ಮಹತ್ವಾಕಾಂಕ್ಷೆಯ ‘ರಾಮಾಯಣ’ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಬಗ್ಗೆ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕಾಮಿಕ್ ಕಾನ್ ಈವೆಂಟ್ ಅಲ್ಲಿ ಯಶ್ ಮಾತನಾಡಿದ್ದಾರೆ. ಈ ವೇಳೆ ಹಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ರಾಮನಾಗಿ ನಟಿಸುತ್ತಿರುವ ರಣಬೀರ್ ಕಪೂರ್ ಅವರನ್ನು ಯಶ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ರಾವಣನ ಪಾತ್ರದ ಬಗ್ಗೆಯೂ ವಿವರಿಸಿದ್ದಾರೆ.
ರಣಬೀರ್ ನಟನೆಗೆ ಯಶ್ ಮೆಚ್ಚುಗೆ
‘ಈ ಜಗತ್ತಿನಲ್ಲಿ ಯಾರೂ ಕೂಡ ತಮಗೆ ಶ್ರೀರಾಮನ ಪಾತ್ರ ಮಾಡಲು ಎಲ್ಲಾ ಅರ್ಹತೆಗಳಿವೆ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ರಣಬೀರ್ ಕೂಡ ಇದೇ ಮಾತನ್ನು ಹೇಳಿದ್ದಾರೆ. ಅವರು ಅದ್ಭುತ ನಟ. ಶ್ರೀರಾಮನ ಪಾತ್ರ ಮಾಡುವುದು ಸುಲಭವಲ್ಲ. ಈ ಪಾತ್ರಕ್ಕಾಗಿ ರಣಬೀರ್ ಪಟ್ಟಿರುವ ಶ್ರಮಕ್ಕೆ ನನ್ನ ಗೌರವವಿದೆ’ ಎಂದು ಯಶ್ ತಿಳಿಸಿದ್ದಾರೆ.
ರಾವಣನ ಪಾತ್ರದ ಬಗ್ಗೆ ಯಶ್ ಮಾತು
ರಾವಣನ ಪಾತ್ರದ ಸಿದ್ಧತೆಯ ಬಗ್ಗೆ ಯಶ್ ವಿಶೇಷವಾಗಿ ಮಾತನಾಡಿದ್ದಾರೆ. ‘ರಾವಣನ ಪಾತ್ರ ಜಗತ್ತಿನಲ್ಲಿ ತುಂಬಾ ಪ್ರಸಿದ್ಧಿಯಾಗಿದೆ. ಸಾವಿರಾರು ವರ್ಷಗಳ ನಂತರವೂ ಇಂದಿಗೂ ಪ್ರತಿ ವರ್ಷ ಆತನ ಪ್ರತಿಕೃತಿಯನ್ನು ದಹಿಸಲಾಗುತ್ತದೆ ಎಂದರೆ ನೀವೇ ಊಹಿಸಿಕೊಳ್ಳಿ. ನನ್ನ ತಾತ ಬಾಲ್ಯದಲ್ಲಿ ಈ ಕಥೆಗಳನ್ನು ಹೇಳುತ್ತಿದ್ದರು ಜಗತ್ತಿನ ಶ್ರೇಷ್ಠ ವಿಲನ್‌ಗಳು ತಾವು ಮಾಡುತ್ತಿರುವುದು ಸರಿ ಎಂದು ಬಲವಾಗಿ ನಂಬಿರುತ್ತಾರೆ. ಅವರು ತುಂಬಾ ಬುದ್ಧಿವಂತರು ಮತ್ತು ಪ್ರತಿಭಾವಂತರಾಗಿರುತ್ತಾರೆ. ಇದೇ ಅಂಶ ರಾವಣನ ಪಾತ್ರವನ್ನು ಹೆಚ್ಚು ಆಕರ್ಷಕವಾಗಿಸಿದೆ’ ಎಂದು ಯಶ್ ಹೊಗಳಿದರು.
