ಹೋಟೆಲ್, ಆಟೋ ಬೆನ್ನಲ್ಲೇ ಈಗ ಪಿಜಿ ಸರದಿ: ಬೆಂಗಳೂರಿನಲ್ಲಿ ಶೇ 10ರಷ್ಟು ದುಬಾರಿಯಾಗಲಿದೆ ಪಿಜಿ ಬಾಡಿಗೆ – Kannada News | Bengaluru PG Rent Hike: Paying Guest Accommodation to Get 10 percent Dearer After Commercial LPG Cylinder Price Surge

ಬೆಂಗಳೂರು, ಮೇ 6: ಪಂಚ ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆಯೇ ಕೇಂದ್ರ ಸರ್ಕಾರ ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ. ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ ಏಕಾಏಕಿ ಭಾರಿ ಏರಿಕೆ ಮಾಡಿರುವುದು ಈಗ ಹೋಟೆಲ್ ಉದ್ಯಮ ಮತ್ತು ಆಟೋ ಚಾಲಕರ ನಂತರ ನೇರವಾಗಿ ಪೇಯಿಂಗ್ ಗೆಸ್ಟ್ (PG) ನಿವಾಸಿಗಳ ಮೇಲೆ ಪರಿಣಾಮ ಬೀರಲಿದೆ. ಸಿಲಿಂಡರ್ ದರ ಏರಿಕೆಯ ಭೀತಿಯಿಂದಾಗಿ ಬೆಂಗಳೂರಿನಲ್ಲಿ (Bengaluru) ಪಿಜಿ ಬಾಡಿಗೆ ದರಗಳು ಇನ್ನಷ್ಟು ದುಬಾರಿಯಾಗಲಿವೆ.

ಮುಖ್ಯಾಂಶಗಳು

  • ಕಮರ್ಷಿಯಲ್ ಸಿಲಿಂಡರ್ ದರ ಏರಿಕೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಪಿಜಿ ಬಾಡಿಗೆ ಹೆಚ್ಚಳಕ್ಕೆ ಮಾಲೀಕರ ಚಿಂತನೆ.
  • ಪಿಜಿ ಬಾಡಿಗೆ ದರವನ್ನು ಶೇಕಡಾ 5% ರಿಂದ 10% ರಷ್ಟು ಹೆಚ್ಚಿಸಲು ಪಿಜಿ ಅಸೋಸಿಯೇಷನ್ ಚಿಂತನೆ.
  • ಯುದ್ಧದ ಪರಿಣಾಮ ಸಿಲಿಂಡರ್ ಪೂರೈಕೆ ವ್ಯತ್ಯಯ; ಸೌದೆ ಒಲೆ ಬಳಸಿ ಅಡುಗೆ ಮಾಡುತ್ತಿರುವ ಹಲವು ಪಿಜಿಗಳು.

ಸಿಲಿಂಡರ್ ದರ ಏರಿಕೆಯ ಬಿಸಿ

ಕೇಂದ್ರ ಸರ್ಕಾರ ಕಮರ್ಷಿಯಲ್ ಸಿಲಿಂಡರ್ ಬೆಲೆಯನ್ನು ಏಕಾಏಕಿ 993 ರೂಪಾಯಿಗಳಷ್ಟು ಏರಿಕೆ ಮಾಡಿದೆ. ಇದರ ನೇರ ಪರಿಣಾಮವಾಗಿ ಈಗಾಗಲೇ ಬೆಂಗಳೂರಿನ ಹೋಟೆಲ್‌ಗಳಲ್ಲಿ ತಿಂಡಿ ಮತ್ತು ಊಟದ ಬೆಲೆಗಳು ಹೆಚ್ಚಾಗಿವೆ. ಇದರ ಬೆನ್ನಲ್ಲೇ ಆಟೋ ಎಲ್‌ಪಿಜಿ ಗ್ಯಾಸ್ ಬೆಲೆಯೂ ಲೀಟರ್‌ಗೆ 5.73 ಪೈಸೆ ಏರಿಕೆಯಾಗಿದ್ದು, ಆಟೋ ಚಾಲಕರು ಮೀಟರ್ ದರ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದಾರೆ. ಈಗ ಈ ಸಾಲಿಗೆ ಪಿಜಿ ಮಾಲೀಕರೂ ಸೇರಿದ್ದು, ಬಾಡಿಗೆ ಹೆಚ್ಚಳ ಅನಿವಾರ್ಯ ಎಂದು ವಾದಿಸುತ್ತಿದ್ದಾರೆ.

