ಬೆಂಗಳೂರು, (ಆಗಸ್ಟ್ 13): ಕರ್ನಾಟಕದಲ್ಲಿ ಕಾಂಗ್ರೆಸ್ (Karnataka) ವರ್ಸಸ್ ಆರ್‌ಎಸ್‌ಎಸ್ (RSS) ಸಂಘರ್ಷಕ್ಕೆ ಮತ್ತೊಂದು ವೇದಿಕೆ ಸಿದ್ಧವಾಗುವ ಲಕ್ಷಣಗಳು ಕಾಣುತ್ತಿವೆ. ಹೌದು… ‘ಕರ್ನಾಟಕ ರಾಜ್ಯ ಸಾರ್ವಜನಿಕ ಪ್ರದೇಶ, ಪ್ರವೇಶ ನಿಯಂತ್ರಣ ವಿಧೇಯಕ–2026’ ಕಾಯ್ದೆಯನ್ನು (Karnataka State Public Places and Access Regulation Bill 2026) ಜಾರಿಗೆ ತರಲು ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಮುಂದಾಗಿದೆ. ಈ ಕಾಯ್ದೆ ಕುರಿತು ಇಂದಿನ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದ್ದು, ವಿಧೇಯಕಕ್ಕೆ ಅನುಮೋದನೆ ಸಹ ದೊರೆತಿದೆ. ಹೌದು….ಇದೆ ಅಧಿವೇಶನಲ್ಲಿ ವಿಧೇಯಕ ಮಂಡನೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಈ ವಿಧೇಯಕದ ಮೂಲಕ ಸಾರ್ವಜನಿಕ ಪ್ರದೇಶಗಳಲ್ಲಿ ಯಾವುದೇ ಸಂಘಟನೆ ಅಥವಾ ಸಂಸ್ಥೆ ಕಾರ್ಯಕ್ರಮ ಆಯೋಜಿಸುವ ಸಂದರ್ಭದಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದರೊಂದಿಗೆ ಸಾರ್ವಜನಿಕವಾಗಿ ಆರ್ ಎಸ್ ಎಸ್ ನಡೆಸುವ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕಲು ಮುಂದಾಗಿದೆ ಎಂದು ವಿಶ್ಲೇಷಿಸಲಾಗಿದೆ. ಹೀಗಾಗಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ವರ್ಸಸ್ ಆರ್‌ಎಸ್‌ಎಸ್ ನಡುವಿನ ಕಾಳಗ ಶುರುವಾಗುವ ಸಾಧ್ಯತೆಗಳಿವೆ.
ಏನಿದು ವಿಧೇಯಕ?
ವಿಶೇಷವಾಗಿ ಆರ್‌ಎಸ್‌ಎಸ್‌ನ ಪಥಸಂಚಲನ, ಸಾರ್ವಜನಿಕ ಕಾರ್ಯಕ್ರಮಗಳು, ಸಭೆಗಳು ಹಾಗೂ ಇತರೆ ಚಟುವಟಿಕೆಗಳಿಗೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಈ ವಿಧೇಯಕ ಮಹತ್ವ ಪಡೆದುಕೊಂಡಿದೆ. ಸಾರ್ವಜನಿಕ ಸ್ಥಳಗಳ ಬಳಕೆ, ಕಾರ್ಯಕ್ರಮಗಳ ಆಯೋಜನೆ ಮತ್ತು ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಸರ್ಕಾರಕ್ಕೆ ಹೆಚ್ಚಿನ ನಿಯಂತ್ರಣಾಧಿಕಾರ ನೀಡುವ ಅಂಶಗಳು ವಿಧೇಯಕದಲ್ಲಿರಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: RSS ಚಟುವಟಿಕೆ ನಿರ್ಬಂಧಿಸಲು ಮುಂದಾಗಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆ: ಆದೇಶಕ್ಕೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಆಯೋಜನೆಗೆ ಅನುಮತಿ ನಿರಾಕರಿಸಿದ ವಿಚಾರ ಈ ಹಿಂದೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಅನುಮತಿ ನಿರಾಕರಣೆಯನ್ನು ಪ್ರಶ್ನಿಸಿ ಆರ್‌ಎಸ್‌ಎಸ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತ್ತು. ನಂತರ ನ್ಯಾಯಾಲಯವು ಕೆಲವು ಷರತ್ತುಗಳೊಂದಿಗೆ ಪಥಸಂಚಲನಕ್ಕೆ ಅವಕಾಶ ನೀಡಿತ್ತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಸಂಘಟನೆಗಳ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ವ್ಯವಸ್ಥೆ ಕುರಿತು ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ರಾಜಕೀಯ ಚರ್ಚೆ ತೀವ್ರಗೊಂಡಿತ್ತು. ಸಾರ್ವಜನಿಕ ಆಸ್ತಿಗಳಲ್ಲಿ ಪೂರ್ವಾನುಮತಿ ಇಲ್ಲದೆ ಕಾರ್ಯಕ್ರಮ ನಡೆಸುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ 2025ರಲ್ಲೇ ಆದೇಶ ಹೊರಡಿಸಿತ್ತು. ಈ ಆದೇಶದಡಿ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಅಥವಾ ಮೆರವಣಿಗೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳ ಪೂರ್ವಾನುಮತಿ ಪಡೆಯುವ ವ್ಯವಸ್ಥೆ ಜಾರಿಗೊಂಡಿತ್ತು.
