ಮನೆಯಲ್ಲಿ ಗೋಡೆಯ ಮೇಲೆ ಹಲ್ಲಿ (Lizards) ಕಾಣಿಸಿಕೊಂಡ ತಕ್ಷಣ ಕೆಲವರು ಅದನ್ನು ಲೆಕ್ಕಿಸದೇ ತಮ್ಮ ಕೆಲಸದಲ್ಲಿ ತೊಡಗುತ್ತಾರೆ. ಆದರೆ ಮತ್ತೊಂದಿಷ್ಟು ಜನ ಹಲ್ಲಿಯನ್ನು ನೋಡಿದ ಕೂಡಲೇ ಕಿಲೋ ಮೀ. ದೂರ ಹೋಗುತ್ತಾರೆ. ಆದರೆ ಈ ರೀತಿ ಆಗುವುದಕ್ಕೆ ಕಾರಣವೇನು ಎಂದು ಎಂದಾದರೂ ಯೋಚಿಸಿದ್ದೀರಾ… ಮಾನಸಿಕ ಆರೋಗ್ಯ ತಜ್ಞರ ಪ್ರಕಾರ, ಹಲ್ಲಿಯನ್ನು ನೋಡಿದ ಕೂಡಲೇ ಹೃದಯದ ಬಡಿತ ಹೆಚ್ಚಾಗುವುದು, ಬೆವರುವುದು, ನಡುಕ ಉಂಟಾಗುವುದು ಅಥವಾ ಆ ಸ್ಥಳದಿಂದ ದೂರ ಹೋಗಬೇಕೆನ್ನಿಸುವುದು ಸಾಮಾನ್ಯ ಲಕ್ಷಣ. ಆದರೆ ಇದು ಕೆಲವೊಮ್ಮೆ ಸಾಮಾನ್ಯ ಭಯವನ್ನು ಮೀರಿದ ಫೋಬಿಯಾ ಕೂಡ ಆಗಿರಬಹುದು. ಹಾಗಾದರೆ ಇದನ್ನು ಫೋಬಿಯಾ ಹೌದೋ ಅಲ್ಲವೋ ಎಂದು ಗುರುತಿಸುವುದು ಹೇಗೆ, ಇದರಿಂದ ಹೊರಬರಲು ಸಾಧ್ಯವೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯವಾಗಿ, ಭಯವು ಕೇವಲ ಹಲ್ಲಿಯಿಂದ ಮಾತ್ರ ಉಂಟಾಗುವುದಿಲ್ಲ. ಅದರ ರೂಪ, ವೇಗವಾಗಿ ಚಲಿಸುವ ಸ್ವಭಾವ ಮತ್ತು ಯಾವಾಗ ಎಲ್ಲಿ ಕಾಣಿಸಿಕೊಳ್ಳುತ್ತದೆ ಎಂಬ ಅನಿಶ್ಚಿತತೆ ಮೆದುಳಿನಲ್ಲಿ ಅಪಾಯದ ಸಂಕೇತಗಳನ್ನು ಸೃಷ್ಟಿಸಬಹುದು. ವಿಶೇಷವಾಗಿ ಬಾಲ್ಯದ ಅನುಭವಗಳು, ಕುಟುಂಬದವರ ವರ್ತನೆ ಮತ್ತು ಸಾಮಾಜಿಕ ಪ್ರಭಾವಗಳು ಈ ಭಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮನೆಯಲ್ಲಿರುವವರು ಹಲ್ಲಿಯನ್ನು ನೋಡಿ ಅತಿಯಾಗಿ ಹೆದರುವುದನ್ನು ಕಂಡು ಬೆಳೆದ ಮಕ್ಕಳಲ್ಲೂ ಇದೇ ಭಯ ಬೆಳೆಯುವ ಸಾಧ್ಯತೆ ಇದೆ.
ಫೋಬಿಯಾ ಎಂದು ಹೇಗೆ ಗುರುತಿಸಬೇಕು?
ಹಲ್ಲಿಗಳನ್ನು ಇಷ್ಟಪಡದಿರುವುದು ಸಾಮಾನ್ಯ. ಆದರೆ ಆ ಭಯವು ದೈನಂದಿನ ಜೀವನದ ಮೇಲೆ ಪರಿಣಾಮ ಬೀಳಲು ಆರಂಭಿಸಿದರೆ ಅದನ್ನು ಫೋಬಿಯಾ ಎಂದು ಪರಿಗಣಿಸಬಹುದು. ಉದಾಹರಣೆಗೆ, ಹಲ್ಲಿ ಕಾಣಿಸಬಹುದು ಎಂಬ ಕಾರಣಕ್ಕೆ ಕೆಲವು ಕೊಠಡಿಗಳಿಗೆ ಹೋಗುವುದನ್ನು ತಪ್ಪಿಸುವುದು, ಮನೆಯಲ್ಲಿ ಒಬ್ಬರೇ ಇರಲು ಹೆದರಿಕೆ, ಪದೇ ಪದೇ ಗೋಡೆಗಳು ಮತ್ತು ಮೇಲ್ಛಾವಣಿಯ ಕಡೆ ನೋಡುವುದು ಮುಂತಾದ ವರ್ತನೆಗಳು ಕಂಡುಬಂದರೆ ತಜ್ಞರ ಸಲಹೆ ಅಗತ್ಯವಾಗಬಹುದು.
ಚಿಕಿತ್ಸೆ ಸಾಧ್ಯವೇ?
ತಜ್ಞರ ಪ್ರಕಾರ, ಹಲ್ಲಿಗಳ ಭಯಕ್ಕೆ ಪರಿಣಾಮಕಾರಿ ಚಿಕಿತ್ಸೆಗಳಿವೆ. ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (CBT) ಹಾಗೂ ಗ್ರಾಡ್ಯುಯಲ್ ಎಕ್ಸ್‌ಪೋಸರ್ ಥೆರಪಿ ಮೂಲಕ ಈ ಭಯವನ್ನು ಹಂತಹಂತವಾಗಿ ಕಡಿಮೆ ಮಾಡಬಹುದು. ಸರಿಯಾದ ಮಾರ್ಗದರ್ಶನ, ಸಹನೆ ಮತ್ತು ಚಿಕಿತ್ಸೆಯ ಮೂಲಕ ಹಲವು ವರ್ಷಗಳಿಂದ ಕಾಡುತ್ತಿರುವ ಫೋಬಿಯಾವನ್ನೂ ನಿಯಂತ್ರಿಸಲು ಸಾಧ್ಯ.
ಗಮನಿಸಿ: ಹಲ್ಲಿಗಳ ಭಯವು ನಿಮ್ಮ ದಿನನಿತ್ಯದ ಚಟುವಟಿಕೆಗಳು, ಮನಶಾಂತಿ ಅಥವಾ ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ, ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಉತ್ತಮ. ಸಮಯಕ್ಕೆ ಸರಿಯಾದ ನೆರವು ಪಡೆಯುವುದರಿಂದ ಭಯವನ್ನು ಎದುರಿಸಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
