ಹೆಂಡತಿ, ಮಕ್ಕಳನ್ನು ಕಳುಹಿಸಿಕೊಡಿ ಎಂದಿದ್ದಕ್ಕೆ ಅಳಿಯನಿಗೆ ಬೆಂಕಿ ಹಚ್ಚಿ ಕೊಲೆ!
ಆನೇಕಲ್, ಮೇ 08: ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ (Anekal) ಕೌಟುಂಬಿಕ ಕಲಹವೊಂದು ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಹೆಂಡತಿ ಮತ್ತು ಮಕ್ಕಳನ್ನು ಮನೆಗೆ ಕಳುಹಿಸಿಕೊಡುವಂತೆ ಕೇಳಲು ಹೋದ ವ್ಯಕ್ತಿಯ ಮೇಲೆ ಆತನ ಮಾವ ಮತ್ತು ಭಾವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆದಿದ್ದು, ವ್ಯಕ್ತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಸಾವಿಗೂ ಮುನ್ನ ತನ್ನ ಮೇಲಾದ ದೌರ್ಜನ್ಯದ ಕುರಿತು ವ್ಯಕ್ತಿ ಹೇಳಿಕೊಂಡಿದ್ದು, ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯಾಂಶಗಳು
- ಪತ್ನಿ-ಮಕ್ಕಳನ್ನು ಕರೆದೊಯ್ಯಲು ಬಂದ ಅಳಿಯನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಅತ್ತೆ ಮನೆಯವರು.
- 19 ದಿನಗಳ ಕಾಲ ಹೋರಾಡಿ ಮೃತಪಟ್ಟ ನವೀನ್
- ಮ್ಯಾಜಿಸ್ಟ್ರೇಟ್ ಎದುರು ತನ್ನ ಸಾವಿಗೆ ಕುಟುಂಬಸ್ಥರೇ ಕಾರಣವೆಂದು ಹೇಳಿಕೆ.
ಮನೆಗೆ ಬಾ ಎಂದಿದ್ದಕ್ಕೆ ಒಪ್ಪದ ಹೆಂಡತಿ
ಆನೇಕಲ್ ತಾಲೂಕಿನ ಚೂಡೇನಹಳ್ಳಿ ನಿವಾಸಿ ವಿ. ನವೀನ್ (25) ಕೊಲೆಯಾದ ದುರ್ದೈವಿ. ತೆಂಗಿನಕಾಯಿ ವ್ಯಾಪಾರಿಯಾಗಿದ್ದ ನವೀನ್, ಕಳೆದ ಏಪ್ರಿಲ್ 13 ರಂದು ಪತ್ನಿ ಸುಚಿತ್ರಾ ಮತ್ತು ಇಬ್ಬರು ಮಕ್ಕಳೊಂದಿಗೆ ಆನೇಕಲ್‌ನ ಜನತಾ ಕಾಲೋನಿಯಲ್ಲಿರುವ ಅತ್ತೆ ಮನೆಗೆ ಹೋಗಿದ್ದ. ಮರುದಿನ, ಏಪ್ರಿಲ್ 14 ರಂದು ನವೀನ್ ತನ್ನ ಪತ್ನಿ ಮತ್ತು ಮಕ್ಕಳನ್ನು ವಾಪಸ್ ಮನೆಗೆ ಕರೆದೊಯ್ಯಲು ಮುಂದಾದಾಗ ಪತ್ನಿ ಸುಚಿತ್ರಾ ನಿರಾಕರಿಸಿದ್ದಳು.
ಈ ವೇಳೆ ನವೀನ್ ತನ್ನ ಅತ್ತೆ-ಮಾವನ ಬಳಿ ಪತ್ನಿ ಮತ್ತು ಮಕ್ಕಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದ್ದ. ಇದರಿಂದ ಆಕ್ರೋಶಗೊಂಡ ಸುಚಿತ್ರಾ ಕುಟುಂಬಸ್ಥರು ನವೀನ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಮಾವ ಸಂಪಂಗಿ ಬಾಟಲಿಯಲ್ಲಿದ್ದ ಪೆಟ್ರೋಲನ್ನು ನವೀನ್ ಮೇಲೆ ಸುರಿದಿದ್ದಾರೆ. ಭಾವ ಮುನೇಷ್ ಬೆಂಕಿ ಹಚ್ಚಿದ್ದಾನೆ. ಇದೇ ವೇಳೆ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ನೀರು ಸುರಿದು ಬೆಂಕಿ ನಂದಿಸಿ, ನವೀನ್ನನ ರಕ್ಷಿಸಿದ್ದಾರೆ.
ಸಾವಿಗೂ ಮುನ್ನ ಸತ್ಯ ಬಿಚ್ಚಿಟ್ಟ ನವೀನ್
ತೀವ್ರ ಸುಟ್ಟ ಗಾಯಗಳಾಗಿದ್ದರೂ ನವೀನ್ ಸ್ವತಃ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ನೀಡಿದ ನವೀನ್, ತನ್ನ ಪತ್ನಿ ಸುಚಿತ್ರಾ, ಮಾವ ಸಂಪಂಗಿ, ಅತ್ತೆ ಮತ್ತು ಭಾವ ಮುನೇಷ್ ಸೇರಿ ತನಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಿದ್ದ.
ಇದನ್ನೂ ಓದಿ ಪಡಿತರ ಅಕ್ಕಿ ಕಳ್ಳ ಸಾಗಾಣೆದಾರರಿಂದ 3 ಲಕ್ಷ ರೂ. ವಸೂಲಿ! ಬಳ್ಳಾರಿ ಎಸ್ಪಿ ಗನ್ ಮ್ಯಾನ್ ಅಂದರ್
ಚಿಕಿತ್ಸೆ ಫಲಿಸದೆ ಪ್ರಾಣಬಿಟ್ಟ ವ್ಯಕ್ತಿ
ಘಟನೆ ನಡೆದ ಆರಂಭದಲ್ಲಿ ಆನೇಕಲ್ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ 19 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ನವೀನ್, ಮೇ 2 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಆತನ ಹೇಳಿಕೆಯ ನಂತರ ಆ ಪ್ರಕರಣವನ್ನು ಕೊಲೆಯೆಂದು ಬದಲಾಯಿಸಲಾಗಿದೆ.
ಈಗಾಗಲೇ ನವೀನ್ ಮಾವ ಸಂಪಂಗಿ ಮತ್ತು ಭಾವ ಮುನೇಷ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಪತ್ನಿ ಮತ್ತು ಅತ್ತೆಯ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದ್ದು, ಸದ್ಯಕ್ಕೆ ಅವರನ್ನು ಬಂಧಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
