ಹೊಸ ದಾಖಲೆ ಬರೆದ ರಜನಿಕಾಂತ್: ‘ಜೈಲರ್ 2’ ಒಟಿಟಿ ಹಕ್ಕು ಎಷ್ಟು ಕೋಟಿಗೆ ಸೇಲ್? | Rajinikanth starrer upcoming movie Jailer 2 OTT Deal for Rs 160 Cr

ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರು ತಮ್ಮ ಹವಾ ಏನೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅವರ ಬಹುನಿರೀಕ್ಷಿತ ‘ಜೈಲರ್ 2’ (Jailer 2) ಸಿನಿಮಾ ಬಿಡುಗಡೆಗೂ ಮುನ್ನವೇ ಒಟಿಟಿ (OTT) ಡೀಲ್‌ನಲ್ಲಿ ಹೊಸ ದಾಖಲೆ ಬರೆದಿದೆ. ವರದಿಗಳ ಪ್ರಕಾರ, ಈ ಚಿತ್ರದ ಡಿಜಿಟಲ್ ಹಕ್ಕುಗಳು 160 ಕೋಟಿ ರೂಪಾಯಿಗೆ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಮಾರಾಟವಾಗಿವೆ.

2023ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ‘ಜೈಲರ್’ ಸಿನಿಮಾದ ಸೀಕ್ವೆಲ್ ಆಗಿರುವ ‘ಜೈಲರ್ 2’ ಚಿತ್ರವು 2026ನೇ ಸಾಲಿನ ಅತಿ ದೊಡ್ಡ ಡಿಜಿಟಲ್ ಡೀಲ್ ಮಾಡಿಕೊಂಡಿದೆ. ಈ ಬಗ್ಗೆ ಬಾಲಿವುಡ್ ಹಂಗಾಮಾ ವರದಿ ಮಾಡಿದೆ. ‘ಜೈಲರ್ 2’ ಡಿಜಿಟಲ್ ಹಕ್ಕುಗಳು ಬರೋಬ್ಬರಿ 160 ಕೋಟಿ ರೂಪಾಯಿಗೆ ಸೇಲ್ ಆಗಿದೆ. ಇದು ತಮಿಳು ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಒಟಿಟಿ ಡೀಲ್ ಎನ್ನಲಾಗಿದೆ.

ರಜನಿಕಾಂತ್ ಅವರು ಮತ್ತೊಮ್ಮೆ ಟೈಗರ್ ಮುತ್ತುವೇಲ್ ಪಾಂಡಿಯನ್ ಎಂಬ ಐಕಾನಿಕ್ ಪಾತ್ರದ ಮೂಲಕ ಅಬ್ಬರಿಸಲಿದ್ದಾರೆ. ಚಿತ್ರತಂಡವು ಇದೇ ವರ್ಷ ಅಕ್ಟೋಬರ್‌ ತಿಂಗಳಲ್ಲಿ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮೊದಲ ಹಾಡಿನ ಬಿಡುಗಡೆಗೆ ಸಮಯ ನಿಗದಿ ಆಗಿದೆ.

ಆಗಸ್ಟ್ 21ರ ಶುಕ್ರವಾರದಂದು ‘ಜೈಲರ್ 2’ ಚಿತ್ರದಿಂದ ಮೊದಲ ಹಾಡು ಬಿಡುಗಡೆಯಾಗಲಿದೆ. ಈ ವಿಷಯ ತಿಳಿಸುವ ಸಲುವಾಗಿ ಚಿತ್ರತಂಡವು ಹೊಸ ಪೋಸ್ಟರ್ ಹಂಚಿಕೊಂಡಿದೆ. ಇದರಲ್ಲಿ ರಜನಿಕಾಂತ್ ಅವರು ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಗಂಭೀರ ನೋಟ ಬೀರಿರುವ ದೃಶ್ಯವಿದೆ. ಹಾಡು ಕೇಳಲು ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ.

ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ಮೆಗಾ ಫೈಟ್; ರಜನಿಕಾಂತ್ ‘ಜೈಲರ್ 2’ ಜೊತೆ ಚಿರಂಜೀವಿ ‘ವಿಶ್ವಂಭರ’ ಕ್ಲ್ಯಾಶ್?

‘ಜೈಲರ್’ ಚಿತ್ರದ ಯಶಸ್ಸಿನಲ್ಲಿ ಅನಿರುದ್ಧ್ ರವಿಚಂದರ್ ಅವರ ಸಂಗೀತ ಪ್ರಮುಖ ಪಾತ್ರ ವಹಿಸಿತ್ತು. ‘ಟೈಗರ್ ಕ ಹುಕುಂ..’ ಶೈಲಿಯ ಮತ್ತೊಂದು ಮಾಸ್ ಹಾಡನ್ನು ‘ಜೈಲರ್ 2’ ಸಿನಿಮಾದಲ್ಲಿ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ‘ಸನ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ಈ ಬಿಗ್ ಬಜೆಟ್ ಸಿನಿಮಾವನ್ನು ನಿರ್ಮಿಸುತ್ತಿದ್ದು, ರಜನಿಕಾಂತ್ ಅವರ ಈ ಹೊಸ ದಾಖಲೆ ಅಭಿಮಾನಿಗಳಲ್ಲಿ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *