ಹುಬ್ಬಳ್ಳಿ, ಫೆಬ್ರವರಿ 20: ಎಲ್ಲರೂ ಚೆನ್ನಾಗಿರುವ ಉದ್ಯೋಗ ಮಾಡಬೇಕು, ಕೈ ತುಂಬಾ ಹಣ ಪಡೆಯಬೇಕು ಅನ್ನೋ ಕನಸು ಕಂಡಿರುತ್ತಾರೆ. ಆದರೆ ಡಿಗ್ರಿ ಮುಗಿದ್ರು ಕೆಲಸ ಸಿಗದೇ ಇದ್ದಾಗ ಜೀವನ ನಿರ್ವಹಣೆಗಾಗಿ ಪರದಾಡುತ್ತಾರೆ. ಇಂತವರನ್ನು ಟಾರ್ಗೆಟ್ ಮಾಡಿರುವ ಕೆಲ ಚೈನ್ ಲಿಂಕ್ ಬಿಜಿನೆಸ್ (Chain Link Scam) ಕಂಪನಿಗಳು, ನೀವು ಚೆನ್ನಾಗಿ ಹಣ ಮಾಡಬಹುದು, ಸ್ವಲ್ಪ ಹಣ ಹೂಡಿಕೆ ಮಾಡಿದರೆ ಸಾಕು ಅಂತ ಹೇಳುವ ಬಣ್ಣದ ಮಾತುಗಳಿಗೆ ಯುವ ಜನತೆ ಮರಳಾಗುತ್ತಾರೆ. ಇಂತಹ ಬಣ್ಣದ ಮಾತುಗಳನ್ನು ಹೇಳಿ ಸಾವಿರಾರ ಕೋಟಿ ರೂ ವಂಚಿಸಿರುವ ನೂರಾರು ಚೈನ್ ಲಿಂಕ್ ಫ್ರಾಡ್ಗಳು ದೇಶದಲ್ಲಿ ನಡೆದಿವೆ. ಇದೀಗ ಹುಬ್ಬಳ್ಳಿಯಲ್ಲಿ ಚೈನ್ ಲಿಂಕ್ ಕಂಪನಿಯೊಂದರ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ ನಗರದ ದೇಶಪಾಂಡೆ ನಗರದಲ್ಲಿರುವ ವೆಕ್ಸಾನ್ ಬಿಗ್ ವೆಲ್ ಪ್ರೈವೆಟ್ ಲಿಮಿಟಿಡ್ ಕಂಪನಿಯ ಕಚೇರಿಗೆ ನುಗ್ಗಿದ್ದ ಅನೇಕ ಕನ್ನಡಪರ ಹೋರಾಟಗಾರರು ಮತ್ತು ಸ್ಥಳೀಯರು ಇಂದು ಸಿಬ್ಬಂದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇವರ ಆಕ್ರೋಶಕ್ಕೆ ಕಾರಣ, ಈ ಕಂಪನಿ ಜನರಿಗೆ ವಂಚನೆ ಮಾಡ್ತಿರೋದಂತೆ.
ಇದನ್ನೂ ಓದಿ: ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವಹಿವಾಟು: ತನಿಖೆಯಲ್ಲಿ ಹಣದ ರಹಸ್ಯ ಬಯಲು
ಮಹರಾಷ್ಟ್ರದ ಪುಣೆ ಮೂಲದ ವೆಕ್ಸಾನ್ ಬಿಗ್ ವೆಲ್ ಪ್ರೈವೆಟ್ ಲಿಮಿಟಿಡ್ ಕಂಪನಿ, ಮಾರ್ಕೆಟಿಂಗ್ ಕಂಪನಿಯಾಗಿದೆ. ಆದರೆ ಇದು ಚೈನ್ ಲಿಂಕ್ ಬಿಜಿನೆಸ್ ಹೆಸರಲ್ಲಿ ಜನರಿಗೆ ವಂಚನೆ ಮಾಡ್ತಿದೆ ಅನ್ನೋದು ಅನೇಕ ಕನ್ನಡಪರ ಮತ್ತು ಸ್ಥಳೀಯರ ಆರೋಪ. ಉದ್ಯೋಗವನ್ನು ಹುಡುಕುತ್ತಿರುವವರನ್ನೇ ಟಾರ್ಗೆಟ್ ಮಾಡಿ, ಅವರಿಗೆ ನೀವು ಸ್ವಲ್ಪ ಹಣ ನೀಡಿ ಕೆಲ ವಸ್ತುಗಳನ್ನು ಖರೀದಿಸಿದರೆ ಸಾಕು, ನೀವು ಕಂಪನಿ ಮೆಂಬರ್ ಆಗ್ತಿರಿ. ನೀವು ಅನೇಕರಿಗೆ ವಸ್ತುಗಳನ್ನು ಮಾರಾಟ ಮಾಡಿಸಿ, ಅವರನ್ನು ನಿಮ್ಮ ಕೆಳಗೆ ಸಬ್ ಮೆಂಬರ್ ಮಾಡಿದರೆ ಅವರು ಮಾಡುವ ಬಿಜಿನಿಸ್ನಿಂದ ನೀವು ಹಣ ಗಳಿಸಬಹುದು ಅಂತ ಹೇಳಿ ಯಾಮಾರಿಸುವ ಕೆಲಸ ಮಾಡ್ತಾರಂತೆ. ಉದ್ಯೋಗ ತರಬೇತಿ ಹೆಸರಲ್ಲಿ ಯುವತಿಯರನ್ನು ಕರೆದು ಅವರಿಗೆ ಹೆಚ್ಚಿನ ಹಣದ ಆಸೆ ತೋರಿಸಿ ಯಾಮಾರಿಸೋ ಕೆಲಸ ನಡೆಯುತ್ತಿದೆ ಅಂತ ಆರೋಪಿಸಿದ್ದಾರೆ.
