ಗುವಾಹಟಿ, ಜುಲೈ 31: ಅಸ್ಸಾಂನಲ್ಲಿ ನಡೆದ ಅತ್ಯಂತ ಭಾವುಕ ಘಟನೆಯೊಂದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನರ ಗಮನ ಸೆಳೆದಿದ್ದು, ನೆಟ್ಟಿಗರ ಕಣ್ಣಂಚಿನಲ್ಲಿ ನೀರು ತರಿಸಿದೆ. ಕಷ್ಟಪಟ್ಟು ದುಡಿಯುತ್ತಿದ್ದ ಬಡ ಐಸ್ ಕ್ರೀಮ್ ಮಾರಾಟಗಾರನೊಬ್ಬ ಹೊಟ್ಟೆ ನೋವೆಂದು ಮಲಗಿದ್ದಾಗ ಐಸ್ಕ್ರೀಂ ಜತೆಗೆ ಜೇಬಿನಲ್ಲಿದ್ದ 500 ರೂ. ಕೂಡಾ ಕಳ್ಳತನ(Theft)ವಾಗಿತ್ತು. ನೋವಿನಿಂದ ಕಣ್ಣೀರಿಡುತ್ತಿದ್ದಾಗ, ಪಂಕಜ್ ಗೊಗೊಯ್ ಎಂಬುವವರು ತಕ್ಷಣವೇ ಆಸರೆಯಾಗಿ ನಿಂತು ಸಹಾಯ ಮಾಡಿರುವ ವೀಡಿಯೊ ಈಗ ವೈರಲ್ ಆಗಿದೆ.
ಐಸ್ ಕ್ರೀಮ್ ಮಾರಾಟಗಾರ ಇಡೀ ದಿನ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ಗಾಡಿಯನ್ನು ತಳ್ಳಿಕೊಂಡು ವ್ಯಾಪಾರ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ನೋವು ತಡೆಯಲಾಗದೆ ಆತ ಬಂಡಿಯನ್ನು ರಸ್ತೆಬದಿಯಲ್ಲೇ ನಿಲ್ಲಿಸಿ ಸ್ವಲ್ಪ ಹೊತ್ತು ನೆಲದ ಮೇಲೆ ವಿಶ್ರಾಂತಿ ಪಡೆದಿದ್ದಾರೆ. ಎಚ್ಚರಗೊಂಡು ನೋಡಿದಾಗ, ಕರುಣೆಯಿಲ್ಲದ ಕಳ್ಳರು ಆತನ ಬಂಡಿಯಲ್ಲಿದ್ದ ಎಲ್ಲಾ ಐಸ್ ಕ್ರೀಮ್‌ಗಳು ಹಾಗೂ ಆ ದಿನದ ಸಂಪೂರ್ಣ ದುಡಿಮೆಯಾಗಿದ್ದ 500 ರೂ.ವನ್ನು ಕದ್ದೊಯ್ದಿದ್ದರು.
ತನ್ನ ಇಡೀ ದಿನದ ಶ್ರಮ ಹಾಗೂ ಬಂಡವಾಳವೆಲ್ಲವೂ ಕಳೆದುಹೋಯಿತಲ್ಲಾ ಎಂದು ಆತ ರಸ್ತೆಬದಿಯಲ್ಲೇ ಕುಳಿತು ಕಣ್ಣೀರು ಸುರಿಸಲಾರಂಭಿಸಿದ್ದಾರೆ. ರಸ್ತೆಯಲ್ಲಿ ಹೋಗುತ್ತಿದ್ದ ಕಂಟೆಂಟ್ ಕ್ರಿಯೇಟರ್ ಪಂಕಜ್ ಗೊಗೊಯ್ ಅವರು ಕಣ್ಣೀರಿಡುತ್ತಿದ್ದ ವ್ಯಾಪಾರಿಯನ್ನು ಕಂಡು ಹತ್ತಿರ ಹೋಗಿ ವಿಚಾರಿಸಿದ್ದಾರೆ. ವ್ಯಾಪಾರಿ ತನಗಾದ ಅನ್ಯಾಯ ಮತ್ತು ಕಷ್ಟವನ್ನು ವಿವರಿಸಿದಾಗ, ಪಂಕಜ್ ತಕ್ಷಣವೇ ಸ್ಪಂದಿಸಿದ್ದಾರೆ. ಮೊದಲು ಆತನನ್ನು ಹೊಟೇಲ್‌ಗೆ ಕರೆದೊಯ್ದು ಹೊಟ್ಟೆತುಂಬ ಬಿಸಿ ಊಟ ಮಾಡಿಸಿದ್ದಾರೆ.
ವ್ಯಾಪಾರಿಯ ಕುಟುಂಬಕ್ಕೆ ನೆರವಾಗಲು ಅಕ್ಕಿ, ಹಾಲು, ಬಿಸ್ಕತ್ತು ಸೇರಿದಂತೆ ಅಗತ್ಯ ದಿನಸಿ ಪದಾರ್ಥಗಳನ್ನು ಖರೀದಿಸಿಕೊಟ್ಟು ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ವಿಡಿಯೋ
पेट दर्द से कुछ देर के लिए आंख लगी… और जागते ही मेहनत की पूरी कमाई लुट चुकी थी।
असम से एक भावुक मामला सामने आया है, बताया जा रहा है कि एक आइसक्रीम विक्रेता पेट दर्द के कारण सो गया। इसी दौरान चोर उसकी ₹500 की नकदी और पूरी आइसक्रीम लेकर फरार हो गया। जब वह जागा और अपनी मेहनत की… pic.twitter.com/hf2U0gotmW
— Mandeep RajBhar (@MandeepRajBhar9) July 29, 2026
ಇನ್‌ಸ್ಟಾಗ್ರಾಮ್ ಹಾಗೂ ‘ಎಕ್ಸ್’ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ವೀಡಿಯೊ ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ. ಸುಡುವ ಬಿಸಿಲಿನಲ್ಲಿ 10 ರೂ. ಗಳಿಸಲು ಎಷ್ಟು ಶ್ರಮ ಪಡಬೇಕು ಎಂಬುದು ಈ ಬಡ ವ್ಯಾಪಾರಿಗೆ ಮಾತ್ರ ಗೊತ್ತು. ಇಂತಹವರ ಹೊಟ್ಟೆಗೆ ಹೊಡೆಯುವ ಕಳ್ಳರಿಗೆ ಕರುಣೆಯಿಲ್ಲ ಎಂದು ಅನೇಕರು ಆಕ್ರೋಶ ಹೊರಹಾಕಿದ್ದಾರೆ.
ಮತ್ತಷ್ಟು ಓದಿ: ಹಾಸನ: ಪ್ರಿಯಕರನೊಂದಿಗೆ ಸೇರಿ ಸ್ವಂತ ಮನೆಗೆ ಕನ್ನ ಹಾಕಿದ ಸೊಸೆ; ಸಿಕ್ಕಿಬಿದ್ದಿದ್ಹೇಗೆ?
ಪಂಕಜ್ ಅವರ ಈ ಸಣ್ಣ ಸಹಾಯ ಇಡೀ ಸಮಾಜಕ್ಕೆ ಪ್ರೇರಣೆ. ಒಬ್ಬರಿಗೊಬ್ಬರು ಸಹಾಯ ಮಾಡುವ ಇಂತಹ ಮಾನವೀಯ ಗುಣಗಳು ಜಗತ್ತಿನಲ್ಲಿ ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದು ನೆಟ್ಟಿಗರು ಪಂಕಜ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
