ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೊಳಗಾದ ಹಡಗಿನಲ್ಲಿ ಬೆಂಕಿ ಅವಘಡ; ಸಿಬ್ಬಂದಿ ರಕ್ಷಣೆ – Kannada News | Ship caught fire in the strategic Strait of Hormuz following a missile strike crew rescued

ಟೆಹ್ರಾನ್, ಜುಲೈ 20: ವಿಶ್ವದ ಅತ್ಯಂತ ಪ್ರಮುಖ ತೈಲ ಸಾರಿಗೆ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಸರಕು ಸಾಗಣೆ ಹಡಗೊಂದರ ಮೇಲೆ ಭೀಕರ ದಾಳಿ ನಡೆದಿದ್ದು, ಹಡಗು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಈ ದಾಳಿಯ ಬೆನ್ನಲ್ಲೇ ರಕ್ಷಣಾ ಪಡೆಗಳು ತಕ್ಷಣ ಕಾರ್ಯಪ್ರವೃತ್ತರಾಗಿದ್ದರಿಂದ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಈ ದಾಳಿಯ ತೀವ್ರತೆಗೆ ಹಡಗಿನಲ್ಲಿ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಇಡೀ ನೌಕೆಯನ್ನು ಆವರಿಸಿದೆ. ಹಡಗಿನಿಂದ ದಟ್ಟವಾದ ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮುತ್ತಿರುವುದು ಕಂಡುಬಂದಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಕ್ಷಿಪಣಿ ದಾಳಿಯ ಪರಿಣಾಮವಾಗಿ ಸರಕು ಸಾಗಣೆ ಹಡಗೊಂದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಅದರಲ್ಲಿದ್ದ ನಾವಿಕರನ್ನು ತಕ್ಷಣವೇ ಸ್ಥಳಾಂತರಿಸಲಾಗಿದೆ. ಅವರೆಲ್ಲರೂ ಸುರಕ್ಷಿತರಾಗಿದ್ದಾರೆ. ಅಮೆರಿಕದ ಈ ಮಿಲಿಟರಿ ಕ್ರಮದ ವಿರುದ್ಧ ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಗೆ (IAEA) ಇರಾನ್ ದೂರು ನೀಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಹಡಗಿನ ಮೇಲಿನ ದಾಳಿ ಮತ್ತು ಇರಾನ್‌ನ ಒಳಗಿರುವ ಪರಮಾಣು ಕೇಂದ್ರಗಳ ಮೇಲಿನ ಅಮೆರಿಕದ ವೈಮಾನಿಕ ದಾಳಿಗಳು ಗಲ್ಫ್ ಪ್ರದೇಶದಲ್ಲಿ ಸಂಪೂರ್ಣ ಯುದ್ಧದ ಭೀತಿಯನ್ನು ಹುಟ್ಟುಹಾಕಿದ್ದು, ಜಾಗತಿಕ ತೈಲ ಪೂರೈಕೆಯಲ್ಲಿ ಭಾರಿ ಏರುಪೇರಾಗುವ ಆತಂಕ ಮೂಡಿದೆ.

ಇದನ್ನೂ ಓದಿ: ಮಹಾ ಒಪ್ಪಂದವನ್ನು ಕಿತ್ತೊಗೆದ ಇರಾನ್: ಹಾರ್ಮುಜ್ ಕಡಲಿನಲ್ಲಿ ಅಮೆರಿಕ-ಇರಾನ್ ನಡುವೆ ಭೀಕರ ಸಂಘರ್ಷ

“ಅಮೆರಿಕ ಎಸಗಿರುವ ಈ ಅಪರಾಧವನ್ನು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ಗವರ್ನರ್‌ಗಳ ಮಂಡಳಿ ಮತ್ತು ಮಹಾನಿರ್ದೇಶಕರು ಸ್ಪಷ್ಟ ಮಾತುಗಳಲ್ಲಿ ಖಂಡಿಸಬೇಕು. ಐಎಇಎ ತನ್ನ ನಿಲುವನ್ನು ಜಗತ್ತಿನ ಮುಂದೆ ಬಹಿರಂಗಪಡಿಸಬೇಕು ಎಂದು ಇರಾನ್ ನಿರೀಕ್ಷಿಸುತ್ತದೆ” ಎಂದು ಟೆಹ್ರಾನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೇಯ್ ಹೇಳಿದ್ದಾರೆ.

ಇರಾನ್ ಮೇಲೆ ಅಮೆರಿಕದ ಬಾಂಬ್ ದಾಳಿ:

ಅಮೆರಿಕ ಇಂದು (ಸೋಮವಾರ) ಮುಂಜಾನೆ ಇರಾನ್ ಮೇಲೆ ಹೊಸದಾಗಿ ಬಾಂಬ್ ದಾಳಿಯ ಸರಣಿಯನ್ನು ಪ್ರಾರಂಭಿಸಿದೆ. ಇದು ಅಮೆರಿಕ ನಡೆಸುತ್ತಿರುವ ಸತತ 9ನೇ ರಾತ್ರಿಯ ಮಿಲಿಟರಿ ಕಾರ್ಯಾಚರಣೆಯಾಗಿದೆ. ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಪ್ರಮುಖ ಸೇತುವೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕದ ಸೆಂಟ್ರಲ್ ಕಮಾಂಡ್ ಈ ವೈಮಾನಿಕ ದಾಳಿಗಳನ್ನು ನಡೆಸುತ್ತಿದೆ.

ಅಮೆರಿಕದ ಸೆಂಟ್ರಲ್ ಕಮಾಂಡ್ ತನ್ನ ಅಧಿಕೃತ ಪ್ರಕಟಣೆಯಲ್ಲಿ, ವಾಣಿಜ್ಯ ಹಡಗುಗಳು ಮತ್ತು ನಾಗರಿಕ ನಾವಿಕರ ಮೇಲೆ ದಾಳಿ ಮಾಡಲು ಇರಾನ್ ಬಳಸುತ್ತಿರುವ ಮಿಲಿಟರಿ ಸಾಮರ್ಥ್ಯವನ್ನು ಕುಂಠಿತಗೊಳಿಸಲು ನಮ್ಮ ದಾಳಿಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ನಾವಿಕರನ್ನು ನಿಯೋಜಿಸಬೇಡಿ; ಹಡಗು ಕಂಪನಿ ಮಾಲೀಕರಿಗೆ ಭಾರತ ಆದೇಶ

‘ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್’ (UKMTO) ಈ ಘಟನೆಯನ್ನು ದೃಢಪಡಿಸಿದ್ದು, “ಹಡಗಿನಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿ ಹೊರಬಂದಿದ್ದು, ಅವರನ್ನು ಟಗ್ ಬೋಟ್ ಮೂಲಕ ರಕ್ಷಿಸಲಾಗಿದೆ” ಎಂದು ತಿಳಿಸಿದೆ. ಒಮಾನ್‌ನ ಕುಮ್ಜಾರ್‌ನಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿ ಈ ಭೀಕರ ದಾಳಿ ನಡೆದಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಸಮರ ಹೆಚ್ಚಳ:

ಈ ಸಮುದ್ರ ಮಾರ್ಗದ ಮೇಲಿನ ದಾಳಿಯು ಪ್ರಾದೇಶಿಕ ರಾಜಕೀಯ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವಾಗ ಒಮಾನ್‌ಗೆ ಹತ್ತಿರವಿರುವ ಮಾರ್ಗವನ್ನು ಬಳಸುವಂತೆ ಅಮೆರಿಕ ಮಿಲಿಟರಿ ತನ್ನ ಹಡಗುಗಳಿಗೆ ಸಲಹೆ ನೀಡಿದೆ. ಇದಕ್ಕೆ ಪ್ರತೀಕಾರವಾಗಿ ಇರಾನ್ ಈ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದು, ಜಾಗತಿಕವಾಗಿ ವ್ಯಾಪಾರವಾಗುವ ಶೇ. 20ರಷ್ಟು ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯಾಗುವ ಈ ಪ್ರಮುಖ ಸಮುದ್ರ ಮಾರ್ಗದ ಮೇಲೆ ತನ್ನದೇ ಸಾರ್ವಭೌಮತ್ವ ಇರಬೇಕೆಂದು ಇರಾನ್ ಪಟ್ಟು ಹಿಡಿದಿದೆ. ಇದರ ಪರಿಣಾಮವಾಗಿ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಕಡಲ ಸಾರಿಗೆಯು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಜೋರ್ಡಾನ್ ಮೇಲೆ ಇರಾನ್ ಕ್ಷಿಪಣಿ ದಾಳಿ:

ಇತ್ತ ಇರಾನ್ ಸಹ ತೀವ್ರ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದು, ಜೋರ್ಡಾನ್ ದೇಶದ ಮೇಲೆ ಕ್ಷಿಪಣಿಗಳನ್ನು ಉಡಾಯಿಸಿದೆ. ಇದು ನೆರೆಯ ಇಸ್ರೇಲ್ ದೇಶಕ್ಕೂ ಯುದ್ಧ ಹರಡುವ ಭೀತಿಯನ್ನು ಹುಟ್ಟುಹಾಕಿದೆ. ಕಳೆದ ತಿಂಗಳು ನಡೆದಿದ್ದ ತಾತ್ಕಾಲಿಕ ಕದನ ವಿರಾಮ ಒಪ್ಪಂದವು ಸಂಪೂರ್ಣವಾಗಿ ಮುರಿದುಬಿದ್ದಿದ್ದು, ಅಮೆರಿಕ-ಇರಾನ್ ದೇಶಗಳು ಈಗ ಪೂರ್ಣ ಪ್ರಮಾಣದ ಯುದ್ಧದತ್ತ ಮುನ್ನುಗ್ಗುತ್ತಿವೆ. ಇರಾನ್‌ನ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ತಡೆಯಲು ಕುವೈತ್, ಬಹ್ರೇನ್ ಮತ್ತು ಜೋರ್ಡಾನ್ ದೇಶಗಳು ತಮ್ಮ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *