ಹಾಸನ, ಜನವರಿ 14: ಹಾಸನ ಜಿಲ್ಲೆಯ ವಿವಿಧೆಡೆ ಸುರಿದ ಭಾರಿ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕಾಲಿಕ ಮಳೆ ಕಾಫಿ ಬೆಳೆಗಾರರನ್ನು ಕಂಗಾಲಾಗಿಸಿದೆ. ಕಟಾವು ಮಾಡಿ ಒಣಗಲು ಹಾಕಿದ್ದ ಕಾಫಿ ಬೆಳೆಗೆ ಮಳೆಯಿಂದಾಗಿ ಹಾನಿಯುಂಟಾಗಿದೆ. ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಅನಿರೀಕ್ಷಿತವಾಗಿ ಸುರಿದ ಮಳೆಯಿಂದಾಗಿ, ಕೊಯ್ಲು ಮಾಡಿ ಒಣಗಿಸಲು ಹಾಕಲಾಗಿದ್ದ ಕಾಫಿ ಬೀಜಗಳು ಮಳೆಯಲ್ಲಿ ನೆನೆದು ಸಂಪೂರ್ಣ ಹಾಳಾಗಿವೆ. ಇದರಿಂದ ಕಾಫಿ ಬೆಳೆಗಾರರು ಭಾರೀ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಮಳೆ ಹಾನಿಯಿಂದಾಗಿ ಕಾಫಿ ಹೂವುಗಳು, ಕಾಫಿ ಗಿಡಗಳು ಮತ್ತು ಒಟ್ಟಾರೆ ಕಾಫಿ ಕೃಷಿ ಮೇಲೂ ಪರಿಣಾಮ ಬೀರಿದೆ.
