ಹೆಲ್ತ್ ಇನ್ಷೂರೆನ್ಸ್ ಖರೀದಿಸುವ ಮುನ್ನ, ಈ 5 ಅಂಶಗಳು ಗಮನದಲ್ಲಿರಲಿ… – Kannada News | Health Insurance, important things to observe before buying policy

ಆರೋಗ್ಯ ವಿಮೆ (Health Insurance) ಇವತ್ತು ಬಹಳ ಮುಖ್ಯ. ವೈದ್ಯಕೀಯ ವೆಚ್ಚಗಳು ಗಣನೀಯವಾಗಿ ಹೆಚ್ಚುತ್ತಿವೆ. ವೈದ್ಯಕೀಯ ಸೇವೆಗಳ ಹಣದುಬ್ಬರ ಶೇ. 10ಕ್ಕಿಂತ ಹೆಚ್ಚಿನ ದರದಲ್ಲಿ ಏರುತ್ತಿದೆ. ನಾವು ಕಷ್ಟಪಟ್ಟು ಉಳಿಸಿದ ಹಣವೆಲ್ಲವೂ ಒಂದೇ ಬಾರಿ ಆಸ್ಪತ್ರೆಗೆ ವ್ಯಯವಾಗಿ ಹೋಗಬಹುದು. ಹೀಗಾಗಿ, ಆರೋಗ್ಯ ವಿಮೆ ತುಂಬಾ ಮುಖ್ಯ. ಹಾಗೆಯೇ, ಸರಿಯಾದ ವಿಮೆ ಆಯ್ಕೆ ಮಾಡಿಕೊಳ್ಳುವುದೂ ಕೂಡ ಮುಖ್ಯ. ಇಲ್ಲದಿದ್ದರೆ ಅಧಿಕ ಪ್ರೀಮಿಯಮ್​ನಲ್ಲಿ ಖರೀದಿಸಿದ ವಿಮೆಯು ಅಗತ್ಯ ಸಂದರ್ಭದಲ್ಲಿ ನಿರುಪಯುಕ್ತ ಎನಿಸಬಹುದು, ಅಥವಾ ಹೆಚ್ಚಿನ ಭಾಗದ ವೆಚ್ಚವನ್ನು ಭರಿಸದೇ ಹೋಗಬಹುದು. ಹೀಗಾಗಿ, ವಿಮೆ ಖರೀದಿಸುವ ಮುನ್ನ ಗಮನಿಸಬೇಕಾದ ಈ 5 ಪ್ರಮುಖ ಅಂಶಗಳು ತಿಳಿದಿರಲಿ.

1. ಅಸ್ತಿತ್ವದಲ್ಲಿರುವ ಕಾಯಿಲೆಗಳ ಸಂಗತಿ

ವಿಮೆ ಖರೀದಿಸುವಾಗ ನಿಮಗೆ ಈಗಾಗಲೇ ಇರುವ ಆರೋಗ್ಯ ಸಮಸ್ಯೆಗಳನ್ನು (PED – Pre-Existing Diseases – ಮಧುಮೇಹ, ರಕ್ತದೊತ್ತಡ ಇತ್ಯಾದಿ) ಕಡ್ಡಾಯವಾಗಿ ಮತ್ತು ಪ್ರಾಮಾಣಿಕವಾಗಿ ಬಹಿರಂಗಪಡಿಸಬೇಕು.

ಮಾಹಿತಿಯನ್ನು ಮರೆಮಾಚಿ ವಿಮೆ ಪಡೆದರೆ, ಮುಂದೆ ಕ್ಲೈಮ್ ಸಲ್ಲಿಸಿದಾಗ ವಿಮಾ ಸಂಸ್ಥೆಯು ಅದನ್ನು ತಿರಸ್ಕರಿಸುವ ಸಂಪೂರ್ಣ ಹಕ್ಕನ್ನು ಹೊಂದಿರುತ್ತದೆ. ಪ್ರೀ ಎಕ್ಸಿಸ್ಟಿಂಗ್ ಕಾಯಿಲೆ ಇದ್ದಾಗ ಅದಕ್ಕೆ ಸಾಮಾನ್ಯವಾಗಿ 1 ರಿಂದ 3 ವರ್ಷಗಳ ವೇಟಿಂಗ್ ಪೀರಿಯಡ್ (Waiting Period) ಇರುತ್ತದೆ. ಅಂದರೆ, ಈ ಅವಧಿಯಲ್ಲಿ ಆ ಕಾಯಿಲೆ ಸಂಬಂಧ ಆಸ್ಪತ್ರೆಗೆ ದಾಖಲಾದರೆ ಇನ್ಷೂರೆನ್ಸ್ ಕವರ್ ಆಗುವುದಿಲ್ಲ.

2. ಕೋ-ಪೇಮೆಂಟ್ ಮತ್ತು ಸಬ್-ಲಿಮಿಟ್‌ಗಳು

  • ಕೋ-ಪೇಮೆಂಟ್ (Co-payment): ಒಟ್ಟು ಆಸ್ಪತ್ರೆ ವೆಚ್ಚದ ನಿರ್ದಿಷ್ಟ ಶೇಕಡಾವಾರು ಹಣವನ್ನು (ಉದಾಹರಣೆಗೆ 10% – 20%) ನೀವೇ ಜೇಬಿನಿಂದ ಪಾವತಿಸಬೇಕಾಗುತ್ತದೆ.
  • ಸಬ್-ಲಿಮಿಟ್ (Sub-limits): ಕೊಠಡಿ ಭತ್ಯೆ (Room Rent), ಆಂಜಿಯೋಪ್ಲಾಸ್ಟಿ ಅಥವಾ ಕ್ಯಾಟರಾಕ್ಟ್‌ನಂತಹ ನಿರ್ದಿಷ್ಟ ಚಿಕಿತ್ಸೆಗಳಿಗೆ ವಿಮಾ ಸಂಸ್ಥೆಯು ಗರಿಷ್ಠ ಮಿತಿಯನ್ನು ನಿಗದಿಪಡಿಸಿರುತ್ತದೆ.

ಕನಿಷ್ಠ ಅಥವಾ ಶೂನ್ಯ ಕೋ-ಪೇಮೆಂಟ್ ಮತ್ತು ಯಾವುದೇ ಸಬ್-ಲಿಮಿಟ್ ಇಲ್ಲದ ಪಾಲಿಸಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ.

ಇದನ್ನೂ ಓದಿ: ಆದಾಯ ತೆರಿಗೆ ನೋಟೀಸ್ ಬಂತಾ? ಅದು ವಂಚಕರ ಜಾಲವಾ? ಆನ್​ಲೈನ್​ನಲ್ಲೇ ಪರಿಶೀಲಿಸಿ

3. ಆಸ್ಪತ್ರೆಯ ಕೊಠಡಿ ಬಾಡಿಗೆ ಮಿತಿ

ಪಾಲಿಸಿಯಲ್ಲಿ ಕೊಠಡಿ ಬಾಡಿಗೆಗೆ ಮಿತಿ ಇದೆಯೇ ಎಂಬುದನ್ನು ಪರಿಶೀಲಿಸಿ. ಕೊಠಡಿ ಭತ್ಯೆಯ ಮೇಲೆ ಮಿತಿಯಿದ್ದರೆ (Room Rent Capping), ಅದು ಆಸ್ಪತ್ರೆಯ ಇತರ ಸೇವಾ ವೆಚ್ಚಗಳ ಮೇಲೆಯೂ (Doctor Fee, Nursing Charges) ಪರಿಣಾಮ ಬೀರುತ್ತದೆ (Proportional Deduction).
ಉದಾಹರಣೆಗೆ, ನೀವು ನಿಗದಿತ ಮಿತಿಗಿಂತ ಹೆಚ್ಚಿನ ದರದ ಕೊಠಡಿ ಆಯ್ಕೆ ಮಾಡಿದರೆ, ಹೆಚ್ಚುವರಿ ವೆಚ್ಚವನ್ನು ನೀವೇ ಭರಿಸಬೇಕಾಗುತ್ತದೆ.

4. ಕಾಯುವಿಕೆ ಅವಧಿ ಮತ್ತು ಎಕ್ಸ್​ಕ್ಲೂಶನ್ಸ್​ಗಳು

ಪಾಲಿಸಿ ಡಾಕ್ಯುಮೆಂಟ್​ನಲ್ಲಿ ಕಾಯುವಿಕೆ ಅವಧಿಯ ನಿಯಮಗಳೇನು, ಎಕ್ಸ್​ಕ್ಲೂಶನ್​ಗಳೇನಿವೆ ಎಂಬುದನ್ನು ಗಮನಿಸಿ. ಸಾಮಾನ್ಯವಾಗಿ, ಪಾಲಿಸಿ ಆರಂಭವಾದ ಮೊದಲ 30 ದಿನಗಳಲ್ಲಿ ತುರ್ತು ಅಪಘಾತಗಳನ್ನು ಹೊರತುಪಡಿಸಿ ಇತರ ಕಾಯಿಲೆಗಳಿಗೆ ಕ್ಲೈಮ್ ಮಾಡುವಂತಿಲ್ಲ. ಪ್ರೀ ಎಕ್ಸಿಸ್ಟಿಂಗ್ ಕಾಯಿಲೆಗಳಿಗೆ 1-3 ವರ್ಷ ವೇಟಿಂಗ್ ಪೀರಿಯಡ್ ಇದ್ದು, ಆಗಲೂ ಕ್ಲೇಮ್ ಆಗುವುದಿಲ್ಲ.

