ಹುಬ್ಬಳ್ಳಿ, ಜನವರಿ 08: ನರದಲ್ಲಿ ಪೊಲೀಸರ ಕಸ್ಟಡಿಯಲ್ಲಿದ್ದಾಗಲೇ ಬಿಜೆಪಿ ಕಾರ್ಯಕರ್ತೆ ಅರೆಬೆತ್ತಲಾದ ಪ್ರಕರಣ (BJP Worker Assault Case) ದೊಡ್ಡ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ಬಿಜೆಪಿ ನಾಯಕರ ಮಧ್ಯೆ ಮಾತಿನ ಜಟಾಪಟಿಗೂ ಕಾರಣವಾಗಿದೆ. ಕಾಂಗ್ರೆಸ್ (congress) ಕಾರ್ಪೊರೇಟರ್ಅನ್ನ ಪೊಲೀಸರು ಬಂಧಿಸಿದ್ದಾರೆ. ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಯೊಬ್ಬರ ಕಾರ್ಯಸ್ಥಳ ಬದಲಾವಣೆ ಮಾಡಲಾಗಿದೆ. ಕೇಶ್ವಾಪುರ ಪೊಲೀಸ್ ಠಾಣೆಯ ಪಿಐ ಕೆ.ಎಸ್.ಹಟ್ಟಿ ಅವರ ಕಾರ್ಯಸ್ಥಳ ಬದಲಾವಣೆ ಮಾಡಿದ ಆದೇಶಿಸಲಾಗಿದೆ.
ಪಿಐ ಕೆ.ಎಸ್.ಹಟ್ಟಿ ತಲೆದಂಡ
ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಶ್ವಾಪುರ ಪೊಲೀಸ್ ಠಾಣೆಯ ಪಿಐ ಕೆ.ಎಸ್.ಹಟ್ಟಿ ತಲೆದಂಡ ಆಗಿದೆ. ತನಿಖೆ ಮುಗಿಯೋವರಗೂ ಕಮಿಷನರ್ ಕಚೇರಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ಇನ್ನು ಗಂಟಿಕೇರಿ ಠಾಣೆಯ ಪಿಐ ಜಾಧವ್ರಿಗೆ ಕೇಶ್ವಾಪುರ ಠಾಣೆ ಪ್ರಭಾರ ವಹಿಸಿಕೊಳ್ಳಲು ಕಮಿಷನರ್ ಸೂಚಿಸಿದ್ದಾರೆ.
ಪ್ರಕರಣದ ತನಿಖೆ ಎಸಿಪಿ ಹೆಗಲಿಗೆ
ಇನ್ನು ಈ ಪ್ರಕರಣದ ತನಿಖೆಯನ್ನು ಎಸಿಪಿ ಹೆಗಲಿಗೆ ನೀಡಲಾಗಿದೆ. ತನಿಖಾಧಿಕಾರಿಯಾಗಿ ಎಸಿಪಿ ಶಿವರಾಜ್ ಕಟಕಬಾವಿ ಅನ್ನ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನೇಮಕ ಮಾಡಿದ್ದಾರೆ. ಕೆ.ಎಸ್ ಹಟ್ಟಿ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿತ್ತು. ತನಿಖಾಧಿಕಾರಿ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಎಸಿಪಿ ಶಿವರಾಜ್ ಕಟಕಬಾವಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ.
ನಾಳೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆಗೆ ಮುಂದಾದ ಬಿಜೆಪಿ
ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆಗೆ ಬಿಜೆಪಿ ಮುಂದಾಗಿದೆ. ನಾಳೆ ಮಧ್ಯಾಹ್ನ 1.30 ಗಂಟೆಗೆ ಪ್ರತಿಭಟನೆ ನಡೆಯಲಿದ್ದು, ಹುಬ್ಬಳ್ಳಿ ಅಂಬೇಡ್ಕರ ಸರ್ಕಲ್ನಿಂದ ತಹಶೀಲ್ದಾರ ಕಚೇರಿವರೆಗೆ ಮೆರವಣಿಗೆ ನಡೆಯಲಿದೆ. ಈ ಪ್ರತಿಭಟನಾ ಮೆರವಣಿಗೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ವಿಧಾನ ಪರಿಷತ್ ಸದಸ್ಯ ಭಾರತಿ ಶೆಟ್ಟಿ ಸೇರಿ ಬಿಜೆಪಿಯ ಅನೇಕ ನಾಯಕರು ಭಾಗಿಯಾಗಲಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
