ನವದೆಹಲಿ, ಜುಲೈ 14: ಇರಾನ್ (Iran War) ಮತ್ತು ಅಮೆರಿಕದ ನಡುವಿನ ಸಂಘರ್ಷದ ಫಲವಾಗಿ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಬೇರೆ ದೇಶಗಳ ಹಡಗುಗಳು ಸಂಚರಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಲ್ಲಿ ಭಾರತೀಯ ಓರ್ವ ನಾವಿಕ ಮೃತಪಟ್ಟಿದ್ದಾರೆ ಮತ್ತು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಇರಾನ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, ಹಡಡುಗಳ ಮೇಲಿನ ದಾಳಿಯನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿದೆ. ಹಾಗೇ, ಭಾರತ ಇರಾನಿನ ರಾಯಭಾರಿಗೆ ಸಮನ್ಸ್ ಕೂಡ ನೀಡಿದೆ. ಇರಾನ್ ಜೊತೆ ಉತ್ತಮ ಸಂಬಂಧ ಹೊಂದಿದ್ದರೂ ಭಾರತದ 2 ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿತ್ತು.
ಈ ಮೂಲಕ ಹಾರ್ಮುಜ್ ಜಲಸಂಧಿಯಲ್ಲಿ ಭಾರತದ 2 ವಾಣಿಜ್ಯ ಹಡಗುಗಳಾದ ‘ಎಂವಿ ಅಲ್ ಬಾಹಿಯಾ’ (MT Al Bahiyah) ಮತ್ತು ‘ಎಂವಿ ಮೊಂಬಾಸಾ’ (MT Mombasa) ಮೇಲಿನ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಇದನ್ನು ನಾವಿಕರನ್ನು ಗುರಿಯಾಗಿಸಿಕೊಂಡು ನಡೆಸಲಾದ ಹಿಂಸಾತ್ಮಕ ಕೃತ್ಯ ಎಂದು ಅಸಮಾಧಾನ ಹೊರಹಾಕಿರುವ ಭಾರತ, ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸುವ ಇಂತಹ ದಾಳಿಗಳು ತಕ್ಷಣವೇ ನಿಲ್ಲಬೇಕು ಎಂಬ ಕಠಿಣ ಸಂದೇಶ ರವಾನಿಸಿದೆ.
ಮಾತುಕತೆ ನಡೆಸಿ ಎಂದು ಭಾರತ ಸಲಹೆ:
ಹೀಗೆ ಸಿಕ್ಕ ಸಿಕ್ಕ ಹಡಗುಗಳ ಮೇಲೆ ದಾಳಿ ನಡೆಸುವ ಬದಲಾಗಿ ಪಶ್ಚಿಮ ಏಷ್ಯಾದಲ್ಲಿ ಶಾಂತಿ, ಸ್ಥಿರತೆ ಮತ್ತು ಭದ್ರತೆಯನ್ನು ಮರುಸ್ಥಾಪಿಸಲು ಎಲ್ಲಾ ಕಡೆಯವರು ತಕ್ಷಣವೇ ಹಗೆತನವನ್ನು ಕೊನೆಗೊಳಿಸಿ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳಬೇಕು ಎಂದು ವಿದೇಶಾಂಗ ಸಚಿವಾಲಯವು ಒತ್ತಾಯಿಸಿದೆ. ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಮುಕ್ತ ಸಮುದ್ರ ವ್ಯಾಪಾರ ಮತ್ತು ನೌಕಾಯಾನ ಮುಂದುವರಿಯಲು ವಾಣಿಜ್ಯ ಹಡಗುಗಳು ಹಾಗೂ ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಗಳು ನಿಲ್ಲಲೇಬೇಕು ಎಂದು ಒತ್ತಿಹೇಳಿದೆ.
ಇದನ್ನೂ ಓದಿ: ಇರಾನ್‌ನಿಂದ ಹಾರ್ಮುಜ್ ಜಲಸಂಧಿ ಬಂದ್, ಹಡಗಿನ ಮೇಲೆ ದಾಳಿ ಬೆನ್ನಲ್ಲೇ ಅಮೆರಿಕದಿಂದ ಭೀಕರ ಪ್ರತೀಕಾರ
ಇರಾನ್ ರಾಜತಾಂತ್ರಿಕರಿಗೆ ಭಾರತದ ಸಮನ್ಸ್:
ಹಾರ್ಮುಜ್ ಜಲಸಂಧಿಯಲ್ಲಿ ಯುಎಇ ಒಡೆತನದ 2 ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಓರ್ವ ಭಾರತೀಯ ಸಿಬ್ಬಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಈ ಘಟನೆಗೆ ನವದೆಹಲಿ ತೀವ್ರವಾಗಿ ಪ್ರತಿಕ್ರಿಯಿಸಿದೆ. ಇಂದು ಬೆಳಿಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ನವದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಯ ಡೆಪ್ಯುಟಿ ಚೀಫ್ ಆಫ್ ಮಿಷನ್ ಮೊಹಮ್ಮದ್ ಜವಾದ್ ಹೊಸೇನಿ ಸೇರಿದಂತೆ ಇರಾನ್ ರಾಜತಾಂತ್ರಿಕರಿಗೆ ಸಮನ್ಸ್ ಜಾರಿಗೊಳಿಸಿ ಕಚೇರಿಗೆ ಕರೆಸಿಕೊಂಡಿದೆ. “ಇರಾನ್‌ನ ಉಪ ರಾಯಭಾರಿಯನ್ನು ಕರೆಸಿಕೊಂಡು ಈ ಭೀಕರ ದಾಳಿಗಳ ವಿರುದ್ಧ ಭಾರತದ ಬಲವಾದ ಪ್ರತಿಭಟನೆಯನ್ನು ದಾಖಲಿಸಲಾಗಿದೆ” ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
ಭಾರತೀಯ ಸಿಬ್ಬಂದಿಗೆ ಆದ ಹಾನಿಗಳೇನು?:
ಎಂವಿ ಅಲ್ ಬಾಹಿಯಾ ಹಡಗಿನಲ್ಲಿದ್ದ 12 ಭಾರತೀಯ ಸಿಬ್ಬಂದಿ ಪೈಕಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮತ್ತೊಬ್ಬರು ಗಾಯಗೊಂಡಿದ್ದಾರೆ. ಎಂವಿ ಮೊಂಬಾಸಾ ಹಡಗಿನಲ್ಲಿದ್ದ 18 ಭಾರತೀಯ ನಾಗರಿಕರ ಪೈಕಿ 9 ಜನರು ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೃತಪಟ್ಟ ನಾವಿಕನ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿರುವ ಭಾರತದ ವಿದೇಶಾಂಗ ಸಚಿವಾಲಯ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ. ಸಂತ್ರಸ್ತ ಭಾರತೀಯ ಸಿಬ್ಬಂದಿಗೆ ಅಗತ್ಯವಿರುವ ಎಲ್ಲಾ ನೆರವು ಮತ್ತು ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ನಿರಂತರವಾಗಿ ಶ್ರಮಿಸುತ್ತಿದೆ. ಅಲ್ಲಿನ ಸ್ಥಳೀಯ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿರುವ ಭಾರತೀಯ ಮಿಷನ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಕ್ಷಿಪಣಿ ಅಬ್ಬರ: ಯುಎಇ ತೈಲ ನೌಕೆಗಳ ಮೇಲೆ ದಾಳಿ, ಓರ್ವ ಭಾರತೀಯ ಸಾವು
ದಾಳಿಯನ್ನು ಸಮರ್ಥಿಸಿಕೊಂಡ ಇರಾನ್:
ಯುಎಇ ಧ್ವಜ ಹೊತ್ತಿದ್ದ ಈ ಎರಡು ವಾಣಿಜ್ಯ ಹಡಗುಗಳ ಮೇಲೆ ತಾನೇ ದಾಳಿ ನಡೆಸಿರುವುದನ್ನು ಇರಾನ್ ಒಪ್ಪಿಕೊಂಡಿದೆ. ” ಈ ಹಡಗುಗಳು ನಮ್ಮ ನೌಕಾಯಾನ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದವು ಮತ್ತು ಜಲಸಂಧಿಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದವು, ಹಾಗಾಗಿ ದಾಳಿ ಮಾಡಿದ್ದೇವೆ” ಎಂದು ಇರಾನ್ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.
ಯುಎಇ ಖಂಡನೆ:
ಆದರೆ, ಯುಎಇ ರಕ್ಷಣಾ ಸಚಿವಾಲಯವು ಇರಾನ್‌ನ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಇದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದ್ದು, ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಗೆ ಧಕ್ಕೆ ತಂದಿದೆ ಎಂದು ಯುಎಇ ಹೇಳಿದೆ. ಇತ್ತೀಚೆಗೆ ಇರಾನ್ ಮೇಲೆ ಅಮೆರಿಕ ಭಾರಿ ದಾಳಿ ನಡೆಸಿದ ಬೆನ್ನಲ್ಲೇ, ಇರಾನ್ ಈ ರೀತಿಯ ಪ್ರತಿಕಾರ ಕ್ರಮಕ್ಕೆ ಮುಂದಾಗಿರುವುದು ಗಲ್ಫ್ ವಲಯದಲ್ಲಿ ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಹಾರ್ಮುಜ್ ಜಲಸಂಧಿ ಯಾಕೆ ಮುಖ್ಯ?:
ಹಾರ್ಮುಜ್ ಜಲಸಂಧಿಯು ಜಾಗತಿಕವಾಗಿ ಅತ್ಯಂತ ಕಾರ್ಯತಂತ್ರದ ಸಮುದ್ರ ಮಾರ್ಗಗಳಲ್ಲಿ ಒಂದಾಗಿದೆ. ವಿಶ್ವದ ಒಟ್ಟು ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ (LNG) ರಫ್ತಿನ ಬಹುದೊಡ್ಡ ಪಾಲು ಇದೇ ಜಲಮಾರ್ಗದ ಮೂಲಕ ಸಾಗುತ್ತದೆ. ಹಾರ್ಮುಜ್ ಜಲಸಂಧಿಯು ಜಾಗತಿಕವಾಗಿ ಅತ್ಯಂತ ಪ್ರಮುಖವಾಗಿದ್ದು, ವಿಶ್ವದ ಒಟ್ಟು ತೈಲ ಪೂರೈಕೆಯ ಐದನೇ ಒಂದು ಭಾಗ (ಶೇ. 20) ಇದೇ ಮಾರ್ಗದ ಮೂಲಕ ಸಾಗುತ್ತದೆ. ಈ ಜಲಮಾರ್ಗದಲ್ಲಿ ಉಂಟಾಗುವ ಸಣ್ಣ ಅಡಚಣೆಯೂ ಜಾಗತಿಕ ಇಂಧನ ಪೂರೈಕೆ, ವಾಣಿಜ್ಯ ಹಡಗು ಸಂಚಾರ ಮತ್ತು ಅಂತಾರಾಷ್ಟ್ರೀಯ ವ್ಯಾಪಾರದ ಮೇಲೆ ಭಾರಿ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿಯೇ ವಾಣಿಜ್ಯ ಹಡಗುಗಳ ಮೇಲಿನ ಇಂತಹ ದಾಳಿಗಳು ಇಡೀ ಜಗತ್ತಿಗೆ ತೀವ್ರ ಕಳವಳದ ವಿಷಯವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
