ಟೀಮ್ ಇಂಡಿಯಾ ಎಂದೂ ಕಾಣದ ಆಘಾತಕಾರಿ ಫಲಿತಾಂಶವೊಂದಕ್ಕೆ ಬೆಲ್ಫಾಸ್ಟ್ನ ಸಿಎಸ್ ಕ್ರಿಕೆಟ್ ಕ್ಲಬ್ ಗ್ರೌಂಡ್ ಸಾಕ್ಷಿಯಾಗಿದೆ. ಐರ್ಲೆಂಡ್ ಪ್ರವಾಸ ಕೈಗೊಂಡಿದ್ದ ಶ್ರೇಯಸ್ ಅಯ್ಯರ್ ನೇತೃತ್ವದ ಯುವ ಭಾರತ ತಂಡ, 2 ಪಂದ್ಯಗಳ ಟಿ20 ಸರಣಿಯಲ್ಲಿ 0-2 ಅಂತರದಿಂದ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿದೆ. ಮೊದಲ ಪಂದ್ಯದಲ್ಲಿ 34 ರನ್‌ಗಳಿಂದ ಸೋತಿದ್ದ ಭಾರತ, ಎರಡನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಕೇವಲ 1 ರನ್‌ನಿಂದ ರೋಮಾಂಚಕವಾಗಿ ಸೋಲೊಪ್ಪಿಕೊಂಡಿತು.
ಈ ಐತಿಹಾಸಿಕ ಸೋಲಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ತಮ್ಮ ತಂಡದ ತಪ್ಪುಗಳನ್ನು ಒಪ್ಪಿಕೊಳ್ಳುತ್ತಲೇ, ಐರ್ಲೆಂಡ್ ತಂಡದ ಆಟವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ಖಂಡಿತವಾಗಿಯೂ ನಮಗೆ ಒಳ್ಳೆಯ ಸರಣಿಯಲ್ಲ. ಆದರೆ ಐರ್ಲೆಂಡ್ ಆಡಿದ ರೀತಿ ಅದ್ಭುತವಾಗಿತ್ತು, ಅವರಿಗೆ ಅಭಿನಂದನೆಗಳು. ಅವರು ಮೈದಾನದಲ್ಲಿ ತೋರಿದ ವೃತ್ತಿಪರತೆ ಮತ್ತು ಪಿಚ್ ಹೇಗೆ ವರ್ತಿಸಲಿದೆ ಎಂಬುದರ ಕುರಿತು ಅವರಿಗಿದ್ದ ಸ್ಪಷ್ಟ ಕಲ್ಪನೆ ನಿಜಕ್ಕೂ ಅಪಾರ. ಅವರ ಫೀಲ್ಡಿಂಗ್ ಕೂಡ ಅತ್ಯುತ್ತಮವಾಗಿತ್ತು. ಇದು ಅವರಿಗೆ ಸಂದ ಅರ್ಹ ಗೆಲುವು ಎಂದು ಶ್ರೇಯಸ್ ಅಯ್ಯರ್ ಎದುರಾಳಿ ತಂಡವನ್ನು ಕೊಂಡಾಡಿದ್ದಾರೆ.
ಮೊದಲ ಪಂದ್ಯದ ಬಳಿಕ ತಂಡದ ತಂತ್ರಗಾರಿಕೆ ಹಾಗೂ ಹೊಂದಾಣಿಕೆಯ ಬಗ್ಗೆ ಮಾತನಾಡಿದ ಅಯ್ಯರ್, ಎರಡನೇ ಪಂದ್ಯದಲ್ಲಿ ಬೌಲರ್‌ಗಳ ಪ್ರದರ್ಶನಕ್ಕೆ ತೃಪ್ತಿ ವ್ಯಕ್ತಪಡಿಸಿದರು.
