ಸಿಎಂ ಡಿಕೆ ಶಿವಕುಮಾರ್ Image Credit source: tv9 kannada
ಬೆಂಗಳೂರು, ಜೂನ್ 13: ಬಿಡದಿ ಬಳಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ವಿಚಾರ ಸದ್ಯ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಜೂನ್ 22ಕ್ಕೆ ಬೃಹತ್ ಪ್ರತಿಭಟನೆಗೆ ರೈತರು ಮುಂದಾಗಿದೆ. ಸದ್ಯ ಈ ವಿಚಾರವಾಗಿ ಸಿಎಂ ಡಿಕೆ ಶಿವಕುಮಾರ್ (DK Shivakumar) ಪ್ರತಿಕ್ರಿಯಿಸಿದ್ದು, ಹೆಚ್ಡಿ ಕುಮಾರಸ್ವಾಮಿ (HD Kumaraswamy) ಮಾರ್ಗದರ್ಶನದಂತೆ ನಾವು ಈ ಯೋಜನೆ ಮುಂದುವರೆಸುತ್ತಿದ್ದೇವೆ. ದೆಹಲಿ ಭೇಟಿ ವೇಳೆ ಬಿಡದಿ ಟೌನ್ಶಿಪ್ ಬಗ್ಗೆ ಚರ್ಚೆ ಮಾಡಿದ್ದೇನೆ. ಪ್ರಧಾನಿ ಮೋದಿ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರೇ ಹೊಗಳಿದ್ದಾರೆ ಎಂದ ಸಿಎಂ
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಡಿಸಿ, SP, ಸಿಇಒಗಳ ಜೊತೆ ಸಭೆ ಬಳಿಕ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರಿನ ಮೇಲೆ ಒತ್ತಡವಿದೆ, ಟೌನ್ಶಿಪ್ ಅಗತ್ಯವಿದೆ. ನೀನು ಒಳ್ಳೆಯ ಕೆಲಸ ಮಾಡುತ್ತಿದ್ದೀಯಾ. ನಾನು 7ರಿಂದ 8 ಟೌನ್ಶಿಪ್ ಮಾಡಿದ್ದೇನೆ, ನೀವು ಮಾಡಿ. ನಿಮಗೆ ಶುಭ ಹಾರೈಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದರು.
10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಡಿಕೆ ಶಿವಕುಮಾರ್ ಖಡಕ್ ಸೂಚನೆ
ರಾಜ್ಯದ ಜನರು ನಮ್ಮ ಮೇಲೆ ಬಹಳ ನಿರೀಕ್ಷೆಗಳನ್ನಿಟ್ಟಿದ್ದಾರೆ. ಕಚೇರಿಗಳಿಗೆ ಬಂದ ಜನರಿಗೆ ಅಧಿಕಾರಿಗಳು ಸ್ಪಂದಿಸಬೇಕು. ಹಾಗಾಗಿ ಎಲ್ಲ ಇಲಾಖೆಯ ಅಧಿಕಾರಿಗಳು ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ನಮ್ಮದು ಒಂದೇ ತಂಡ. ಕರ್ನಾಟಕಕ್ಕಾಗಿ ಕೆಲಸ ಮಾಡೋಣ ಎಂದು ಸಿಎಂ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಕಾನೂನು ಬಾಹಿರ ಕೃತ್ಯಗಳಿಗೆ ಆಸ್ಪದ ನೀಡುವುದಿಲ್ಲ. ಅಧಿಕಾರಿಗಳ ಮೇಲೆ ಸಚಿವರು, ಶಾಸಕರು ಒತ್ತಡ ಹೇರಬಾರದು. ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿ ನಾಮಫಲಕದಲ್ಲಿ ಓರ್ವ ಹಿರಿಯ ಅಧಿಕಾರಿ ನಂಬರ್ ನಮೂದಿಸಬೇಕು. ಸಿಬ್ಬಂದಿ ಯಾರೇ ಲಂಚ ಕೇಳಿದರೂ ಆ ಸಂಖ್ಯೆ ಸಂಪರ್ಕಿಸಬೇಕು. ಯಾರೊಬ್ಬರೂ ಒಂದು ರೂಪಾಯಿ ಲಂಚ ಕೊಡುವಂತಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಶೂನ್ಯಕ್ಕೆ ಇಳಿಸಲು ನಿರ್ಧರಿಸಿದ್ದೇವೆ. ಭ್ರಷ್ಟಾಚಾರ ಮುಕ್ತ ಕರ್ನಾಟಕ ಮತ್ತು ಸರ್ಕಾರ ನಮ್ಮದಾಗಬೇಕು ಎಂಬ ಆಶಯವಿದೆ ಎಂದರು.
ಮತದಾನ ಹಕ್ಕು ಕಳೆದುಕೊಂಡರೆ ಸರ್ಕಾರಿ ಸೌಲಭ್ಯಗಳು ಸಿಗುವುದು ಕಷ್ಟ
ರಾಜ್ಯದಲ್ಲಿ ಎಸ್ಐಆರ್ ಪ್ರಾರಂಭ ಆಗುತ್ತಿದೆ. ಅರ್ಜಿ ಫಾರ್ಮ್ ತುಂಬಿದರೆ ಮಾತ್ರ ಮತ ಉಳಿಯುತ್ತದೆ. ಮೂರು ಸಲ ಬಿಎಲ್ಒಗಳು ಮನೆಗೆ ಬರ್ತಾರೆ. ಎಲ್ಲಾ ದಾಖಲೆಗಳನ್ನು ನೀಡಿ ಅರ್ಜಿ ತುಂಬಬೇಕು. ಪ್ರತಿಯೊಬ್ಬ ಮತದಾರರು ತಮ್ಮ ಮತಗಳನ್ನ ಉಳಿಸಿಕೊಳ್ಳಲಿ. ಮತದಾನ ಹಕ್ಕು ಕಳೆದುಕೊಂಡರೆ ಸರ್ಕಾರಿ ಸೌಲಭ್ಯಗಳು ಸಿಗುವುದು ಕಷ್ಟವಾಗುತ್ತೆ ಎಂದು ಹೇಳಿದ್ದಾರೆ. ಇನ್ನು ಗೃಹಲಕ್ಷ್ಮೀ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಯೋಜನೆಯ ಸೌಲಭ್ಯ ಅರ್ಹರಿಗೆ ತಲುಪಬೇಕು. ಹೀಗಾಗಿ ಯೋಜನೆಯನ್ನು ನಾವು ನಿಲ್ಲಸಲು ಹೋಗಲ್ಲ. ಆದರೆ ಗೃಹಲಕ್ಷ್ಮೀ ಯೋಜನೆಗೆ ಮತ್ತೆ ಅರ್ಜಿಯನ್ನ ಸಲ್ಲಿಸಬೇಕು. ಅದೇ ರೀತಿ ಗೃಹಜ್ಯೋತಿಗೂ ಕೂಡ ಮತ್ತೆ ಅರ್ಜಿಯನ್ನ ಸಲ್ಲಿಸಬೇಕು ಎಂದಿದ್ದಾರೆ.
ವರದಿ: ಈರಣ್ಣ ಬಸವ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.