ವಿಧೇಯಕದ ಮೂಲಕ RSS ಚಟುವಟಿಕೆಗಳಿಗೆ ಬ್ರೇಕ್?
ಇದೀಗ ಕಾನೂನು ರೂಪ ನೀಡುವ ನಿಟ್ಟಿನಲ್ಲಿ ‘ಕರ್ನಾಟಕ ರಾಜ್ಯ ಸಾರ್ವಜನಿಕ ಪ್ರದೇಶ, ಪ್ರವೇಶ ನಿಯಂತ್ರಣ ವಿಧೇಯಕ–2026’ ತರಲು ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು, ಸಂಚಾರಕ್ಕೆ ಅಡ್ಡಿಯಾಗದಂತೆ ನಿಯಂತ್ರಿಸುವುದು ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವುದು ವಿಧೇಯಕದ ಪ್ರಮುಖ ಉದ್ದೇಶಗಳಾಗಿರಬಹುದು. ಆದ್ರೆ, ಆರ್‌ಎಸ್‌ಎಸ್ ಚಟುವಟಿಕೆಗಳ ಹಿನ್ನೆಲೆಯಲ್ಲಿ ವಿಧೇಯಕದ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ. ವಿಧೇಯಕವು ಕೇವಲ ಆರ್‌ಎಸ್‌ಎಸ್‌ಗೆ ಮಾತ್ರ ಅನ್ವಯವಾಗುತ್ತದೆಯೇ ಅಥವಾ ಎಲ್ಲಾ ಸಂಘಟನೆಗಳು, ಸಂಸ್ಥೆಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಮಾನವಾಗಿ ಅನ್ವಯವಾಗುತ್ತದೆಯೇ ಎಂಬುದು ವಿಧೇಯಕದ ಅಂತಿಮ ರೂಪದ ಬಳಿಕ ಸ್ಪಷ್ಟವಾಗಲಿದೆ.
ಇದೇ ಅಧಿವೇಶನಲ್ಲಿ ವಿಧೇಯಕ ಮಂಡನೆಗೆ ಸಂಪುಟ ಒಪ್ಪಿಗೆ
ಇಂದಿನ ಸಚಿವ ಸಂಪುಟ ಸಭೆಯಲ್ಲಿ ವಿಧೇಯಕದ ಪ್ರಮುಖ ಅಂಶಗಳ ಕುರಿತು ಚರ್ಚೆ ಆಗಿದ್ದು, ಇದೇ ಮಳೆಗಾಲದ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಹೀಗಾಗಿ ವಿಧೇಯಕದ ಅಂತಿಮ ಸ್ವರೂಪ, ಸಾರ್ವಜನಿಕ ಪ್ರದೇಶಗಳ ವ್ಯಾಪ್ತಿ ಹಾಗೂ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ನಿಯಮಗಳ ಬಗ್ಗೆ ಸಭೆಯ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.
ಇನ್ನು ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ, ಆರ್ ಎಸ್ ಎಸ್ ಬಗ್ಗೆಯೇ ಪೂರ್ವಾಗ್ರಹ ಪೀಡಿತವಾಗಿ ಇದು ಮಾಡುವಂತಹದ್ದು. ಆ ವಿಧೇಯಕ ಬಂದ ಬಳಿಕ ಅದರಲ್ಲಿ ಏನೇನು ಅಂಶಗಳಿವೆ ಅಂತಾ ನೋಡಬೇಕಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಜಾಗಗಳಲ್ಲಿ ಇಂದು ಶಾಖೆಗಳು ನಡೆಯುತ್ತಿವೆ. ದೇಶಭಕ್ತ ಪ್ರಜೆಗಳನ್ನು ನಿರ್ಮಿಸುವ, ಸಂಸ್ಕಾರ ಕೊಡುವ ಕೆಲಸ ಆರ್ ಎಸ್ ಎಸ್ ಮಾಡುತ್ತಿದೆ. ದೇಶದಲ್ಲಿ ಬಾಂಬ್ ಹಾಕುವ, ಚಳವಳಿ ಮಾಡಲು ಪ್ರೇರೇಪಿಸುವ ಜನರ ಬಗ್ಗೆ ಸರ್ಕಾರಕ್ಕೆ ಆಸಕ್ತಿ ಇಲ್ಲ. ಒಂದು ಒಳ್ಳೆಯ ಕೆಲಸ ಮಾಡಲು ಅಡಚಣೆ ಮಾಡುವ ಹಿನ್ನೆಲೆಯಲ್ಲಿ ಈ ವಿಧೇಯಕ ತರುತ್ತಿದ್ದಾರೆ ಖಂಡಿತವಾಗಿಯೂ ಆ ವಿಧೇಯಕಕ್ಕೆ ನಾವು ವಿರೋಧ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
