ಮೈಸೂರು, ಜುಲೈ 12: ಹಿರಿಯ ಗಾಯಕಿ ಎಸ್. ಜಾನಕಿ (88) ಅವರು ಹೃದಯಾಘಾತದಿಂದ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದು, ಗಾನಕೋಗಿಲೆಯ ನಿರ್ಗಮನಕ್ಕೆ ಸಂಗೀತ ಲೋಕವೇ ಕಂಬನಿ ಮಿಡಿದಿದೆ. ಬೆಳಗ್ಗೆ 8 ಗಂಟೆಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಜಾನಕಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ನವೀನ್ ಫಾರಂಹೌಸ್ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಈ ನಡುವೆ ಜಾನಕಮ್ಮನ ಕೊನೆಯ ದಿನಗಳು ಹೇಗಿದ್ದವು ಎಂಬ ಬಗ್ಗೆ ಅವರ ಕೇರ್ ಟೇಕರ್ ಆಗಿದ್ದ ನವೀನ್ ಟಿವಿ9 ಕನ್ನಡದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
2018ನಲ್ಲಿ ಕೊನೆಯ ಕಾರ್ಯಕ್ರಮ
2008ರಿಂದ ಮೈಸೂರಲ್ಲೇ ಇದ್ದ ಜಾನಕಿ ಅವರು ಕಳೆದ 2 ವರ್ಷಗಳಿಂದ ತಮ್ಮ ಮನೆಯಲ್ಲಿಯೇ ನೆಲೆಸಿದ್ದರು. ಹೈದರಾಬಾದ್‌ನಲ್ಲಿ ಪ್ಯಾಲೇಸ್ನಂತಹ ಮನೆ ಹೊಂದಿದ್ದರೂ ಅವರನ್ನು ಸೆಳೆದಿದ್ದು ಮಾತ್ರ ಮೈಸೂರು. ಮೈಸೂರಿನಲ್ಲೇ ಪ್ರಾಣ ಬಿಡುವುದು ನನ್ನ ಆಸೆ ಎಂದು ಹೇಳುತ್ತಿದ್ದ ಅವರು, 2018ನಲ್ಲಿ ಮೈಸೂರಿನಲ್ಲೇ ಕೊನೆಯ ಕಾರ್ಯಕ್ರಮ ನೀಡಿದ್ದರು. ಆ ನಂತರ ಯಾವುದೇ ಪ್ರಶಸ್ತಿಗಳನ್ನೂ ಅವರು ಸ್ವೀಕರಿಸಿರಲಿಲ್ಲ ಎಂದು ನವೀನ್ ತಿಳಿಸಿದ್ದಾರೆ.
ಇದನ್ನೂ ಓದಿ: ಹಾಡು ನಿಲ್ಲಿಸಿದ ‘ಗಾನಕೋಗಿಲೆ’; ಖ್ಯಾತ ಗಾಯಕಿ ಎಸ್. ಜಾನಕಿ ನಿಧನ
ಆಸ್ಪತ್ರೆ ಅಂದರೆ ಜಾನಕಮ್ಮನಿಗೆ ಭಯ!
ಈ ನಡುವೆ ಜಾನಕಿಯವರಿಗೆ ಕಾಲಿನ ಇನ್ಫೆಕ್ಷನ್ ಆಗಿ ನೋವು ಆರಂಭವಾಗಿತ್ತು. ಭಾಗ್ಯ ಎನ್ನುವವರು ಅವರನ್ನು ನೋಡಿಕೊಳ್ಳುತ್ತಿದ್ದರು. ಹಾಸ್ಪಿಟಲ್ ಅಂದರೆ ಜಾನಕಮ್ಮ ಭಯ ಪಡುತ್ತಿದ್ದ ಕಾರಣ ಮನೆಗೇ ನರ್ಸ್ ಕರೆಸಿ ಚಿಕಿತ್ಸೆ ಕೊಡಿಸುತ್ತಿದ್ದೆವು. ಆದರೆ ಎದ್ದು ಕುಳಿತುಕೊಳ್ಳಲೂ ಅವರು ಕಷ್ಟ ಪಡುತ್ತಿದ್ದ ಕಾರಣ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದೆವು. ಈ ವೇಳೆ ವೈದ್ಯರು ಶೇಕಡಾ 20-30 ಮಾತ್ರ ಗ್ಯಾರೆಂಟಿ ಕೊಡ್ತೀವಿ ಎಂದು ತಿಳಿಸಿದ್ದರು ಎಂದು ಕೇರ್ ಟೇಕರ್ ಹೇಳಿದ್ದಾರೆ.
ಇನ್ನು ಜಾನಕಿ ಅವರ ಇಚ್ಛೆಯಂತೆಯೇ ಅವರ ಅಂತಿಮ ವಿಧಿ ವಿಧಾನಗಳನ್ನು ನೆರವೇರಲಿದ್ದು, ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರವನ್ನು ಮೊಮ್ಮಗಳು ಅಪ್ಸರಾ ನಡೆಸಲಿದ್ದಾರೆ. ಪೊಲೀಸ್ ಗೌರವದೊಂದಿಗೆ ಮೈಸೂರಿನಲ್ಲಿಯೇ ಜಾನಕಮ್ಮ ಪಂಚ ಭೂತಗಳಲ್ಲಿ ಲೀನರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 7:16 am, Sun, 12 July 26
