ಹೆಚ್.ಡಿ.ಕುಮಾರಸ್ವಾಮಿImage Credit source: tv9 kannada
ಬೆಂಗಳೂರು, ಜುಲೈ 16: ‘‘ಹೆಚ್ಎಂಟಿ (HMT) ಕಾರ್ಖಾನೆಗೆ ಹೊಸ ರೂಪ ನೀಡಿ, ಅದನ್ನು ಪುನರಾರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ, ರಾಜ್ಯ ಸರ್ಕಾರ ನಿರಂತರವಾಗಿ ಕಾರ್ಖಾನೆಯ ಮೇಲೆ ದಾಳಿ ಮಾಡುತ್ತಿದ್ದು, ಭೂಮಿಯನ್ನು ಕಬಳಿಸುವ ಹುನ್ನಾರ ನಡೆಸಿದೆ’’ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.
ಹೆಚ್ಎಂಟಿ ಕಾರ್ಖಾನೆ ಕ್ಯಾಂಪಸ್ಗೆ ಹೆಚ್ಡಿ ಕುಮಾರಸ್ವಾಮಿ ದಿಢೀರ್ ಭೇಟಿ
ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಹೆಚ್ಎಂಟಿ ಕಾರ್ಖಾನೆ ಕ್ಯಾಂಪಸ್ಗೆ ಇಂದು ದಿಢೀರ್ ಭೇಟಿ ನೀಡಿ ಹೆಚ್ಡಿ ಕುಮಾರಸ್ವಾಮಿ, ಕಾರ್ಖಾನೆ ಪರಿಶೀಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘‘ಹೆಚ್ಎಂಟಿ ವಿಷಯದಲ್ಲಿ ಯಾಕೆ ಇಷ್ಟು ಚರ್ಚೆಯಾಗುತ್ತಿದೆ. ಮೋದಿ ನಾಯಕಯತ್ವದಲ್ಲಿ ನಾನು ಸಚಿವನಾಗಲು ಅವಕಾಶ ಕೊಟ್ಟಿದ್ದಾರೆ. ನನಗೆ ಬೃಹತ್ ಕೈಗಾರಿಕೆ, ಉಕ್ಕು ಖಾತೆ ಜವಾಬ್ದಾರಿ ನೀಡಿದ್ದಾರೆ. 2-3 ನಿರ್ಧಾರ ಮಾಡಿ 2 ವರ್ಷದಿಂದ ಪ್ರಯತ್ನ ಮಾಡುತ್ತಿದ್ದೇನೆ. ಕಾರ್ಖಾನೆ ಪುನಾರಂಭಿಸಲು ನಾವು ತೀರ್ಮಾನ ಮಾಡಿದ್ದೇವೆ’’ ಎಂದರು.
ಇದನ್ನೂ ಓದಿ: ‘ನಾನು ತಪ್ಪು ಮಾಡಿದ್ದರೆ ಪೊರಕೆಯಿಂದ ನನಗೆ ಹೊಡೆಯಿರಿ’: ಸಿಎಂ ಡಿಕೆ ಶಿವಕುಮಾರ್
‘‘ಇನ್ನು ಹೆಚ್ಎಂಟಿ ಕಾರ್ಖಾನೆ ಶುರುವಾದಾಗ ನಾವು ಸಣ್ಣಮಕ್ಕಳು. ಬೆಳಗ್ಗೆ 7 ಗಂಟೆಗೆ ಹೆಚ್ಎಂಟಿ ಕಂಪನಿ ಬಸ್ಗಳು ಓಡಾಡುತ್ತಿದ್ದವು. ಇಂದು ಹೆಚ್ಎಂಟಿ ಸಂಪೂರ್ಣ ಚಿತ್ರಣವನ್ನು ನೀವು ನೋಡಿದ್ದೀರಿ, ಒಂದು ಕಾಲದಲ್ಲಿ ಹೆಚ್ಎಂಟಿ ಉತ್ತಮ ಕಾರ್ಖಾನೆಯಾಗಿತ್ತು. ಕಾರ್ಮಿಕರ ದುಡಿಮೆಯಿಂದ 6 ಕಡೆ ದೊಡ್ಡ ಕಾರ್ಖಾನೆ ನಿರ್ಮಿಸಿದ್ದರು. ಹೆಚ್ಎಂಟಿ ಕಾರ್ಖಾನೆ ಅದ್ಭುತವಾಗಿ ನಡೆಯುತ್ತಿತ್ತು. ಕಾರ್ಖಾನೆಯಲ್ಲಿ ಸಣ್ಣಪುಟ್ಟ ಕಾರ್ಮಿಕರು ಇದ್ದಾರೆ. ಮುಖ್ಯ ಕಾರ್ಖಾನೆ ಈಗ ಶೂಟಿಂಗ್ಗೆ ಬಳಕೆಯಾಗುತ್ತಿದೆ’’ ಎಂದು ಮಾಹಿತಿ ನೀಡಿದರು.
