ರಾಜ್ಯ ಪ್ರಶಸ್ತಿ ಪುರಸ್ಕೃತ ‘ಕೆಂಪಿರ್ವೆ’ ಖ್ಯಾತಿಯ ವೆಂಕಟ್ ಭಾರದ್ವಾಜ್ ಅವರು ‘ರಕ್ಕಿ’ (Rakky) ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸುರೇಶ್ ಸಾಲಿಗ್ರಾಮ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಅವರು ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದರು. ಈ ಸಿನಿಮಾದಲ್ಲಿ ರಕ್ಕಿ ಸುರೇಶ್ (Rakky Suresh) ಅವರು ಹೀರೋ ಆಗಿ ನಟಿಸಿದ್ದಾರೆ. ಬಿ. ಸುರೇಶ, ರಮೇಶ್ ಪಂಡಿತ್, ಸಂಪತ್ ಮೈತ್ರೇಯ, ಬಾಲರಾಜ್ ವಾಡಿ, ರೇಖಾ ವಸಂತ್, ಹರಿಣಿ, ಹರ್ಷಾರ್ಜುನ್ ಮುಂತಾದವರು ನಟಿಸಿದ್ದಾರೆ.
ಗ್ಯಾಂಗ್‌ಸ್ಟರ್ ಕ್ರೈಮ್ ಕಥಾಹಂದರ, ಕಮರ್ಷಿಯಲ್ ಅಂಶಗಳು, ಭಾವನಾತ್ಮಕ ಕ್ಷಣಗಳು ಹಾಗೂ ಉತ್ತಮ ತಾಂತ್ರಿಕ ನಿರ್ವಹಣೆಯೊಂದಿಗೆ ‘ರಕ್ಕಿ’ ಸಿನಿಮಾ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷಿಯಾಗಿದೆ. ಟ್ರೇಲರ್ ನೋಡಿದ ಬಳಿಕ ಸಿನಿಪ್ರಿಯರಿಗೆ ಕೌತುಕ ಮೂಡಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಟ್ರೇಲರ್ ಬಿಡುಗಡೆ ಮಾಡಿದ್ದರಿಂದ ಚಿತ್ರತಂಡದ ಬಲ ಹೆಚ್ಚಿದೆ.
ಇದೊಂದು ಗ್ಯಾಂಗ್‌ಸ್ಟರ್ ಕ್ರೈಂ ಡ್ರಾಮಾ ಇರುವ ಸಿನಿಮಾ ಎಂಬುದನ್ನು ‘ರಕ್ಕಿ’ ಚಿತ್ರತಂಡ ಮೊದಲಿನಿಂದಲೂ ಸೂಚಿಸುತ್ತಲೇ ಇದೆ. ಟ್ರೇಲರ್ನಲ್ಲಿ ಅದು ಖಚಿತವಾಗಿದೆ. ಒಬ್ಬ ಎಂಎಲ್‌ಎ ಅಭ್ಯರ್ಥಿಯನ್ನು ಕೊಲ್ಲುವ ಆದೇಶದಿಂದ ಆರಂಭವಾಗುವ ಟ್ರೇಲರ್ನಲ್ಲಿ ಸಾಕಷ್ಟು ಎಲಿಮೆಂಟ್ಸ್ ಕಾಣಿಸಿದೆ. ಪ್ರೇಕ್ಷಕರನ್ನು ಅಪರಾಧ ಮತ್ತು ಸಂಘರ್ಷದ ಲೋಕಕ್ಕೆ ಕರೆದೊಯ್ಯುತ್ತದೆ.
‘ರಕ್ಕಿ’ ಸಿನಿಮಾದ ಟ್ರೇಲರ್:
‘ರಕ್ಕಿ’ ಸಿನಿಮಾ ತಾಂತ್ರಿಕವಾಗಿ ಉತ್ತಮವಾಗಿ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷಿಯಾಗಿದೆ. ಐಸಾಕ್ ಪ್ರಭಾಕರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಲೋಕಿ ತಾವಸ್ಯ ಅವರು ಸಂಗೀತ ನೀಡಿದ್ದಾರೆ. ದೀಪು ಎಸ್. ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಸಹ-ನಿರ್ದೇಶಕರಾಗಿ ಲಾರೆನ್ಸ್ ಪ್ರೀತಂ ಅವರು ಕೆಲಸ ಮಾಡಿದ್ದಾರೆ. ಈ ಟ್ರೇಲರ್ ಮೂಲಕ ಹಲವು ಪಾತ್ರಗಳ ಪರಿಚಯ ಮಾಡಿಕೊಡಲಾಗಿದೆ.
ಇದನ್ನೂ ಓದಿ: ‘ರಗಡೋ ರಕ್ಕಿ’ ಹಾಡಿನಲ್ಲಿ ಹೀರೋ ಮಾಸ್ ಎಂಟ್ರಿ; ‘ಪಿಆರ್ಕೆ ಆಡಿಯೋ’ ಮೂಲಕ ರಿಲೀಸ್
ಹೀರೋ ರಕ್ಕಿ ಸುರೇಶ್ ಅವರು ಡ್ಯಾನ್ಸ್, ಆ್ಯಕ್ಷನ್, ನಟನೆ ಹಾಗೂ ಆತ್ಮವಿಶ್ವಾಸದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರ ತಯಾರಿ ಮತ್ತು ಶ್ರಮದ ಫಲ ಟ್ರೇಲರ್ನಲ್ಲಿ ಕಾಣಿಸುತ್ತಿದೆ. ಯುವಜನತೆ ಮತ್ತು ಕೌಟುಂಬಿಕ ಪ್ರೇಕ್ಷಕರನ್ನೂ ಕೂಡ ಈ ಸಿನಿಮಾ ಸೆಳೆದುಕೊಳ್ಳಲಿದೆ ಎಂಬ ಭರವಸೆ ಚಿತ್ರತಂಡಕ್ಕಿದೆ. ಸಿನಿಮಾದ ಕಥೆಯ ಸುಳಿವನ್ನು ಈ ಟ್ರೇಲರ್ ನೀಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 6:53 pm, Tue, 30 June 26
