
ನವದೆಹಲಿ, ಮಾರ್ಚ್ 27: ಭಾರತ ಈ ತಿಂಗಳು (ಮಾರ್ಚ್) ಆಪರೇಷನ್ ಊರ್ಜಾ ಸುರಕ್ಷಾ (Operation Oorja Suraksha) ಆರಂಭಿಸಿದೆ. ಭಾರತೀಯ ನೌಕಾಪಡೆಯ ವಿಶೇಷ ಕಾರ್ಯಾಚರಣೆಯಾದ ಇದರಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ (Hormuz Strait) ಭಾರತೀಯ ತೈಲ ನೌಕೆಗಳ ಸಾಗಣೆಗೆ ರಕ್ಷಣೆ ಒದಗಿಸುವುದು ಮುಖ್ಯ ಉದ್ದೇಶವಾಗಿದೆ. ಯುದ್ಧದ ಬಳಿಕ ಹಾರ್ಮುಜ್ ಜಲಸಂಧಿಯು ಅಕ್ಷರಶಃ ಇರಾನ್ ಹತೋಟಿಯಲ್ಲಿದೆ. ಭಾರತ ಸೇರಿದಂತೆ ಕೆಲವೇ ಆಯ್ದ ದೇಶಗಳ ತೈಲ ಹಡಗುಗಳಿಗೆ ಸಾಗಲು ಇರಾನ್ ಅನುಮತಿ ಕೊಟ್ಟಿದೆ. ಆದರೂ ತ್ರಿವರ್ಣ ಧ್ವಜ ಲಾಂಛನದ ತೈಲ ಹಡಗುಗಳಿಗೆ ಭದ್ರತೆ ಒದಗಿಸುವ ಉದ್ದೇಶದಿಂದ ಆಪರೇಷನ್ ಊರ್ಜಾ ಸುರಕ್ಷಾ ಕೈಗೊಳ್ಳಲಾಗಿದೆ.
ಊರ್ಜಾ ಎಂದರೆ ಇಂಧನ. ಈ ಕಾರ್ಯಾಚರಣೆಯ ಉದ್ದೇಶ ಇಂಧನ ಸುರಕ್ಷತೆಯಾಗಿದೆ. ಸದ್ಯ ಬಹಳ ಅಪಾಯಕಾರಿಯಾಗಿ ಮಾರ್ಪಟ್ಟಿರುವ ಹಾರ್ಮುಜ್ ಜಲಸಂಧಿ, ಓಮನ್ ಗಲ್ಫ್ ಮೂಲಕ ಕಚ್ಛಾ ತೈಲ, ಎಲ್ಎನ್ಜಿ ಮತ್ತು ಎಲ್ಪಿಜಿ ಹೊತ್ತ ಭಾರತೀಯ ಹಡಗುಗಳು ಸುರಕ್ಷಿತವಾಗಿ ಭಾರತವನ್ನು ತಲುಪುವುದು ಈ ಆಪರೇಷನ್ನ ಗುರಿ.
ಇದನ್ನೂ ಓದಿ: ಗೃಹೇತರ ಬಳಕೆಯ ಎಲ್ಪಿಜಿ, ಹೆಚ್ಚುವರಿ ಶೇ. 20 ಹಂಚಿಕೆ; ಒಟ್ಟು ಪೂರೈಕೆ ಶೇ. 70ಕ್ಕೆ ಏರಿಕೆ
ಆಪರೇಷನ್ ಊರ್ಜಾ ಸುರಕ್ಷಾದಲ್ಲಿ ನೌಕಾಪಡೆಯು ತನ್ನ ಫ್ರಂಟ್ಲೈನ್ ಸಮರನೌಕೆಗಳನ್ನು ಗಲ್ಫ್ನತ್ತ ಕಳುಹಿಸಿಕೊಡುತ್ತದೆ. ಭಾರತೀಯ ತೈಲ ನೌಕೆಗಳು ಗಲ್ಫ್ ದಾಟಿ ಬರಲು ಅನುವಾಗುವ ರೀತಿಯಲ್ಲಿ ಅದರ ಹಿಂದೆ ಮುಂದೆ ಸಮರನೌಕೆಗಳನ್ನು ನಿಯೋಜಿಸಲಾಗುತ್ತದೆ. ಹಡಗುಗಳನ್ನು ಯಾರಾದರೂ ಹೈಜಾಕ್ ಮಾಡುವುದೋ, ಬೇರೆಡೆ ವಿಮುಖಗೊಳಿಸುವುದೋ ಇತ್ಯಾದಿ ಮಾಡದಂತೆ ನೌಕಾಪಡೆ ಎಚ್ಚರ ವಹಿಸುತ್ತದೆ.
ಹಾರ್ಮುಜ್ ಜಲಸಂಧಿ ಮತ್ತು ಓಮನ್ ಗಲ್ಫ್ನಲ್ಲಿ ಭಾರತೀಯ ಹಡಗುಗಳಿಗೆ ಸಾಗಲು ಇರಾನ್ ಅನುಮತಿಸಿದೆ. ಆದರೆ ಹೌತಿಸ್ ಬಂಡುಕೋರರು ಅಥವಾ ಇನ್ಯಾರಾದರೂ ತೈಲ ನೌಕೆಗಳಿಗೆ ಹಾನಿ ಮಾಡುವ ಸಾಧ್ಯತೆ ಇದ್ದೇ ಇದೆ. ಹೀಗಾಗಿ, ನೌಕೆಗಳ ರಕ್ಷಣೆ ಉದ್ದೇಶದಿಂದ ಮಾತ್ರವೇ ಭಾರತೀಯ ನೌಕಾಪಡೆಯು ಆಪರೇಷನ್ ಊರ್ಜಾ ಸುರಕ್ಷಾ ಕೈಗೊಂಡಿರುವುದು.
ಇದನ್ನೂ ಓದಿ: ಅಬಕಾರಿ ಸುಂಕ ಕಡಿಮೆಗೊಂಡರೂ ಪೆಟ್ರೋಲ್, ಡೀಸಲ್ ಬೆಲೆಯಲ್ಲಿ ಆಗಲ್ಲ ಇಳಿಕೆ; ಏನು ಕಾರಣ?
ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಧ್ವಜವಿರುವ ಹಲವು ಹಡಗುಗಳಿವೆ. ಇವುಗಳ ಪೈಕಿ ಎಲ್ಪಿಜಿ ಹೊತ್ತಿರುವ 22 ಹಡಗುಗಳನ್ನು ಆಪರೇಷನ್ ಊರ್ಜಾ ಸುರಕ್ಷಾ ಮೂಲಕ ರಕ್ಷಣೆ ಕೊಡಲು ಆಯ್ದುಕೊಳ್ಳಲಾಗಿದೆ. ನೌಕಾಪಡೆಯ ಐದು ಸಮರನೌಕೆಗಳು ಈ ಆಪರೇಷನ್ನಲ್ಲಿ ಇರುತ್ತವೆ. ಮಲ್ಟಿರೋಲ್ ಫ್ರಿಗೇಟ್ಸ್, ಡೆಸ್ಟ್ರಾಯರ್ಗಳು ಇದರಲ್ಲಿ ಇರುತ್ತವೆ. ರಾಡಾರ್, ಕ್ಷಿಪಣಿ, ಹೆಲಿಕಾಪ್ಟರ್ ಪ್ಲಾಟ್ಫಾರ್ಮ್ಗಳು, ಆ್ಯಂಟಿ ಡ್ರೋನ್ ರಕ್ಷಣೆ, ಎಲೆಕ್ಟ್ರಾನಿಕ್ ದಾಳಿ ರಕ್ಷಣೆ ಇತ್ಯಾದಿ ಪೂರ್ಣ ಮಿಲಿಟರಿ ಸಜ್ಜಿತ ಸಮರನೌಕೆಗಳಿವು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