Headlines

ಹಾಸನ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಕ್ಕೆ ಹತ್ತಾರು ವಿಘ್ನ: ಕಾಮಗಾರಿ ಮುಗಿಯೋದು ಯಾವಾಗ? – Kannada News | Hassan Airport Project Delays: UDAN Scheme Faces Funding and Land Acquisition Hurdles

ಹಾಸನ, ಫೆಬ್ರವರಿ 26: ನಿಧಿ ಕೊರತೆ ಹಾಗೂ ಭೂಸ್ವಾಧೀನ ಸಮಸ್ಯೆಗಳ ಕಾರಣದಿಂದ UDAN ಯೋಜನೆಯಡಿ ಹಾಸನದಲ್ಲಿ ನಿರ್ಮಾಣವಾಗುತ್ತಿರುವ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಕಾಮಗಾರಿ ವಿಳಂಬವಾಗುತ್ತಿದೆ. ಟರ್ಮಿನಲ್ ಕಟ್ಟಡ, ಏರ್ ಟ್ರಾಫಿಕ್ ಕಂಟ್ರೋಲ್ (ATC) ಗೋಪುರ, ರನ್‌ವೇ ಮತ್ತು ಏಪ್ರನ್ ಸೇರಿದಂತೆ ಶೇಕಡಾ 80ಕ್ಕೂ ಹೆಚ್ಚು ಕಾಮಗಾರಿಗಳು ಪೂರ್ಣಗೊಂಡಿದ್ದರೂ, ಹಲವು ಕೆಲಸಗಳು ಇನ್ನೂ ಬಾಕಿ ಇವೆ. ಹಾಸನ ನಗರದಿಂದ 6 ಕಿ.ಮೀ ದೂರದ ಭುವನಹಳ್ಳಿ ಗ್ರಾಮದ ಸಮೀಪ 516 ಎಕರೆ ಭೂಮಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದ್ದು, 2006ರಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್​​.ಡಿ. ದೇವೇಗೌಡರು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು.

244.33 ಎಕರೆ ಕರಾಬು ಭೂಮಿ ಒಳಗೊಂಡಂತೆ ಒಟ್ಟು 1,224.16 ಎಕರೆ ಜಾಗವನ್ನು ಸರ್ಕಾರವು ಅಂದು ಮೀಸಲಿಟ್ಟಿತ್ತು. ವಿಮಾನಯಾನ ತರಬೇತಿ ಕೇಂದ್ರ, ಎಂಆರ್‌ಒ (Maintenance, Repair and Overhaul) ಸೌಲಭ್ಯ, ಒಳನಾಡು ಕಂಟೈನರ್ ಡಿಪೋ, ಗಾಲ್ಫ್ ಮೈದಾನ, ಆತಿಥ್ಯ ಮತ್ತು ಕಲ್ಯಾಣ ಸೌಲಭ್ಯಗಳು, ತಂತ್ರಜ್ಞಾನ ಪಾರ್ಕ್, ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ರಫ್ತು ಮಾಡುವ ಮೊದಲು ಸಂಗ್ರಹಿಸಲು ದೊಡ್ಡ ಶೀತಗೃಹ ಹೊಂದಿದ ಕಾರ್ಗೋ ಟರ್ಮಿನಲ್ ಮುಂತಾದವುಗಳ ನಿರ್ಮಾಣವನ್ನು ಮೂಲ ಯೋಜನೆ ಒಳಗೊಂಡಿತ್ತು. ಆದರೆ ಆಸಕ್ತಿ ಕೊರತೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯನ್ನು ಕೈಬಿಟ್ಟು ಸರಳ ವಿಮಾನ ನಿಲ್ದಾಣದ ಯೋಜನೆಗೆ ಇದನ್ನು ರಾಜ್ಯ ಸರ್ಕಾರ ಬದಲಾಯಿಸಿತ್ತು.

ಇದನ್ನೂ ಓದಿ: ಪ್ರಸಿದ್ಧ ಹಾಸನಾಂಬೆ ಉತ್ಸವದಲ್ಲೂ ಅಕ್ರಮ; ಗೋಲ್ಮಾಲ್ ಬಗ್ಗೆ ಲೋಕಾಯುಕ್ತ ತನಿಖೆ

ನಂತರದ ದಿನಗಳಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಇದನ್ನು ಉಡಾನ್ ಯೋಜನೆಯಡಿ ಕೈಗೆತ್ತಿಕೊಂಡಿತ್ತು. ಆದರೆ ವಿಮಾನ ನಿಲ್ದಾಣ ಪ್ರದೇಶದ ಮೇಲೆ ಹೈಟೆನ್ಷನ್ ವಿದ್ಯುತ್ ತಂತಿಗಳು ಹಾದುಹೋಗಿರುವುದು ಕಾಮಗಾರಿಯನ್ನು ಮತ್ತಷ್ಟು ವಿಳಂಬಗೊಳಿಸಿತ್ತು. ತಮ್ಮ ಜಮೀನಿನಲ್ಲಿ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಲು ರೈತರು ಮುಂಗಡ ಪರಿಹಾರ ಕೇಳಿದ್ದು, ಅಂತಿಮವಾಗಿ ಅಧಿಕಾರಿಗಳು ರೈತರ ಮನವೊಲಿಸಿ ಕಂಬಗಳನ್ನು ಸ್ಥಳಾಂತರಿಸಿದ್ದರು. ಜೊತೆಗೆ ರಾಜ್ಯ ಸರ್ಕಾರ ಸಮಯಕ್ಕೆ ಸರಿಯಾಗಿ ನಿಧಿ ಬಿಡುಗಡೆ ಮಾಡದಿರುವುದೂ ಯೋಜನೆಯ ವಿಳಂಬಕ್ಕೆ ಮತ್ತೊಂದು ಪ್ರಮುಖ ಕಾರಣ ಎನ್ನಲಾಗಿದೆ.

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (KSIIDC) ಸಮೀಪದ ಗ್ರಾಮಗಳು, ವಿಮಾನ ನಿಲ್ದಾಣ ಮತ್ತು ಹಾಸನ ನಗರವನ್ನು ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕಾಗಿ ಹೊಸ ಭೂಸ್ವಾಧೀನಕ್ಕೆ 143.67 ಕೋಟಿ ಕೇಳಿದೆ. ಅಲ್ಲದೆ, ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಇನ್ನೂ 200 ಕೋಟಿ ಅಗತ್ಯವಿದೆ ಎನ್ನಲಾಗಿದೆ. ಯೋಜನೆಯಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದ್ದು, ರಾಜಕೀಯ ಇಚ್ಛಾಶಕ್ತಿ ಇದ್ದಿದ್ದರೆ ವಿಮಾನ ನಿಲ್ದಾಣ ದಶಕಗಳ ಹಿಂದೆಯೇ ಪೂರ್ಣಗೊಳ್ಳಬಹುದಿತ್ತು ಎಂಬ ಅಭಿಪ್ರಾಯಗಳು ಕೂಡ ಕೇಳಿಬಂದಿವೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *