ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್ (Kangana Ranaut) ತಮ್ಮ ತೀಕ್ಷ್ಣ ಮಾತು ಟ್ವೀಟುಗಳಿಗಾಗಿ ಜನಪ್ರಿಯರು. ಇತ್ತೀಚೆಗಷ್ಟೆ ಅವರು ಜೆನ್-ಜಿಗಳನ್ನು ‘ಗಟರ್ ಜನರೇಷನ್’ ಎಂದು ಕರೆದಿದ್ದು ಟೀಕೆಗೆ ಗುರಿಯಾಗಿತ್ತು. ಇದೀಗ ಅವರು ಬಾಲಿವುಡ್ನ ಹಿರಿಯ ನಟರೋರ್ವರನ್ನು ನರಿಗೆ ಹೋಲಿಸಿದ್ದಾರೆ. ಕನ್ನಡದ ಸಿನಿಮಾಗಳಲ್ಲೂ ನಟಿಸಿರುವ ಬಾಲಿವುಡ್ನ ಹಿರಿಯ ನಟ ನಸಿರುದ್ಧೀನ್ ಶಾ ಅವರ ಹೇಳಿಕೆಯೊಂದನ್ನು ಕಂಗನಾ ತೀವ್ರವಾಗಿ ಖಂಡಿಸಿದ್ದು, ನಸೀರುದ್ಧೀನ್ ಅವರನ್ನು ನರಿಗೆ ಹೋಲಿಕೆ ಮಾಡಿದ್ದಾರೆ.
ಕಳೆದ ತಿಂಗಳು ದೇಶದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗಳ ಬಗ್ಗೆ ಪ್ರಮುಖ ನಟರು ಏಕೆ ಬಹಿರಂಗವಾಗಿ ಮಾತನಾಡುತ್ತಿಲ್ಲ ಎಂಬ ಪ್ರಶ್ನೆಗೆ ಈ ಹಿಂದೆ ಉತ್ತರಿಸಿದ್ದ ನಸೀರುದ್ದೀನ್ ಶಾ, ‘ಅವರ ಆತ್ಮಸಾಕ್ಷಿ ಹೇಳಿದಾಗ ಅವರು ಮಾತನಾಡುತ್ತಾರೆ. ಬಾಯಿಯಲ್ಲಿ ಮೂಳೆ ಹಿಡಿದಿರುವ ನಾಯಿಗೆ ಬೊಗಳಲು ಸಾಧ್ಯವಿಲ್ಲ ಎಂಬ ಮಾತಿದೆ’ ಎಂದು ಅವರು ಹೇಳಿದ್ದರು. ಈಗ ಕಂಗನಾ ಅವರು, ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ನಸೀರುದ್ದೀನ್ ಶಾ ಅವರು ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಕಂಗನಾ ರನೌತ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ನಸೀರುದ್ದೀನ್ ಶಾ ಅವರ ಹೇಳಿಕೆಯ ಕುರಿತು ನಟ ಪಿಯುಷ್ ಮಿಶ್ರಾ ಮಾಡಿದ್ದ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗಳ ಬಗ್ಗೆ ನಸೀರುದ್ದೀನ್ ಶಾ ಅವರ ಮೌನವನ್ನು ಪ್ರಶ್ನಿಸಿದ್ದಾರೆ. ‘ಸತ್ಯವೆಂದರೆ ನಾವೆಲ್ಲರೂ ಯಾರದ್ದೋ ಸಾಕುಪ್ರಾಣಿ, ಆದರೆ ನಾನು ಯಾವ ಮನೆಯಲ್ಲಿ (ದೇಶದಲ್ಲಿ) ತಿನ್ನುತ್ತೇನೋ ಆ ಮನೆಯನ್ನು ರಕ್ಷಿಸುತ್ತೇನೆ ಮತ್ತು ಅದಕ್ಕಾಗಿ ಹೋರಾಡುತ್ತೇನೆ ಎಂಬ ಹೆಮ್ಮೆ ನನಗಿದೆ. ನಸೀರುದ್ದೀನ್ ಸಾಹೇಬರು ತಿನ್ನುವುದು ಈ ದೇಶದ್ದು, ಆದರೆ ಹೋರಾಡುವುದು ನೆರೆಯ ದೇಶಕ್ಕಾಗಿ’ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:ಅಪರೂಪಕ್ಕೆ ದೀಪಿಕಾ ಪಡುಕೋಣೆಯನ್ನು ಕೊಂಡಾಡಿದ ಕಂಗನಾ ರನೌತ್
‘ಇಂದಿನ ಕಾಲದಲ್ಲಿ ಯಾರನ್ನಾದರೂ ‘ನಾಯಿ’ ಎಂದು ಕರೆಯುವುದು ಒಂದು ಹೊಗಳಿಕೆಯಾಗಿದೆ, ಏಕೆಂದರೆ ನಿಷ್ಠೆ ಮತ್ತು ಮುಗ್ಧತೆ ಇಂದು ಬಹಳ ಅಪರೂಪ. ನಸೀರುದ್ದೀನ್ ಅವರಂತಹ ‘ಲೋಮಡಿ’ (ನರಿ) ಆಗುವುದಕ್ಕಿಂತ ನಾಯಿಯಾಗುವುದೇ ಲೇಸು’ ಎಂದು ಕಂಗನಾ ಬರೆದಿದ್ದಾರೆ.
ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ಬಗ್ಗೆ ಕಂಗನಾ ರನೌತ್ ಪ್ರಶ್ನೆಗಳನ್ನು ಎತ್ತಿದ್ದಾರೆ. ‘ಮೊದಲಿಗೆ ಜಾರ್ಖಂಡ್‌ನಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿ. ಮಕ್ಕಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಅವರ ಮೇಲೆ ಕ್ರೂರವಾಗಿ ಲಾಠಿಚಾರ್ಜ್ ಮಾಡಲಾಗಿದೆ. ಜಲಫಿರಂಗಿ ಮತ್ತು ಅಶ್ರುವಾಯುವನ್ನು ಬಳಸಲಾಗಿದೆ. ನಾವು ಇದಕ್ಕೆ ಉತ್ತರ ಕೇಳುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಸೋಮವಾರ ಜಾರ್ಖಂಡ್ ವಿಧಾನಸಭೆಯ ಬಳಿ ನಡೆದ ಘರ್ಷಣೆಯಲ್ಲಿ ಹಲವು ಪ್ರತಿಭಟನಾಕಾರರು ಮತ್ತು ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ಪ್ರತಿಭಟಿಸುತ್ತಿದ್ದ ಉದ್ಯೋಗಾಕಾಂಕ್ಷಿಗಳ ಮೇಲೆ ಪೊಲೀಸರು ಜಲಫಿರಂಗಿ, ಅಶ್ರುವಾಯು ಬಳಸಿದ್ದಾರೆ ಮತ್ತು ಲಾಠಿಚಾರ್ಜ್ ನಡೆಸಿದ್ದಾರೆ ಎಂದು ವರದಿಯಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