದಲ್ಲದೆ, ತರಕಾರಿಯ ರುಚಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ಬೆಲ್ಲ ಅಥವಾ ಸಕ್ಕರೆ ಸೇರಿಸಿ: ಹಾಗಲಕಾಯಿಯ ಕಹಿಯನ್ನು ನಿವಾರಿಸಲು, ನೀವು ಬೆಲ್ಲ ಅಥವಾ ಸಕ್ಕರೆಯನ್ನು ಬಳಸಬಹುದು. ಅಡುಗೆ ಮಾಡುವಾಗ ಸ್ವಲ್ಪ ಬೆಲ್ಲ ಅಥವಾ ಸಕ್ಕರೆಯನ್ನು ಸೇರಿಸಿ. ಇದು ಕಹಿಯನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ ಮತ್ತು ಅಡುಗೆಯ ರುಚಿಯನ್ನು ಸುಧಾರಿಸುತ್ತದೆ.
ಈ ಸುಲಭ ಟ್ರಿಕ್ಸ್‌ಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ಹಾಗಲಕಾಯಿಯ ಕಹಿಯನ್ನು ಕಡಿಮೆ ಮಾಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