ಮೆಂಬರ್ ಆಗಬೇಕಾದ್ರೆ ಅವರು 41 ಸಾವಿರ ರೂ ಬೆಲೆಯ ಕಿಟ್ನ್ನು ಖರೀದಿಸಬೇಕು. ಅದರಲ್ಲಿ ಬಟ್ಟೆ ಸೇರಿದಂತೆ ಕೆಲ ವಸ್ತುಗಳಿದ್ದು, ಅವುಗಳನ್ನು ಖರೀದಿಸಿ ಮೆಂಬರ್ ಆಗಬೇಕು. ನಂತರ ಅವರು ಬೇರೆಯವರನ್ನು ತನ್ನ ಚೈನ್ನಲ್ಲಿ ಸೇರಿಸುತ್ತಾ ಹೋದಂತೆ ಅವರಿಗೆ ದುಡ್ಡು ಬರುತ್ತದೆಯಂತೆ. ಹುಬ್ಬಳ್ಳಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಹೆಚ್ಚಿನ ಜನರನ್ನು ಆಕರ್ಷಿಸಿ ಇಂತಹದೊಂದು ಚೈನ್ ಲಿಂಕ್ ಬಿಜಿನೆಸ್ನ್ನು ಮಾಡಲಾಗುತ್ತಿದೆಯಂತೆ.
ನಾವು ಯಾರಿಗೂ ವಂಚನೆ ಮಾಡುತ್ತಿಲ್ಲ ಎಂದ ಮ್ಯಾನೇಜರ್
ಇನ್ನು ವೆಕ್ಸಾನ್ ಬಿಗ್ ವೆಲ್ ಪ್ರೈವೆಟ್ ಲಿಮಿಟಿಡ್ ಕಂಪನಿ ಬಗ್ಗೆ ಸಬ್ ಅರ್ಬನ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ಕಚೇರಿಗೆ ಬೀಗ ಹಾಕಿಸಿದ್ದು, ಕಂಪನಿಯ ಪೂರ್ವಾಪರ ದಾಖಲಾತಿಗಳನ್ನು ಪರಿಶೀಲನೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಪನಿಯ ಹುಬ್ಬಳ್ಳಿ ಮ್ಯಾನೇಜರ್, ನಾವು ಯಾರಿಗೂ ವಂಚನೆ ಮಾಡುತ್ತಿಲ್ಲ. ಇದೊಂದು ಮಾರ್ಕೆಟಿಂಗ್ ಬಿಜಿನೆಸ್ ಅಷ್ಟೇ. ಇಲ್ಲಿ ಸ್ವಯಂ ಉದ್ಯೋಗದ ಬಗ್ಗೆ ತರಬೇತಿ ನೀಡುತ್ತೇವೆ. ಅವರು ವ್ಯವಹಾರ ಮಾಡಿದಂತೆ ಅವರು ಹಣ ಗಳಿಸುವ ಅವಕಾಶವಿದೆ ಅಂತ ಹೇಳಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವರ್ಗಾವಣೆ: ಏನಿದು ಹಣದ ರಹಸ್ಯ?
ನಮ್ಮ ದೇಶದಲ್ಲಿ ಈಗಾಗಲೇ ಸಾವಿರಾರು ಚೈನ್ ಲಿಂಕ್ ಕಂಪನಿಗಳು ಹುಟ್ಟಿ ಜನರಿಗೆ ಬಣ್ಣ ಬಣ್ಣದ ಮಾತುಗಳನ್ನು ಹೇಳಿ ಸಾವಿರಾರ ಕೋಟಿ ರೂ ವಂಚಿಸಿವೆ. ಇಂತಹದೊಂದು ಜಾಲವೇ ದೇಶದಲ್ಲಿ ದೊಡಮಟ್ಟದಲ್ಲಿದೆ. ಹೀಗಾಗಿ ವೆಕ್ಸಾನ್ ಬಿಗ್ ವೆಲ್ ಪ್ರೈವೆಟ್ ಲಿಮಿಟಿಡ್ ಕಂಪನಿ ಬಗ್ಗೆ ಪೊಲೀಸರು ಸರಿಯಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
