ಕೊಪ್ಪಳ, (ಏಪ್ರಿಲ್ 22): ಕರ್ನಾಟಕದಲ್ಲಿ ತೀವ್ರ ಬಿಸಿಲ ಜೊತೆಗೆ ಕುಡಿಯುವ ನೀರಿನ ಹಾಹಾಕಾರ ಎದುರಾಗಿದೆ. ಹಲವು ಜಿಲ್ಲೆಗಳಲ್ಲಿ ಜನರಿಗೆ ಒಂದೆಡೆ ಬಿಸಿಲು ನೆತ್ತಿ ಸುಡುತ್ತಿದ್ದರೆ, ಮತ್ತೊಂದೆಡೆ ನೀರು ಸಿಗುತ್ತಿಲ್ಲ. ಇದರಿಂದ ಜನ ಕಂಗಾಲಾಗಿದ್ದಾರೆ. ಅದರಂತೆ ಕೊಪ್ಪಳದಲ್ಲೂ ನೀರಿನ ಕೊರತೆ ಎದುರಾಗಿದ್ದು, ಇದರಿಂದ ರೊಚ್ಚಿಗೆದ್ದ ಮಹಿಳೆಯರು ಜಿಲ್ಲಾ ಉಸ್ತುವಾರಿ ಕಾರಿಗೆ ಅಡ್ಡಿಹಾಕಿ ಆಕ್ರೋಶ ಹೊರಹಾಕಿದ್ದಾರೆ. ಹೌದು…ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲು ತೆರಳುತ್ತಿದ್ದ ವೇಳೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಸಂಕನಾಳ ಗ್ರಾಮದಲ್ಲಿ ಮಹಿಳೆಯರು ಖಾಲಿ ಕೊಡದೊಂದಿಗೆ ಸಚಿವ ಶಿವರಾಜ್ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ್ದಾರೆ.
