‘ಹಿಂದೂ ಧರ್ಮಕ್ಕೆ ಮತಾಂತರ ಆಗಿಲ್ಲ, ಹೆಸರು ಬದಲಿಸಿಲ್ಲ’; ಉರ್ಫಿ ಜಾವೇದ್ ಸ್ಪಷ್ಟನೆ – Kannada News | Uorfi Javed denies converting to Hinduism changing name to Rita Bhardwaj Fake News

ತಮ್ಮ ವಿಭಿನ್ನ ಫ್ಯಾಷನ್ ಸ್ಟೈಲ್ ಹಾಗೂ ಮುಕ್ತ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ನಟಿ, ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ (Uorfi Javed) ಬಗ್ಗೆ ಒಂದು ಗಾಸಿಪ್ ಹಬ್ಬಿತ್ತು. ಅವರು ಹಿಂದೂ ಧರ್ಮಕ್ಕೆ (Hinduism) ಮತಾಂತರವಾಗಿದ್ದಾರೆ ಹಾಗೂ ತಮ್ಮ ಹೆಸರನ್ನು ರೀತಾ ಭಾರದ್ವಾಜ್ ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ವದಂತಿ ಹಬ್ಬಿಸಲಾಗಿತ್ತು. ಆದರೆ ಅದನ್ನು ಅವರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಈ ಕುರಿತು ಸುಳ್ಳು ಸುದ್ದಿ ಹರಡಿದ ಮಾಜಿ ಮಹಿಳಾ ಪತ್ರಕರ್ತೆಯೊಬ್ಬರ ವಿರುದ್ಧ ಉರ್ಫಿ ಜಾವೇದ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಡಿಡಿ ನ್ಯೂಸ್‌ನಲ್ಲಿ ಕೆಲಸ ಮಾಡಿದ್ದಾಗಿ ಹೇಳಿಕೊಂಡಿರುವ ಮೀತಾ ಚೌಧರಿ ಎಂಬ ಕಂಟೆಂಟ್ ಕ್ರಿಯೇಟರ್ ಇತ್ತೀಚೆಗೆ ಉರ್ಫಿ ಜಾವೇದ್ ಅವರ ವಸ್ತ್ರವಿನ್ಯಾಸವನ್ನು ಟೀಕಿಸಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ, ‘ಉರ್ಫಿ ಕೇವಲ ಅರೆನಗ್ನ ಬಟ್ಟೆ ಧರಿಸುವುದರಿಂದಲೇ ಫೇಮಸ್ ಆಗಿದ್ದಾರೆ. ಈಗ ಅವರು ಇಸ್ಲಾಂ ಧರ್ಮ ಬಿಟ್ಟು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ತಮ್ಮ ಹೆಸರನ್ನು ರೀತಾ ಭಾರದ್ವಾಜ್ ಅಂತ ಬದಲಾಯಿಸಿಕೊಂಡಿದ್ದಾರೆ’ ಎಂದು ಹೇಳಿದ್ದರು. ಜೊತೆಗೆ ‘ಉರ್ಫಿ ಸ್ವಲ್ಪ ಲಜ್ಜೆಯನ್ನೂ ಕಲಿಯಬೇಕು’ ಎಂದು ಕಿಡಿಕಾರಿದ್ದರು.

ಈ ವಿಡಿಯೋಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಉರ್ಫಿ ಜಾವೇದ್, ‘ಇಂತಹ ಮೂರ್ಖರೆಲ್ಲಾ ತಮ್ಮನ್ನು ತಾವೇ ಪತ್ರಕರ್ತರು ಎಂದು ಕರೆದುಕೊಳ್ಳುತ್ತಾರೆ. ಆಂಟಿ, ದಯವಿಟ್ಟು ಸ್ವಲ್ಪ ಹೋಮ್‌ವರ್ಕ್ ಮಾಡಿಕೊಳ್ಳಿ. ನಾನು ಎಂದಿಗೂ ನನ್ನ ಧರ್ಮವನ್ನಾಗಲಿ ಅಥವಾ ಹೆಸರನ್ನಾಗಲಿ ಬದಲಾಯಿಸಿಲ್ಲ. ಅಸಲಿಗೆ ನಾನು ಯಾವುದೇ ಧರ್ಮವನ್ನು ನಂಬುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ‘ನಾನು ಕೇವಲ ಬಟ್ಟೆಯ ವಿಷಯದಲ್ಲಿ ಮಾತ್ರವಲ್ಲ, ನನ್ನ ಮಾತುಗಳಲ್ಲೂ ನೇರ ಮತ್ತು ನಗ್ನ. ಆದರೆ ಇಂದು ನನಗೆ ವಾದ ಮಾಡುವ ಮೂಡ್ ಇಲ್ಲ. ನಾನು ಎಷ್ಟು ಶೋಗಳಲ್ಲಿ ನಟಿಸಿದ್ದೇನೆ ಎಂದು ಒಮ್ಮೆ ಗೂಗಲ್ ಮಾಡಿ ನೋಡಿ. ನಿಮ್ಮ ಕೆಟ್ಟ ಮೇಕಪ್ ಹಾಗೂ ನಿಮ್ಮ ಪತ್ರಿಕೋದ್ಯಮವನ್ನು ನೋಡಿ ನನಗೆ ನಾಚಿಕೆಯಾಗುತ್ತಿದೆ. ನನ್ನನ್ನು ನಿಂದಿಸಬೇಕಿದ್ದರೆ ಧೈರ್ಯವಾಗಿ ಮಾಡಿ, ಆದರೆ ಸುಳ್ಳು ಸುದ್ದಿಗಳನ್ನು ಹರಡಬೇಡಿ’ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಮುಖ ವಿಪರೀತ ಊದಿಕೊಂಡಿದ್ದಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ನಟಿ ಉರ್ಫಿ ಜಾವೇದ್

ಉರ್ಫಿ ಜಾವೇದ್ ಪ್ರತ್ಯುತ್ತರ ನೀಡಿದ ಬೆನ್ನಲ್ಲೇ, ಆ ಮಹಿಳಾ ಕಂಟೆಂಟ್ ಕ್ರಿಯೇಟರ್ ಉರ್ಫಿಗೆ ಅತ್ಯಂತ ಕಠಿಣವಾದ ಮೆಸೇಜ್‌ಗಳನ್ನು ಕಳುಹಿಸಿ, ನಂತರ ವಿಡಿಯೋ ಡಿಲೀಟ್ ಮಾಡಿ ಬ್ಲಾಕ್ ಮಾಡಿದ್ದಾರೆ ಎಂದು ಉರ್ಫಿ ತಿಳಿಸಿದ್ದಾರೆ. ‘ಆಂಟಿಗೆ ತುಂಬಾ ಸಿಟ್ಟು ಬಂದಿದೆ. ಆದರೂ ಅವರ ಮಾಹಿತಿ ತಪ್ಪು. ಅವರು ನನಗೆ ಅತ್ಯಂತ ಬೇಸರ ತರಿಸುವಂತಹ ಮೆಸೇಜ್‌ಗಳನ್ನು ಕಳುಹಿಸಿದ್ದಾರೆ. ಅವುಗಳನ್ನು ನನಗೆ ಇಲ್ಲಿ ಅಪ್‌ಲೋಡ್ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಬಳಿಕ ವಿಡಿಯೋ ಡಿಲೀಟ್ ಮಾಡಿ ನನ್ನನ್ನು ಬ್ಲಾಕ್ ಮಾಡಿದ್ದಾರೆ. ನಾನು ಅವರ ವಿರುದ್ಧ ಹೆಚ್ಚು ಅವಮರ್ಯಾದೆಯಿಂದ ವರ್ತಿಸಲು ಇಷ್ಟಪಡುವುದಿಲ್ಲ. ಏಕೆಂದರೆ ಅವರು ನೋಡಲು ನಮ್ಮ ತಾತನ ತರಹ ಕಾಣಿಸುತ್ತಾರೆ’ ಎಂದು ಉರ್ಫಿ ಜಾವೇದ್ ಲೇವಡಿ ಮಾಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *