
ಬೆಂಗಳೂರು, ಏಪ್ರಿಲ್ 01: ಕಾಫಿ ಶಾಪ್ ಬಳಿ ಡ್ರಗ್ಸ್ ಸೇವನೆ ಆರೋಪ ಹಿನ್ನೆಲೆ ಹೋಟೆಲ್ ಸಿಬ್ಬಂದಿ ಮತ್ತು ಯುವಕರ ಗುಂಪ್ಪಿನ ನಡುವೆ ಭಾರಿ ಗಲಾಟೆ (fight) ನಡೆದಿರುವಂತಹ ಘಟನೆ ಕೊತ್ತನೂರಿನ ಭಾರತಿ ಸಿಟಿಯ ಕಾಫಿ ಶಾಪ್ ಬಳಿ ನಿನ್ನೆ ರಾತ್ರಿ ನಡೆದಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.
ನಡೆದಿದ್ದೇನು?
ಹೋಟೆಲ್ ಸಿಬ್ಬಂದಿ ಮತ್ತು ಸ್ಥಳೀಯ ಯುವಕರ ಗುಂಪಿನ ನಡುವೆ ನಡೆದ ಈ ಗಲಾಟೆಗೆ ಡ್ರಗ್ಸ್ ಸೇವನೆ ಆರೋಪವೇ ಕಾರಣ ಎನ್ನಲಾಗಿದೆ. ಹೆಣ್ಣೂರು ಭಾಗದಿಂದ ಬಂದಿದ್ದ ಕೆಲ ಯುವಕರು ಹೋಟೆಲ್ ಬಳಿ ಸಿರಿಂಜ್ ಮೂಲಕ ಡ್ರಗ್ಸ್ ಇಂಜೆಕ್ಟ್ ಮಾಡಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ.
ಇದನ್ನು ಸಿಸಿ ಕ್ಯಾಮೆರಾಗಳ ಮೂಲಕ ಗಮನಿಸಿದ ಹೋಟೆಲ್ ಸಿಬ್ಬಂದಿ, ತಕ್ಷಣವೇ ಯುವಕರನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ಇನ್ನು ಮುಂದೆ ತಮ್ಮ ಹೋಟೆಲ್‌ಗೆ ಬರದಂತೆ ಯುವಕರ ಸಂಬಂಧಿಕರಿಗೂ ಮಾಹಿತಿ ನೀಡಿದ್ದಾರೆ. ಇದರಿಂದ ಕೆರಳಿದ ಯುವಕರ ಗುಂಪು, ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿಗಳ 119ನೇ ಜನ್ಮದಿನೋತ್ಸಕ್ಕೆಂದು ಸಿದ್ಧಗಂಗಾ ಮಠಕ್ಕೆ ಬಂದಿದ್ದ ಭಕ್ತ ಸಾವು
ಹಲ್ಲೆಗೆ ಪ್ರತಿಯಾಗಿ ಹೋಟೆಲ್ ಸಿಬ್ಬಂದಿಯೂ ಯುವಕರ ಗ್ಯಾಂಗ್ ಮೇಲೆ ಹಲ್ಲೆ ನಡೆಸಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಗಲಾಟೆಯಲ್ಲಿ ಚೇರ್ ಸೇರಿದಂತೆ ಕೈಗೆ ಸಿಕ್ಕಸಿಕ್ಕ ವಸ್ತುಗಳನ್ನು ಬಳಸಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಒಂದೇ ಬಿಲ್ಡಿಂನ್ನಲ್ಲಿದ್ದ ಇಬ್ಬರು ಬಾಡಿಗೆದಾರರ ಮಧ್ಯೆ ಗಲಾಟೆ: ಹಲ್ಲೆ
ಒಂದೇ ಬಿಲ್ಡಿಂಗ್ನಲ್ಲಿದ್ದ ಇಬ್ಬರು ಬಾಡಿಗೆದಾರರ ಮಧ್ಯೆ ಗಲಾಟೆ ಮತ್ತು ಹಲ್ಲೆ ನಡೆದಿರುವಂತಹ ಘಟನೆ ಬೆಂಗಳೂರು ಬ್ಯಾಡರಹಳ್ಳಿಯ ಸಿಂಡಿಕೇಟ್ ಬ್ಯಾಂಕ್ ಲೇಔಟ್ನಲ್ಲಿ ನಡೆದಿದೆ. ಸಂತೋಷ್ ಮತ್ತು ಶುಭ ದಂಪತಿ ಮೇಲೆ ಮತ್ತೊಂದು ಮನೆಯವರಿಂದ ಹಲ್ಲೆ ಮಾಡಲಾಗಿದೆ.
ಮನೆಯ ಕೆಳಗಡೆ ಕಾರು ಪಾರ್ಕ್ ಮಾಡುವ ವಿಚಾರಕ್ಕೆ ಪ್ರತಿನಿತ್ಯ ಕ್ಯಾತೆ ತೆಗೆಯುತ್ತಿದ್ದರು. ಒಬ್ಬರು ಬೈಕ್ ನಿಲ್ಲಿಸಬೇಕು, ಇನ್ನೊಬ್ಬರು ಕಾರು ನಿಲ್ಲಿಸಬೇಕೆಂದು ಗಲಾಟೆ ಮಾಡುತ್ತಿದ್ದರು. ನಿನ್ನೆ ಸಂಜೆ ಮನೆಯ ಕೆಳಗಡೆ ಸಂತೋಷ್ ಕಾರು ನಿಲ್ಲಿಸಲು ಬಂದಿದ್ದರು. ಅದೇ ಸ್ಥಳದಲ್ಲಿ ಮತ್ತೊಂದು ಮನೆಯ ರತ್ನಮ್ಮ ಎಂಬುವರು ಬೈಕ್ ನಿಲ್ಲಿಸಿದ್ದರು. ಅಲ್ಲಿದ್ದ ಬೈಕ್ ತೆಗೆಯಿರಿ ನಾನು ಕಾರು ನಿಲ್ಲಿಸಬೇಕು ಎಂದು ಸಂತೋಷ್ ಹೇಳಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ.
ಇದನ್ನೂ ಓದಿ: ಪೊಲೀಸ್ ಪಬ್ಲಿಕ್ ಪ್ರೆಸ್ ಆರ್ಮಿ ಹೆಸರಿಡಲು ಅಧಿಕಾರ ಕೊಟ್ಟವರ್ಯಾರು? ರೌಡಿಶೀಟರ್ ಅರ್ಜಿ ವಜಾ
ಕಾಂಕ್ರೀಟ್ ಕ್ರಿಕೆಟ್ ಸ್ಟಂಪ್ ಮತ್ತು ದೊಣ್ಣೆಯಿಂದ ಸಂತೋಷ್ ಮೇಲೆ ಹಲ್ಲೆ ಮಾಡಲಾಗಿದೆ. ಬಳಿಕ ಸಂತೋಷ್ ಕಾರು ಡಿಕ್ಕಿ ಹೊಡೆಸಿ ಡ್ಯಾಮೇಜ್ ಮಾಡಿದ್ದಾರೆ. ಗಲಾಟೆ ಮಾಡಿ ಮನಸೋ ಇಚ್ಚೆ ಹಲ್ಲೆ ನಡೆಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಸದ್ಯ ಸಂತೋಷ್ ಕುಟುಂಬ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಗಲಾಟೆ, ಹಲ್ಲೆ ನಡೆಸಿದ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಗಾಯಾಳು ಸಂತೋಷ್ ತಲೆಗೆ 10 ಸ್ಟಿಚ್ ಹಾಕಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.