‘ರಾವಣನನ್ನು ಕೇವಲ ಒಂದು ಕಾಲ್ಪನಿಕ ಪಾತ್ರದಂತೆ ತೋರಿಸಲು ನನಗೆ ಇಷ್ಟವಿರಲಿಲ್ಲ. ಆ ಪರಿಸ್ಥಿತಿಯಲ್ಲಿ ನಾನಿದ್ದರೂ ಹೀಗೆಯೇ ಮಾಡುತ್ತಿದ್ದೆ ಎಂದು ಪ್ರೇಕ್ಷಕರಿಗೆ ಅನಿಸಬೇಕು. ಆ ರೀತಿಯಲ್ಲಿ ಪಾತ್ರವನ್ನು ಕನೆಕ್ಟ್ ಮಾಡುವುದು ದೊಡ್ಡ ಸವಾಲಾಗಿತ್ತು’ ಎಂದಿದ್ದಾರೆ ಯಶ್.
‘ನಾವೆಲ್ಲರೂ ನಮ್ಮದೇ ಕಥೆಯಲ್ಲಿ ಹೀರೋಗಳಾಗಿರುತ್ತೇವೆ. ಮೂರು ಲೋಕಗಳನ್ನು ಆಳಿದ ವ್ಯಕ್ತಿಗೆ ಎಂತಹ ಅಹಂಕಾರ ಇರಬೇಡ. ಆತನ ಮಾನಸಿಕ ಸ್ಥಿತಿಯನ್ನು ಅರಿತು ನಟಿಸುವುದು ತುಂಬಾ ಆಸಕ್ತಿದಾಯಕವಾಗಿತ್ತು. ಈ ಪಾತ್ರಕ್ಕಾಗಿ ನನ್ನ ಸ್ವಂತ ಸಿದ್ದಾಂತಗಳನ್ನು ಬದಿಗಿಟ್ಟು ರಾವಣನ ಜಾಗದಲ್ಲಿ ನಿಂತು ಯೋಚಿಸಬೇಕಾಯಿತು’ ಎಂದು ಯಶ್ ಹೇಳಿದ್ದಾರೆ.
ದೀಪಾವಳಿಗೆ ‘ರಾಮಾಯಣ’ ಧಮಾಕಾ
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವನ್ನು ವಾಲ್ಮೀಕಿ ರಾಮಾಯಣದ ಆಧಾರದ ಮೇಲೆ ಎರಡು ಭಾಗಗಳಾಗಿ ತೆರೆಗೆ ತರಲಾಗುತ್ತಿದೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ನಟಿಸುತ್ತಿದ್ದಾರೆ. ಹನುಮಂತನಾಗಿ ಸನ್ನಿ ಡಿಯೋಲ್ ಮತ್ತು ದಶರಥನಾಗಿ ಅರುಣ್ ಗೋವಿಲ್ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ಚಿತ್ರಕ್ಕೆ ಎದುರಾಗಿದೆ ದೊಡ್ಡ ಸವಾಲು; ವಿವರಿಸಿದ ಯಶ್
ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ಬರೋಬ್ಬರಿ 4,000 ಕೋಟಿ ರೂಪಾಯಿ ಬಜೆಟ್‌ನಲ್ಲಿ ಐಮ್ಯಾಕ್ಸ್ ತಂತ್ರಜ್ಞಾನದಲ್ಲಿ ಸಿನಿಮಾ ಮೂಡಿಬರುತ್ತಿದೆ. ಆಸ್ಕರ್ ವಿಜೇತರಾದ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಮೊದಲ ಬಾರಿಗೆ ಜೊತೆಯಾಗಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಚಿತ್ರದ ಮೊದಲ ಭಾಗ 2026ರ ದೀಪಾವಳಿ ಹಬ್ಬಕ್ಕೆ ಜಾಗತಿಕವಾಗಿ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
