ಹುಬ್ಬಳ್ಳಿ, ಮಾ.2: ಹುಬ್ಬಳ್ಳಿಯ ಆನಂದ ನಗರದಲ್ಲಿ ವಂಚನೆಯ ವಿಭಿನ್ನ ಹಾದಿ ತುಳಿದಿದ್ದ ಖದೀಮನೊಬ್ಬ ಸಾರ್ವಜನಿಕರ ಸಮಯಪ್ರಜ್ಞೆಯಿಂದ ಪೊಲೀಸರ ಅತಿಥಿಯಾಗಿದ್ದಾನೆ. ತಾನು ಹೆಸ್ಕಾಂ (HESCOM) ಬಿಲ್ ಕಲೆಕ್ಟರ್ ಎಂದು ಸುಳ್ಳು ಹೇಳಿ ಮನೆಮನೆಗೆ ಹೋಗಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಕಲೆಕ್ಟರ್ನನ್ನು ಜನರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆನಂದ ನಗರದಲ್ಲಿ ಈ ಘಟನೆ ನಡೆದಿದೆ. ಖದೀಮನು ಖಾಕಿ ಸಮವಸ್ತ್ರ ಧರಿಸಿ, ತಾನು ವಿದ್ಯುತ್ ಬಿಲ್ ವಸೂಲಿ ಮಾಡಲು ಬಂದಿರುವುದಾಗಿ ನಂಬಿಸಿದ್ದಾನೆ.
ಮನೆ ಮನೆಗೆ ಹೋಗಿ ಬಿಲ್ ಬಾಕಿ ಇದೆ ಎಂದು ಹೇಳಿ 1,000 ರೂ. ದಿಂದ 2,000 ರೂ. ವರೆಗೆ ಹಣ ವಸೂಲಿ ಮಾಡುತ್ತಿದ್ದ. ಗ್ರಾಹಕರು ರಸೀದಿ ಕೇಳಿದಾಗ “ಈಗ ಸರ್ವರ್ ಡೌನ್ ಇದೆ, ನಾಳೆ ತಂದು ಕೊಡುತ್ತೇನೆ” ಎಂದು ನಂಬಿಸಿ ಹಣದೊಂದಿಗೆ ಪರಾರಿಯಾಗುತ್ತಿದ್ದ. ಹಲವು ಮನೆಗಳಲ್ಲಿ ಹಣ ಪಡೆದ ಬಳಿಕವೂ ರಸೀದಿ ನೀಡದಿದ್ದಾಗ ಅನುಮಾನಗೊಂಡ ಸ್ಥಳೀಯರು ಆತನನ್ನು ತಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಹೆಸ್ಕಾಂ ಸಿಬ್ಬಂದಿ ಅಲ್ಲ ಎಂಬುದು ಬಹಿರಂಗವಾಗಿದೆ.
ಇದನ್ನೂ ಓದಿ: ಚಾಮರಾಜನಗರ: ಮುಳ್ಳುಹಂದಿಯ ಡೆಡ್ಲಿ ಅಟ್ಯಾಕ್ಗೆ ಚಿರತೆ ಸಾವು!
ವಿಡಿಯೋ ಇಲ್ಲಿದೆ ನೋಡಿ:
ತಕ್ಷಣವೇ ಸಾರ್ವಜನಿಕರು ಹೆಸ್ಕಾಂ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹಳೆ ಹುಬ್ಬಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಹೆಸ್ಕಾಂ ಸಿಬ್ಬಂದಿ ಮನೆಗೆ ಬಂದಾಗ ಕಡ್ಡಾಯವಾಗಿ ಅಧಿಕೃತ ಗುರುತಿನ ಚೀಟಿ (ID Card) ಕೇಳಿ. ಹಣ ಪಾವತಿಸಿದ ತಕ್ಷಣ ಡಿಜಿಟಲ್ ಅಥವಾ ಭೌತಿಕ ರಸೀದಿ ಪಡೆಯಿರಿ. ಯಾವುದೇ ಅನುಮಾನವಿದ್ದರೆ ತಕ್ಷಣ ಸ್ಥಳೀಯ ಹೆಸ್ಕಾಂ ಕಚೇರಿ ಸಂಪರ್ಕಿಸಿ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