ಸಚಿವ ಈಶ್ವರ ಖಂಡ್ರೆಗೆ ಕುಮಾರಸ್ವಾಮಿ ತಿರುಗೇಟು
“ಹೆಚ್ಎಂಟಿ ಕಾರ್ಖಾನೆ ಇರುವ ಜಾಗವನ್ನು 1967-68ರ ಅವಧಿಯಲ್ಲಿ ಮೈಸೂರು ಮಹಾರಾಜರು ಕಾನೂನುಬದ್ಧವಾಗಿ ಉಡುಗೊರೆಯಾಗಿ ನೀಡಿದ್ದರು. ನ್ಯಾಯಬದ್ಧವಾಗಿ ಸಿಕ್ಕಿರುವ ಈ ಜಾಗದ ವಿಷಯದಲ್ಲಿ ಈಗಿನ ರಾಜ್ಯ ಸರ್ಕಾರ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ನಿತ್ಯವೂ ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ಕೊಡುತ್ತಿದೆ. ಹೆಚ್ಎಂಟಿ ಜಾಗವನ್ನು ಮಾರಾಟ ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಆರೋಪಿಸುತ್ತಿದ್ದಾರೆ. ಇದನ್ನು ನಿಮ್ಮ ಅರಣ್ಯ ಇಲಾಖೆಯವರೇನಾದರೂ ಉಳಿಸಿದ್ದಾರಾ? ಕೋಲಾರದಲ್ಲಿ ಏನಾಗಿದೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ” ಎಂದು ತಿರುಗೇಟು ನೀಡಿದರು.
ಮತ್ತೊಬ್ಬರನ್ನು ತೆಗೆಳಲು ಟೌನ್ಶಿಪ್ ಬಗ್ಗೆ ಮಾತನಾಡುತ್ತಿಲ್ಲ: ಹೆಚ್ಡಿ ಕುಮಾರಸ್ವಾಮಿ
ಬಿಡದಿ ಟೌನ್ಶಿಪ್ ವಿರೋಧಿಸಿ ರೈತರ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ‘‘ಆಡಳಿತ ನಡೆಸುವವರ ಕಣ್ಣು ತೆರೆಸಲು ಸಹಾಯ ಆಗುತ್ತದೆ. ನಾನು ಸ್ಪಷ್ಟವಾಗಿ ಹೇಳುತ್ತೇನೆ ಪ್ರಚಾರಕ್ಕಾಗಿ ಮಾತನಾಡುತ್ತಿಲ್ಲ. ಮತ್ತೊಬ್ಬರನ್ನು ತೆಗೆಳಲು ಟೌನ್ಶಿಪ್ ಬಗ್ಗೆ ಮಾತನಾಡುತ್ತಿಲ್ಲ. ನಿನ್ನೆ ಸಿಎಂ ಡಿಕೆ ಶಿವಕುಮಾರ್ ತುಂಬಾ ನೋವಿನಲ್ಲಿ ಮಾತನಾಡಿದ್ದಾರೆ. ನಮಗೂ ನೋವು ಕೊಟ್ಕೋ ಬೇಡಿ ಎಂದು ಸಿಎಂ ಹೇಳಿದ್ದಾರೆ. ರಾಜ್ಯದಲ್ಲಿ ಇಂತಹ ಘಟನೆಯಿಂದ ನೋವಾಗುವುದು ಸಹಜ. ಕಠಿಣ ಹೃದಯ ಇದ್ದವರಿಗೆ ಯಾವುದೇ ರೀತಿಯ ನೋವಾಗಲ್ಲ ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವರದಿ: ಈರಣ್ಣ ಬಸವ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