ಅನಿವಾರ್ಯವಾಯಿತೇ ಬಾಡಿಗೆ ಹೆಚ್ಚಳ?

ಈ ಕುರಿತು ಪ್ರತಿಕ್ರಿಯಿಸಿರುವ ಪಿಜಿ ಅಸೋಸಿಯೇಷನ್ ಅಧ್ಯಕ್ಷರಾದ ಅರುಣ್ ಕುಮಾರ್ ಅವರು, ‘ದಿಢೀರ್ ಆಗಿ ಕಮರ್ಷಿಯಲ್ ಗ್ಯಾಸ್ ಬೆಲೆ 993 ರೂಪಾಯಿ ಜಾಸ್ತಿಯಾಗಿರುವುದು ಪಿಜಿ ಮಾಲೀಕರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಕಮರ್ಷಿಯಲ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಅಗತ್ಯ ಆಹಾರ ಪೂರೈಕೆ ಮಾಡಲು ಪಿಜಿ ಮಾಲೀಕರು ಹರಸಾಹಸ ಪಡುತ್ತಿದ್ದಾರೆ. ಕೆಲವು ಪಿಜಿಗಳಲ್ಲಿ ಅನಿವಾರ್ಯವಾಗಿ ಸೌದೆ ಒಲೆ ಬಳಸಿ ಅಡುಗೆ ಮಾಡಲಾಗುತ್ತಿದೆ ಮತ್ತು ಮೆನ್ಯುನಲ್ಲಿ ಕಡಿತ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗ್ಯಾಸ್ ಬೆಲೆ ಏರಿಕೆಯ ಹೊರೆಯನ್ನು ಹೊರಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.

ದಿನೇ ದಿನೇ ದುಬಾರಿಯಾಗುತ್ತಿರುವ ಬೆಂಗಳೂರಿನಲ್ಲಿ ಪಿಜಿಗಳನ್ನು ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ ಎಂದು ಪಿಜಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಹಾಗಾಗಿ, ಅನಿವಾರ್ಯವಾಗಿ ಈ ಹೊರೆಯನ್ನು ಪಿಜಿ ನಿವಾಸಿಗಳ ಮೇಲೆ ಹಾಕಲು ನಿರ್ಧರಿಸಲಾಗಿದ್ದು, ಪಿಜಿ ಬಾಡಿಗೆಯನ್ನು ಶೇಕಡಾ 5% ರಿಂದ 10% ರಷ್ಟು ಹೆಚ್ಚಿಸಲು ಚಿಂತನೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆಟೋ ದರ ಏರಿಕೆಗೆ ಗ್ರೀನ್ ಸಿಗ್ನಲ್, ಎಷ್ಟು ಹೆಚ್ಚಾಗಲಿದೆ? ಇಲ್ಲಿದೆ ವಿವರ

ಕೇಂದ್ರ ಸರ್ಕಾರ ಕಳೆದ ಮೂರು ತಿಂಗಳಲ್ಲಿ ಸಿಲಿಂಡರ್ ಬೆಲೆಯನ್ನು ಸುಮಾರು 1200 ರೂಪಾಯಿಗಳವರೆಗೆ ಹೆಚ್ಚಿಸಿದೆ, ಇದು ಬೀದಿಬದಿ ವ್ಯಾಪಾರಿಗಳು, ಮಧ್ಯಮ ಗಾತ್ರದ ಹೋಟೆಲ್‌ಗಳು ಮತ್ತು ಪಿಜಿ ಉದ್ಯಮವನ್ನು ಸಂಕಷ್ಟಕ್ಕೆ ದೂಡಿದೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *