ಹಾಸನ, ಮೇ 1: ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರು ಹುಚ್ಚಾಟ ನಡೆಸಿದ ಘಟನೆ ಅರಸೀಕೆರೆ ತಾಲ್ಲೂಕಿನ ಡಿ.ಎಂ.ಕುರ್ಕೆ ಗ್ರಾಮದಲ್ಲಿ ನಡೆದಿದೆ. ಬಿಯರ್ ಬಾಟಲ್ ಓಪನ್ ಮಾಡಿದಾಗ ಬಿಯರ್ ಮೈಮೇಲೆ ಚಿಮ್ಮಿದ ಎಂಬ ಸಣ್ಣ ವಿಷಯಕ್ಕೆ ಗಲಾಟೆ ಆರಂಭವಾಗಿ, ಅಂತಿಮವಾಗಿ ಬಂದೂಕು ಪ್ರದರ್ಶಿಸುವ ಹಂತಕ್ಕೆ ತಲುಪಿದೆ. ಸಿಂಗೇನಹಳ್ಳಿ ಮತ್ತು ಡಿ.ಎಂ.ಕುರ್ಕೆ ಗ್ರಾಮದ ಯುವಕರ ನಡುವೆ ಈ ಗಲಾಟೆ ನಡೆದಿದೆ. ಮಾತಿನ ಚಕಮಕಿ ಜೋರಾದಾಗ ಸಿಂಗೇನಹಳ್ಳಿ ಗ್ರಾಮದ ರಮೇಶ್ ಎಂಬಾತ ಏರ್ ಗನ್ ತಂದು ಬೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಎರಡು ಗುಂಪುಗಳ ನಡುವೆ ಬಂದೂಕು ಕಿತ್ತುಕೊಳ್ಳಲು ನೂಕಾಟ-ತಳ್ಳಾಟ ನಡೆದಿದ್ದು, ಲೋಡ್ ಆಗಿದ್ದ ಬಂದೂಕಿನಿಂದ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಈ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಘಟನೆಗೆ ಸಂಬಂಧಿಸಿದಂತೆ ರಮೇಶ್, ಮಂಜುನಾಥ್, ಮಧುಸೂದನ್ ಮತ್ತು ದರ್ಶನ್ ಎಂಬುವವರ ವಿರುದ್ಧ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
