ಮೇಕಪ್ ಇಲ್ಲದಿದ್ದರೂ ಸಹ, ಚರ್ಮ ಕಾಂತಿಯುತವಾಗಿ ಹೊಳೆಯಬೇಕು, ತ್ವಚೆಯು ಆರೋಗ್ಯಕರವಾಗಿರಬೇಕು ಎಂದು ಬಯಸುತ್ತಾರೆ. ಹೀಗೆ ಮುಖದ ಗ್ಲೋ (glowing skin) ಹೆಚ್ಚಿಸಲು ದುಬಾರಿ ಉತ್ಪನ್ನಗಳ ಅಗತ್ಯವಿದೆ ಎಂದು ಭಾವಿಸುತ್ತಾರೆ. ಆದ್ರೆ ಏನು ಗೊತ್ತಾ ಸಾಕಷ್ಟು ನೀರು ಕುಡಿಯುವ ಮೂಲಕ, ಜಂಕ್‌ಫುಡ್‌ಗಳನ್ನು ತ್ಯಜಿಸಿ ಆರೋಗ್ಯಕರ ಆಹಾರ ಸೇವನೆ ಮಾಡುವ ಮೂಲಕ ಜೊತೆಗೆ ಬೆಳಗಿನ ದಿನಚರಿಯಲ್ಲಿ ಈ ಕೆಲವೊಂದು ಸರಳ ಅಭ್ಯಾಸಗಳನ್ನು ಪಾಲಿಸುವ ಮೂಲಕ ತ್ವಚೆಯ ಕಾಂತಿ, ಆರೋಗ್ಯ ಎರಡನ್ನೂ ಹೆಚ್ಚಿಸಬಬಹುದು. ಮುಖದ ಹೊಳಪನ್ನು ಹೆಚ್ಚಿಸಲು ಸಹಕಾರಿಯಾದ ಬೆಳಗಿನ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ತ್ವಚೆಯ ಹೊಳಪನ್ನು ಹೆಚ್ಚಿಸುವ ಬೆಳಗಿನ ಅಭ್ಯಾಸಗಳು:
ಉಗುರು ಬೆಚ್ಚಗಿನ ನೀರು ಕುಡಿಯಿರಿ: ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನಿಧಾನಕ್ಕೆ ಒಂದು ಅಥವಾ ಎರಡು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಈ ಅಭ್ಯಾಸವು ದೇಹಕ್ಕೆ ಒಳಗಿನಿಂದ ಜಲಸಂಚಯನವನ್ನು ಒದಗಿಸುತ್ತದೆ ಮತ್ತು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ, ಜೊತೆಗೆ ಚರ್ಮದ ಹೊಳಪನ್ನು ಸಹ ಹೆಚ್ಚಿಸುತ್ತದೆ.
ಪ್ರತಿದಿನ ಲಘು ವ್ಯಾಯಾಮ ಮಾಡಿ: ಬೆಳಿಗ್ಗೆ ಎದ್ದ ಬಳಿಕ ಮೊಬೈಲ್ ನೋಡುವ ಬದಲು ನೀವು ಕನಿಷ್ಠ 20-30 ನಿಮಿಷಗಳ ಕಾಲ ವಾಕಿಂಗ್, ಲಘು ವ್ಯಾಯಾಮ ಅಥವಾ ಯೋಗಾಭ್ಯಾಸ ಮಾಡಿ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರೊಂದಿಗೆ, ಆಮ್ಲಜನಕ ಮತ್ತು ಪೋಷಕಾಂಶಗಳು ಚರ್ಮದ ಕೋಶಗಳಿಗೆ ಉತ್ತಮವಾಗಿ ತಲುಪುತ್ತವೆ. ಚರ್ಮವನ್ನು ಆರೋಗ್ಯಕವಾಗಿಡುವುದರ ಜೊತೆಗೆ ನಿಯಮಿತ ವ್ಯಾಯಾಮವು ಒತ್ತಡವನ್ನು ಕಡಿಮೆ ಮಾಡಿ ದೇಹಾರೋಗ್ಯವನ್ನು ಉತ್ತಮವಾಗಿಡುತ್ತದೆ.
ಆರೋಗ್ಯಕರ, ಸಮತೋಲಿತ ಉಪಹಾರ ಸೇವಿಸಿ: ಪ್ರೋಟೀನ್, ಫೈಬರ್, ಆರೋಗ್ಯಕರ ಕೊಬ್ಬುಗಳು, ವಿಟಮಿನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳನ್ನು ಬೆಳಗಿನ ಉಪಹಾರದಲ್ಲಿ ಸೇವಿಸಿ. ಮೊಟ್ಟೆ, ಚೀಸ್, ಮೊಸರು, ಓಟ್ಸ್, ಕಾಲೋಚಿತ ಹಣ್ಣುಗಳು, ಬಾದಾಮಿ ಮತ್ತು ವಾಲ್ನಟ್ ಇತ್ಯಾದಿ ಆರೋಗ್ಯಕರ ಆಹಾರವನ್ನು ಬೆಳಗ್ಗಿನ ಉಪಹಾರದ ಸಮಯದಲ್ಲಿ ಸೇವಿಸಿ. ಇದು ಚರ್ಮದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದಲ್ಲದೆ ಚೀಯಾ, ಅಗಸೆ ಬೀಜ, ಮೊಳಕೆಯೊಡದ ಧಾನ್ಯಗಳನ್ನು ಸೇವನೆ ಮಾಡಬಹುದು.
ಇದನ್ನೂ ಓದಿ: ಈ ಹಣ್ಣುಗಳ ನಿಯಮಿತ ಸೇವನೆಯಿಂದ ತ್ವಚೆಯ ಹೊಳಪನ್ನು ಹೆಚ್ಚಿಸಬಹುದು
ಬೆಳಿಗ್ಗೆ ತ್ವಚೆಯ ಆರೈಕೆಯನ್ನು ಮಾಡಿ: ಪ್ರತಿದಿನ ಬೆಳಿಗ್ಗೆ, ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾದ ಸೌಮ್ಯವಾದ ಕ್ಲೆನ್ಸರ್‌ನಿಂದ ಮುಖವನ್ನು ಸ್ವಚ್ಛಗೊಳಿಸಿ. ನಂತರ ಮಾಯಿಶ್ಚರೈಸರ್ ಅನ್ನು ಹಚ್ಚಿ. ಜೊತೆಗೆ ಸನ್‌ಸ್ಕ್ರೀನ್ ಹಚ್ಚುವುದು ಕೂಡ ತುಂಬಾನೇ ಮುಖ್ಯ. ಇದು ತ್ವಚೆಯ ಹೊಳಪನ್ನು ಹೆಚ್ಚಿಸುವುದು ಮಾತ್ರವಲ್ಲ ತ್ವಚೆಯ ಆರೋಗ್ಯವನ್ನು ವೃದ್ಧಿಸಲು ಕೂಡ ಸಹಕಾರಿ.
ತ್ವಚೆಯ ಹೊಳಪನ್ನು ಹೆಚ್ಚಿಸಲು ಈ ವಿಷಯಗಳನ್ನು ಸಹ ನೆನಪಿನಲ್ಲಿಡಿ:
- ಪ್ರತಿದಿನ 7 ರಿಂದ 9 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡಿ.
- ಧೂಮಪಾನ ಮಾಡುವುದನ್ನು ತಪ್ಪಿಸಿ, ಏಕೆಂದರೆ ಇದು ಚರ್ಮದಲ್ಲಿರುವ ಕಾಲಜನ್ ಅನ್ನು ಹಾನಿಗೊಳಿಸುತ್ತದೆ.
- ಒತ್ತಡವನ್ನು ಕಡಿಮೆ ಮಾಡಲು ಯೋಗ, ಧ್ಯಾನ ಅಥವಾ ಆಳವಾದ ಉಸಿರಾಟದಂತಹ ಚಟುವಟಿಕೆಗಳನ್ನು ಮಾಡಲು ಪ್ರಾರಂಭಿಸಿ. ಏಕೆಂದರೆ ಒತ್ತಡವು ಕೂಡ ತ್ವಚೆಯ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ.
- ದಿನವಿಡೀ ಸಾಕಷ್ಟು ನೀರು ಕುಡಿಯಿರಿ ಮತ್ತು ನಿಮ್ಮ ಆಹಾರದಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
