ಹಾಸನ, ಮಾರ್ಚ್ 5: ಹಾಸನ ಮಹಾನಗರಪಾಲಿಕೆ ಎಂಜಿನಿಯರ್ ಸತ್ಯನಾರಾಯಣ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಹಾಸನದ ರವೀಂದ್ರ ನಗರದಲ್ಲಿರುವ ಸತ್ಯನಾರಾಯಣ ಅವರ ನಿವಾಸಕ್ಕೆ ಲೋಕಾಯುಕ್ತ ಡಿವೈಎಸ್ಪಿ ಸುರೇಶ್ ಕುಮಾರ್ ಮತ್ತು ಇನ್ಸ್‌ಪೆಕ್ಟರ್ ಶಿಲ್ಪಾ ನೇತೃತ್ವದ ತಂಡ ಭೇಟಿ ನೀಡಿದೆ. ಬೆಳಗ್ಗೆ 5:30ರ ಸುಮಾರಿಗೆ ಅಧಿಕಾರಿಗಳು ಮನೆಗೆ ಆಗಮಿಸಿದರೂ, ಸುಮಾರು ಒಂದುವರೆ ಗಂಟೆಗೂ ಹೆಚ್ಚು ಕಾಲ ಬಾಗಿಲು ತೆರೆಯದೆ ಸತಾಯಿಸಲಾಗಿದೆ.
ಅಧಿಕಾರಿಗಳು ಮನೆ ಬೆಲ್ ಮಾಡಿ, ಬಾಗಿಲು ಬಡಿದು, ಪರಿಶೀಲನೆಗಾಗಿ ಬಾಗಿಲು ತೆರೆಯುವಂತೆ ಸೂಚನೆ ನೀಡಿದರೂ, ಮನೆಯೊಳಗಿನಿಂದ ಯಾರೂ ಪ್ರತಿಕ್ರಿಯಿಸಿಲ್ಲ. ಅಧಿಕಾರಿಗಳು ಆಗಮಿಸಿದಾಗ ಮನೆಯಲ್ಲಿ ಲೈಟ್ ಆನ್ ಆಗಿದ್ದು, ನಂತರ ಆಫ್ ಆಗಿದೆ. ಎಸಿ ಕೂಡ ಆನ್ ಆಗಿ ನಂತರ ಆಫ್ ಆಗಿರುವ ಮಾಹಿತಿ ಲಭ್ಯವಾಗಿದೆ. ಸತ್ಯನಾರಾಯಣ ಅವರು ಈ ಹಿಂದೆ ಹಾಸನ ಹೂಡಾದಲ್ಲಿ, ನಂತರ ಮಹಾನಗರಪಾಲಿಕೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.