ಪ್ರೀ ಎಕ್ಸಿಸ್ಟಿಂಗ್ ಅಲ್ಲದಿದ್ದರೂ ಹರ್ನಿಯಾ (Hernia), ಕಣ್ಣಿನ ಪೊರೆ (Cataract), ಕಿಡ್ನಿ ಸ್ಟೋನ್ ಸಮಸ್ಯೆ ಮುಂತಾದವುಗಳಿಗೆ 1 ರಿಂದ 2 ವರ್ಷಗಳ ಕಾಯುವಿಕೆ ಅವಧಿ ಇರುತ್ತದೆ.

ಶಾಶ್ವತ ವಿನಾಯಿತಿಗಳು (Exclusions): ಕಾಸ್ಮೆಟಿಕ್ ಸರ್ಜರಿ, ಹಾರ್ಮೋನ್ ಚಿಕಿತ್ಸೆ ಮುಂತಾದ ಕೆಲವು ವೆಚ್ಚಗಳು ವಿಮೆಯ ವ್ಯಾಪ್ತಿಗೆ ಬರುವುದಿಲ್ಲ. ಈ ಎಕ್ಸ್​ಕ್ಲೂಶನ್​ಗಳ ಪಟ್ಟಿಯಲ್ಲಿ ಯಾವ್ಯಾವು ಇವೆ ಎಂಬುದನ್ನು ಗಮನಿಸಿ ನೋಡಿ.

ಇದನ್ನೂ ಓದಿ: ಜಾತಿ ಪ್ರಮಾಣ ಪತ್ರದಲ್ಲಿನ ವಿಳಾಸ ಬದಲಾಯಿಸಬೇಕೇ? ಹಾಗಾದ್ರೆ ಹೀಗೆ ಮಾಡಿ

5. ನೆಟ್‌ವರ್ಕ್ ಆಸ್ಪತ್ರೆಗಳು ಮತ್ತು ಕ್ಯಾಶ್‌ಲೆಸ್ ಸೌಲಭ್ಯ

ನಿಮ್ಮ ನಗರದಲ್ಲಿ ಅಥವಾ ನಿಮ್ಮ ಮನೆಗೆ ಹತ್ತಿರವಿರುವ ಪ್ರಮುಖ ಆಸ್ಪತ್ರೆಗಳು ಆ ವಿಮಾ ಸಂಸ್ಥೆಯ ನೆಟ್‌ವರ್ಕ್ ಆಸ್ಪತ್ರೆಗಳ ಪಟ್ಟಿಯಲ್ಲಿವೆಯೇ ಎಂದು ಪರಿಶೀಲಿಸಿ. ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭದಲ್ಲಿ ಜೇಬಿನಿಂದ ಹಣ ನೀಡದೆ ‘ಕ್ಯಾಶ್‌ಲೆಸ್’ (Cashless Claim) ಚಿಕಿತ್ಸೆ ಪಡೆಯಲು ಸುಲಭವಾಗುತ್ತದೆ. ಇಲ್ಲದಿದ್ದರೆ ಡಿಸ್ಚಾರ್ಜ್ ಆದ ಬಳಿಕ ದಾಖಲೆಗಳನ್ನು ಸಲ್ಲಿಸಿ ರೀಇಂಬುರ್ಸ್ಮೆಂಟ್ ಪಡೆಯಬೇಕಾಗುತ್ತದೆ.

ನೆನಪಿರಲಿ: ಪಾಲಿಸಿ ದಾಖಲೆಯನ್ನು (Policy Document) ಪೂರ್ಣವಾಗಿ ಓದಿ, ನಿಯಮಗಳು ಮತ್ತು ನಿಬಂಧನೆಗಳನ್ನು (Terms & Conditions) ಸರಿಯಾಗಿ ಅರ್ಥೈಸಿಕೊಂಡ ನಂತರವೇ ವಿಮೆ ಖರೀದಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:40 pm, Tue, 21 July 26

Source link

Leave a Reply

Your email address will not be published. Required fields are marked *