ಇವತ್ತಿನ ಪಂದ್ಯದಲ್ಲಿ ನಮ್ಮ ಬೌಲರ್‌ಗಳು ಯೋಜನೆಗಳನ್ನು ಅದ್ಭುತವಾಗಿ ಕಾರ್ಯರೂಪಕ್ಕೆ ತಂದರು. ಆದರೆ ನಮ್ಮ ಬ್ಯಾಟಿಂಗ್‌ನಲ್ಲಿ ನಾವು ಎಡವಿದೆವು. ಪಿಚ್ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ಮತ್ತು ಸಿಂಗಲ್ಸ್ ಅನ್ನು ಡಬಲ್ಸ್ ಆಗಿ ಪರಿವರ್ತಿಸುವ ಓಟದ ವೇಗದಲ್ಲಿ ನಾವು ಹಿಂದೆ ಬಿದ್ದೆವು. ಈ ವಿಭಾಗದಲ್ಲಿ ಐರ್ಲೆಂಡ್ ನಮಗಿಂತ ಹೆಚ್ಚು ಚಾಣಾಕ್ಷತನ ಪ್ರದರ್ಶಿಸಿತು ಎಂದು ಅಯ್ಯರ್ ಟೀಮ್ ಇಂಡಿಯಾ ಬ್ಯಾಟಿಂಗ್ ವೈಫಲ್ಯವನ್ನು ಒಪ್ಪಿಕೊಂಡರು.
ಈ ಪಂದ್ಯದ ಮೂಲಕ ಪ್ರಿನ್ಸ್ ಯಾದವ್ ಮತ್ತು ಸೂರ್ಯಂಶ್ ಶೇಡ್ಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಶ್ರೇಯಸ್, ಪ್ರಿನ್ಸ್ ಯಾದವ್ ಐಪಿಎಲ್‌ನಲ್ಲಿ ಉತ್ತಮ ಅನುಭವ ಹೊಂದಿದ್ದಾರೆ. ಅದೇ ಲಯವನ್ನು ಇಲ್ಲೂ ಮುಂದುವರಿಸಿದ್ದಾರೆ. ಬೌಲಿಂಗ್ ಮಾಡುವಾಗ ಅವರದೇ ಆದ ಯೋಜನೆಗಳನ್ನು ಅವರು ಹೊಂದಿದ್ದಾರೆ. ಅವರ ಸಕಾರಾತ್ಮಕ ಆಟದ ಶೈಲಿ ನನಗೆ ಇಷ್ಟವಾಯಿತು. ಸೂರ್ಯಂಶ್ ಅವರಿಗೆ ಇದು ಮೊದಲ ಪಂದ್ಯ. ಈ ಸೋಲಿನಿಂದ ಅವರು ಖಂಡಿತವಾಗಿಯೂ ಸಾಕಷ್ಟು ಪಾಠಗಳನ್ನು ಕಲಿಯಲಿದ್ದಾರೆ ಎಂದರು.
ಈ ಸರಣಿ ಸೋಲಿನ ತೀವ್ರ ನಿರಾಶೆಯ ನಡುವೆಯೂ ಐರ್ಲೆಂಡ್ ಪ್ರವಾಸದ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದ ಶ್ರೇಯಸ್ ಅಯ್ಯರ್, ಇಲ್ಲಿಗೆ ಬಂದು ಕ್ರಿಕೆಟ್ ಆಡಿದ್ದು ನಮಗೆ ಸಿಕ್ಕ ದೊಡ್ಡ ಗೌರವ ಮತ್ತು ಹೆಮ್ಮೆ. ಇಲ್ಲಿನ ಆತಿಥ್ಯಕ್ಕೆ ಧನ್ಯವಾದಗಳು ಎಂದು ಮಾತು ಮುಗಿಸಿದರು.
ಇದನ್ನೂ ಓದಿ: ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ವೇಳಾಪಟ್ಟಿ ಪ್ರಕಟ
ಒಟ್ಟಾರೆಯಾಗಿ ಐರ್ಲೆಂಡ್ ವಿರುದ್ಧದ 0-2 ಸರಣಿ ಸೋಲು ಭಾರತೀಯ ಯುವ ಪಡೆಗೆ ಪಾಠವಾಗಿದ್ದು, ಆತಿಥೇಯ ತಂಡವು ಎಲ್ಲಾ ವಿಭಾಗಗಳಲ್ಲಿ ಚಾಣಾಕ್ಷತನ ಪ್ರದರ್ಶಿಸಿ ಐತಿಹಾಸಿಕ ಜಯ ಸಾಧಿಸಿದೆ. ಈ ಸೋಲಿನ ಹೊರತಾಗಿಯೂ ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಟೀಮ್ ಇಂಡಿಯಾ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿದೆ.
