ವಿಜಯನಗರ, ಏಪ್ರಿಲ್ 20: ಹೊಸಪೇಟೆ (Vijayanagara) ತಾಲೂಕಿನ ಡಾಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಘಟನೆ ಭಾನುವಾರ ನಡೆದಿತ್ತು. ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಇಬ್ಬರು ಸಾವನ್ನಪ್ಪಿದ್ದಾರೆಂದು ಹೇಳಲಾಗಿತ್ತು. ಆದರೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವಿನ್ನಪ್ಪಿದ್ದಾರೆಂದು ದೃಢಪಟ್ಟಿದೆ. ಮಗ ಕೊಟ್ರೇಶನ ಮದುವೆಗಾಗಿ ಕನ್ಯೆ ನೋಡಲು ತೆರಳುವಾಗಲೇ ಈ ಅವಘಡ ಸಂಭವಿಸಿದ್ದು, ಹಸೆಮಣೆ ಸೇರಬೇಕಾದವನು ಮಸಣ ಸೇರಿದ್ದಾನೆ.
ಹಮಾಲಿ ಸೇರಿ ಒಂದೇ ಕುಟುಂಬದ ಮೂವರ ದುರ್ಮರಣ
ಕಿತ್ನೂರು ಗ್ರಾಮದ ಸುಜಾತಾ (34), ನಾಗಪ್ಪ (58), ಕೊಟ್ರೇಶ್ (28) ಹಾಗೂ ತಿಮ್ಮಲಾಪುರದ ದುರ್ಗಪ್ಪ (55) ಮೃತ ದುರ್ದೈವಿಗಳು. ಮಗ ಕೊಟ್ರೇಶನಿಗಾಗಿ ಹುಡುಗಿಯನ್ನು ನೋಡಲು ತಂದೆ ನಾಗಪ್ಪ ಹಾಗೂ ತಾಯಿ ಸುಜಾತಾ ಕಿತ್ನೂರು ಗ್ರಾಮದಿಂದ ಗಂಗಾವತಿ ಕಡೆಗೆ ಬೈಕ್ನಲ್ಲಿ ಹೊರಟಿದ್ದರು. ಇದೇ ಸಂದರ್ಭದಲ್ಲಿ ಮರಿಯಮ್ಮನಹಳ್ಳಿ, ಹೊಸಪೇಟೆಗೆ ಮಾರ್ಗವಾಗಿ ಬರುತ್ತಿದ್ದ ಬೆಳ್ಳುಳ್ಳಿ ತುಂಬಿದ್ದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂವರೂ ಸೇರಿ ಹಮಾಲಿ ದುರ್ಗಪ್ಪ(ಹುಲಗಪ್ಪ) ಸಹ ಮೃತ ಪಟ್ಟಿದ್ದಾರೆ.
ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಅಪಘಾತದಲ್ಲಿ, ಬೆಳ್ಳುಳ್ಳಿ ತುಂಬಿಕೊಂಡು ಚಿತ್ರದುರ್ಗದ ಕಡೆ ತೆರಳುತ್ತಿದ್ದ ಲಾರಿ ಅತಿವೇಗದಲ್ಲಿ ಸಂಚರಿಸುತ್ತಿತ್ತು ಎನ್ನಲಾಗಿದೆ. ಸಮಯ ಮುಟ್ಟಲು ಚಾಲಕ ವೇಗ ಹೆಚ್ಚಿಸಿದ್ದರಿಂದ ನಿಯಂತ್ರಣ ತಪ್ಪಿದ ಲಾರಿ ಮೊದಲು ಬೈಕ್‌ಗೆ ಡಿಕ್ಕಿ ಹೊಡೆದಿದೆ. ನಂತರ ತಪ್ಪಿಸಿಕೊಳ್ಳಲು ಯತ್ನಿಸುವಾಗ ಕಾರು ಹಾಗೂ KSRTC ಬಸ್‌ಗೆ ಡಿಕ್ಕಿ ಹೊಡೆದು ಕೊನೆಗೆ ಪಲ್ಟಿಯಾಗಿದೆ.
ಇದನ್ನೂ ಓದಿ ಹೊಸಪೇಟೆಯ ಡಾಣಾಪುರ ಬಳಿ ಸರಣಿ ಅಪಘಾತ: ಬೈಕ್, ಕಾರು, ಬಸ್‌ಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿ; ಇಬ್ಬರು ಸಾವು
ಡಿಕ್ಕಿಯ ರಭಸಕ್ಕೆ ಮೃತರ ದೇಹಗಳು ಛಿದ್ರಗಾಗಿದ್ದು, ದೃಶ್ಯ ಭೀಕಕವಾಗಿತ್ತೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಘಟನೆಯ ನಂತರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಐವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳಕ್ಕೆ ರವಾನೆ ಮಾಡಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
