ಹುಬ್ಬಳ್ಳಿಯಲ್ಲಿ ಶುರುವಾಯ್ತು ಹಿಜಾಬ್ ಕಿಚ್ಚು: ಮುತಾಲಿಕ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ – Kannada News | Hijab Row Resurfaces: Hubballi Protest, Muthalik Urges Saffron Shawls in Schools

ಪ್ರಮೋದ್​​ ಮುತಾಲಿಕ್​ ನೇತೃತ್ವದಲ್ಲಿ ಪ್ರತಿಭಟನೆ​ Image Credit source: tv9 kannada

ಹುಬ್ಬಳ್ಳಿ, ಮೇ 14: ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಹಿಜಾಬ್ ವಿವಾದ (Hijab Controversy) ದೊಡ್ಡ ಗದ್ದಲಕ್ಕೆ ಕಾರಣವಾಗಿತ್ತು. ಆದರೆ ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಹಿಜಾಬ್ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಸರ್ಕಾರ ಅವಕಾಶ ನೀಡಿರುವುದು, ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರದ ನಿರ್ಧಾರವನ್ನು ಖಂಡಿಸಿ ಇಂದು ಹುಬ್ಬಳ್ಳಿಯಲ್ಲಿ (Hubballi) ಶ್ರೀರಾಮಸೇನೆಯಿಂದ ಪ್ರತಿಭಟನೆ ಮಾಡಲಾಗಿದೆ. ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಕೇಸರಿ ಶಾಲು ಹಾಕಿಕೊಂಡು ಹೋಗುವಂತೆ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.

ಮುಖ್ಯಾಂಶಗಳು

  • ರಾಜ್ಯದಲ್ಲಿ ಹಿಜಾಬ್ ವಿವಾದ ಮತ್ತೆ ಮುನ್ನಲೆಗೆ: ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ
  • ಹುಬ್ಬಳ್ಳಿಯಲ್ಲಿ ಪ್ರಮೋದ್​ ಮುತಾಲಿಕ್ ನೇತೃತ್ವದಲ್ಲಿ ಶ್ರೀರಾಮಸೇನೆ ಬೃಹತ್ ಪ್ರತಿಭಟನೆ
  • ಸರ್ಕಾರದ ನಿರ್ಧಾರವನ್ನು ಕೋರ್ಟ್​ನಲ್ಲಿ ಪ್ರಶ್ನಿಸುತ್ತೇವೆ ಎಂದ ಪ್ರಮೋದ್​ ಮುತಾಲಿಕ್

2022ರಲ್ಲಿ ಬಿಜೆಪಿ ಸರ್ಕಾರವಿದ್ದಾಗ, ರಾಜ್ಯದಲ್ಲಿ ಹಿಜಾಬ್ ವಿವಾದ ಜೋರಾಗಿತ್ತು. ಪರ-ವಿರೋಧ ಹೋರಾಟಗಳು, ಆರೋಪ, ಪ್ರತ್ಯಾರೋಪಗಳು ನಡೆದಿದ್ದವು. ನಂತರ ಆ ವಿವಾದ ತಣ್ಣಗಾಗಿತ್ತು. ಆದರೆ ಇದೀಗ ಮತ್ತೆ ಹಿಜಾಬ್ ವಿವಾದ ಸದ್ದು ಮಾಡುತ್ತಿದೆ. ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಲಾಗಿದೆ ಅನ್ನೋ ಅಧಿಸೂಚನೆ ಹೊರಡಿಸಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ಬೆನ್ನಲ್ಲೇ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ: ಸಮವಸ್ತ್ರ ಸಮರ: ವಿಪಕ್ಷದ ವಿರೋಧದ ನಡುವೆಯೂ ಸರ್ಕಾರದ ನಡೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ

ಅದರಲ್ಲೂ ಶ್ರೀರಾಮಸೇನೆ ಸಂಘಟನೆ ಸರ್ಕಾರದ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿದೆ. ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಶ್ರೀರಾಮಸೇನೆ ಸಂಘಟನೆ ಕಾರ್ಯಕರ್ತರು, ಸರ್ಕಾರದ ವಿರುದ್ಧ ಧಿಕ್ಕಾರ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ, ಡಿಸಿಎಂ, ಶಿಕ್ಷಣ ಸಚಿವರಿಗೆ ಹಿಜಾಬ್ ಹಾಕಿದ ಫೋಟೋಗಳನ್ನು ಹಿಡಿದು ನಂತರ ಅವುಗಳಿಗೆ ಬೆಂಕಿ ಹಚ್ಚಿದ್ದರು. ಇನ್ನು ಸರ್ಕಾರದ ಆದೇಶ ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕೇಸರಿ ಶಾಲು ಧರಿಸಿಕೊಂಡು ಹೋಗುವಂತೆ ವಿದ್ಯಾರ್ಥಿಗಳಿಗೆ ಪ್ರಮೋದ್ ಮುತಾಲಿಕ್​​ ಕರೆ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಮೋದ್ ಮುತಾಲಿಕ್​​​, ಎಲ್ಲೆಲ್ಲಿ ಮುಸ್ಲಿಂರು ಹಿಜಾಬ್ ಧರಿಸಿ ಬರುತ್ತಾರೋ, ಅಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಹೋಗಿ, ನಿಮ್ಮ ರಕ್ಷಣೆಗೆ ನಾವು ಇರುತ್ತೇವೆ. ಸರ್ಕಾರ ಎಷ್ಟು ಜನರ ಮೇಲೆ ಕೇಸ್ ಹಾಕುತ್ತೆ ಹಾಕಲಿ, ನಾವು ಎದುರಿಸುತ್ತೇವೆ ಅಂತ ಹೇಳಿದ್ದಾರೆ.

ಸರ್ಕಾರದ ನಿರ್ಧಾರವನ್ನು ಕೋರ್ಟ್​ನಲ್ಲಿ ಪ್ರಶ್ನಿಸುತ್ತೇವೆ. ಆದಷ್ಟು ಬೇಗ ಪಿಐಎಲ್ ಹಾಕುತ್ತೇವೆ ಅಂತ ಹೇಳಿದ್ದಾರೆ. ಇಂದಿರಾ ಗಾಂಧಿ ಅವರು ಮಕ್ಕಳಲ್ಲಿ ಬೇಧಭಾವ ಇರಬಾರದು ಅಂತ ಸಮವಸ್ತ್ರ ನಿಯಮ ಜಾರಿಗೆ ತಂದಿದ್ದರು. ಆದರೆ ಅವರದೇ ಪಕ್ಷದವರು ಇದೀಗ ಹಿಜಾಬ್​ಗೆ ಅವಕಾಶ ನೀಡಿದ್ದಾರೆ. ಹಿಜಾಬ್ ಹಾಕಿಕೊಂಡು ಬಂದರೆ ಮುಸ್ಲಿಂ ಅನ್ನೋದು ಎಲ್ಲರಿಗೂ ಗೊತ್ತಾಗುತ್ತದೆ. ಏಕತೆ ಮೂಡಿಸಬೇಕಿದ್ದ ಸರ್ಕಾರವೇ ಮಕ್ಕಳ ಮನಸು ಒಡೆಯುವ ಕೆಲಸ ಮಾಡುತ್ತಿದೆ ಎಂದು ಪ್ರಮೋದ್ ಮುತಾಲಿಕ್​​ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹಿಜಾಬ್​​​ ವಿವಾದ ಮತ್ತೆ ಮುನ್ನೆಲೆಗೆ: ಸರ್ಕಾರದ ನಡೆಗೆ ಸಿಡಿದೆದ್ದ ವಿಪಕ್ಷ ಬಿಜೆಪಿ

ರಾಜ್ಯದಲ್ಲಿ ತಣ್ಣಗಾಗಿದ್ದ ಹಿಜಾಬ್ ವಿವಾದ ಇದೀಗ ಮತ್ತೆ ಆರಂಭವಾಗಿದೆ. ಪರ-ವಿರೋಧ ಚರ್ಚೆಗಳು, ಆರೋಪ-ಪ್ರತ್ಯಾರೋಪಗಳು ಆರಂಭವಾಗಿವೆ. ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *