ಎಸ್ಐಆರ್ನಲ್ಲಿ ಅಕ್ರಮ ಆರೋಪImage Credit source: x.com/JoshiPralhad
ಹುಬ್ಬಳ್ಳಿ, ಜುಲೈ 03: ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಬಗ್ಗೆ ಅಕ್ರಮದ ಆರೋಪಗಳು ಕೇಳಿ ಬರುತ್ತಿವೆ. ನಿನ್ನೆಯಷ್ಟೇ ರಾಮನಗರದಲ್ಲಿ ಚೌಟ್ರಿಯಲ್ಲಿ SIR ಮಾಡುತ್ತಿರುವ ಆರೋಪ ಕೇಳಿಬಂದಿತ್ತು. ಇದೀಗ ಹುಬ್ಬಳ್ಳಿ-ಧಾರವಾಡದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ ಬೃಹತ್ ಅಕ್ರಮ ಬಯಲಾಗಿದ್ದು, ಈ ಕುರಿತಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಹುಬ್ಬಳ್ಳಿ-ಧಾರವಾಡದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ ಬೃಹತ್ ಅಕ್ರಮ ಬಯಲಿಗೆ! ರಾಮನಗರ, ಶಿಗ್ಗಾಂವಿ-ಸವನೂರ ಬೆನ್ನಲ್ಲೇ ಈಗ ಹುಬ್ಬಳ್ಳಿ-ಧಾರವಾಡ ಪೂರ್ವ-72 ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 63, ಬೂತ್ ನಂ. 16 ರಲ್ಲೂ ಮತದಾರರ ಪಟ್ಟಿ ಪರಿಷ್ಕರಣೆಯ ನಿಯಮಬಾಹಿರ ಕೃತ್ಯ ಬಹಿರಂಗಗೊಂಡಿದೆ ಎಂದಿದ್ದಾರೆ.
ಪ್ರಲ್ಹಾದ್ ಜೋಶಿ ಟ್ವೀಟ್
ಹುಬ್ಬಳ್ಳಿ-ಧಾರವಾಡದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ ಬೃಹತ್ ಅಕ್ರಮ ಬಯಲಿಗೆ!
ರಾಮನಗರ, ಶಿಗ್ಗಾಂವಿ-ಸವನೂರ ಬೆನ್ನಲ್ಲೇ ಈಗ ಹುಬ್ಬಳ್ಳಿ-ಧಾರವಾಡ ಪೂರ್ವ-72 ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 63, ಬೂತ್ ನಂ. 16 ರಲ್ಲೂ ಮತದಾರರ ಪಟ್ಟಿ ಪರಿಷ್ಕರಣೆಯ (SIR) ನಿಯಮಬಾಹಿರ ಕೃತ್ಯ ಬಹಿರಂಗ ಗೊಂಡಿದೆ!
ಇಲ್ಲಿನ ಬಿಎಲ್‌ಒ (BLO) ಶ್ರೀಮತಿ ಮೇರಿ… pic.twitter.com/ZI3YMR7KiP— Pralhad Joshi (@JoshiPralhad) July 3, 2026
ಇಲ್ಲಿನ ಬಿಎಲ್‌ಒ ಶ್ರೀಮತಿ ಮೇರಿ ರಾಮಚಂದ್ರ ಹರಪನಾಳ ಅವರು ಕೇಂದ್ರ ಚುನಾವಣಾ ಆಯೋಗದ ನಿಯಮಗಳನ್ನು ಗಾಳಿಗೆ ತೂರಿ, ಮನೆ-ಮನೆಗೆ ಭೇಟಿ ನೀಡದೇ ಒಂದೇ ಸ್ಥಳದಲ್ಲಿ ಕುಳಿತು ಎನ್ಯೂಮರೇಷನ್ ಫಾರ್ಮ್‌ಗಳನ್ನು ಭರ್ತಿ ಮಾಡುತ್ತಿದ್ದ ಆಘಾತಕಾರಿ ದೃಶ್ಯ ಸಾರ್ವಜನಿಕವಾಗಿ ಬಹಿರಂಗವಾಗಿದೆ. ನಮ್ಮ ಬಿಎಲ್‌ಎ-2 ನೀಡಿದ ದೂರಿನ ಮೇರೆಗೆ, ಬಿಎಲ್‌ಎ-1 ಅವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಈ ಅಕ್ರಮವನ್ನು ಸಾಕ್ಷ್ಯ ಸಮೇತ ದಾಖಲಿಸಿಕೊಂಡಿದ್ದಾರೆ ಎಂದರು.
ಇದನ್ನೂ ಓದಿ: ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ: ಮತ್ತೊಂದು ವಿಡಿಯೋ ರಿಲೀಸ್ ಮಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ
ಚುನಾವಣಾ ಆಯೋಗದ ನಿಯಮಾವಳಿಗಳನ್ನು ಕಡೆಗಣಿಸಿ, ಆಡಳಿತ ಪಕ್ಷದ ಹಿತಾಸಕ್ತಿಗಾಗಿ ಸಾಂವಿಧಾನಿಕ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅಧಿಕಾರಿಗಳು ಮತ್ತು ಇದರ ಹಿಂದಿರುವ ಶಕ್ತಿಗಳ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನಮ್ಮ ಪ್ರಜಾಪ್ರಭುತ್ವದ ಆಶಯಗಳಿಗೇ ಬಗೆದ ದ್ರೋಹ ಎಂದ ಜೋಶಿ
ನಿನ್ನೆ ರಾಮನಗರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ನಡೆದಿದ್ದು, ಇಂದು ನಮ್ಮ ಲೋಕಸಭಾ ಕ್ಷೇತ್ರದ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ರಾಜ್ಯದ ಹಲವೆಡೆ ಆರಂಭವಾಗಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕಾನೂನುಬಾಹಿರವಾಗಿ, ವ್ಯವಸ್ಥಿತವಾಗಿ ಬೃಹತ್ ಅಕ್ರಮ ನಡೆಸಲಾಗುತ್ತಿದೆ. ಇದು ಕೇವಲ ನಿಯಮಗಳ ಉಲ್ಲಂಘನೆಯಲ್ಲ, ನಮ್ಮ ಪ್ರಜಾಪ್ರಭುತ್ವದ ಆಶಯಗಳಿಗೇ ಬಗೆದ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಸಂಪೂರ್ಣವಾಗಿ ಮೂಲೆಗೆ ತಳ್ಳಲಾಗಿದೆ. ಕೇವಲ ರಾಜಕೀಯ ಲಾಭಕ್ಕಾಗಿ, ಮತದಾರರ ಪಟ್ಟಿಯನ್ನು ತಮಗೆ ಬೇಕಾದಂತೆ ತಿರುಗಿಸಲು ಸರ್ಕಾರದ ಉನ್ನತ ಮಟ್ಟದಿಂದಲೇ ವ್ಯವಸ್ಥಿತ ಸಂಚು ರೂಪಿಸಲಾಗಿದೆ. ಸ್ವತಂತ್ರವಾಗಿ ನಡೆಯಬೇಕಾದ ಸಾಂವಿಧಾನಿಕ ಪ್ರಕ್ರಿಯೆಯಲ್ಲಿ ಸ್ಥಳೀಯ ಬಿಎಲ್ಒಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ಆಡಳಿತ ಯಂತ್ರದ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ.
ಮಸೀದಿಯಲ್ಲಿ ಕುಳಿತು ಫಾರ್ಮ್‌ಗಳ ಭರ್ತಿ
SIR ನಿಯಮಗಳ ಪ್ರಕಾರ ಮತಗಟ್ಟೆ ಅಧಿಕಾರಿಗಳು ಜಿಲ್ಲಾ ಚುನಾವಣಾ ಅಧಿಕಾರಿಗಳ ಕಟ್ಟುನಿಟ್ಟಿನ ನಿರ್ದೇಶನದಂತೆ ಕಡ್ಡಾಯವಾಗಿ ಮನೆ-ಮನೆಗೆ ತೆರಳಿ ಅಲ್ಲಿರುವ ಕುಟುಂಬ ಸದಸ್ಯರನ್ನು ಖುದ್ದಾಗಿ ಗುರುತಿಸಬೇಕು. ಆದರೆ ಆಘಾತಕಾರಿ ವಿಷಯವೆಂದರೆ, ಶಿಗ್ಗಾಂವಿ-ಸವಣೂರು ಕ್ಷೇತ್ರ ಸೇರಿದಂತೆ ರಾಜ್ಯದೆಲ್ಲೆಡೆ ಈ ನಿಯಮಗಳನ್ನೆಲ್ಲ ಗಾಳಿಗೆ ತೂರಿ, ಮಸೀದಿಯಲ್ಲಿ ಕುಳಿತು ಎನ್ಯೂಮರೇಷನ್ ಫಾರ್ಮ್‌ಗಳನ್ನು ಭರ್ತಿ ಮಾಡಿಕೊಡಲಾಗುತ್ತಿದೆ. ಇದನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ಬಹಿರಂಗವಾಗಿ ಪ್ರಚಾರ ಮಾಡಲಾಗುತ್ತಿದ್ದು, ರಾಜ್ಯದ ಅನೇಕ ಕಡೆಗಳಿಂದ ಇಂತಹದ್ದೇ ಅಕ್ರಮಗಳ ಬಗ್ಗೆ ಕರೆಗಳು ಬರುತ್ತಿವೆ.
ಇದನ್ನೂ ಓದಿ: SIR: ಬಿಎಲ್‌ಒಗಳು ಕಡ್ಡಾಯವಾಗಿ ಮನೆ ಮನೆಗೆ ಹೋಗಿ ಫಾರಂ ನೀಡಬೇಕು, ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಖಡಕ್ ಸೂಚನೆ
ಜನಸಾಮಾನ್ಯರ ಧ್ವನಿಯನ್ನು ಹತ್ತಿಕ್ಕಲು ನಡೆಸುತ್ತಿರುವ ಈ ವ್ಯವಸ್ಥಿತ ಪಿತೂರಿಯ ವಿರುದ್ಧ ತಕ್ಷಣವೇ ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥ ಅಧಿಕಾರಿಗಳು ಮತ್ತು ಇದರ ಹಿಂದಿರುವ ರಾಜಕೀಯ ಕೈಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 5:22 pm, Fri, 3 July 26
