ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಹಾಲಿವುಡ್‌ನ ದೈತ್ಯ ವೆಬ್ ಸರಣಿ ‘ಹೌಸ್ ಆಫ್ ದಿ ಡ್ರ್ಯಾಗನ್’ (House Of the Dragon) ಈಗ ತನ್ನ ಮೂರನೇ ಸೀಸನ್‌ನೊಂದಿಗೆ ಮರಳಲು ಸಜ್ಜಾಗಿದೆ. ಈ ಸರಣಿಯ ಬಗ್ಗೆ ಹೆಚ್ಚು ಗೊತ್ತಿಲ್ಲದವರಿಗಾಗಿ ಹೇಳಬೇಕೆಂದರೆ, ಇದು ಜಗತ್ತಿನ ನಂಬರ್ 1 ವೆಬ್ ಸರಣಿಯಾದ ‘ಗೇಮ್ ಆಫ್ ಥ್ರೋನ್ಸ್’ ಸರಣಿಯ ಪ್ರೀಕ್ವೆಲ್ ಆಗಿದ್ದು, ‘ಗೇಮ್ ಆಫ್ ಥ್ರೋನ್ಸ್’ ಕತೆ ನಡೆಯುವ ಸುಮಾರು 200 ವರ್ಷಗಳ ಹಿಂದೆ ನಡೆದ ಕಥೆ ಆಗಿದೆ. ರಾಜಮನೆತನದ ಆಂತರಿಕ ಕಲಹ, ಬೆಂಕಿ ಉಗುಳುವ ದೈತ್ಯ ಡ್ರ್ಯಾಗನ್‌ಗಳು ಮತ್ತು ಅಧಿಕಾರದ ಹಪಾಹಪಿಯೇ ಈ ಸರಣಿಯ ಜೀವಾಳ. ಇದೀಗ ಈ ವೆಬ್ ಸರಣಿಯ ಮೂರನೇ ಸೀಸನ್ನ ಟ್ರೈಲರ್ ಬಿಡುಗಡೆ ಆಗಿದ್ದು, ಬಿಡುಗಡೆ ದಿನಾಂಕದ ಘೋಷಣೆಯೂ ಆಗಿದೆ.
‘ಹೌಸ್ ಆಫ್ ದಿ ಡ್ರ್ಯಾಗನ್ಸ್’ ವೆಬ್ ಸರಣಿ ಪ್ರಮುಖವಾಗಿ ‘ಟಾರ್ಗೇರಿಯನ್’ ರಾಜವಂಶದ ಸುತ್ತ ಸುತ್ತುತ್ತದೆ. ಈ ಮನೆತನದವರಿಗೆ ಡ್ರ್ಯಾಗನ್‌ಗಳನ್ನು ನಿಯಂತ್ರಿಸುವ ವಿಶೇಷ ಶಕ್ತಿ ಇರುತ್ತದೆ. ಹಾಗಾಗಿ ಏಳು ಕಿಂಗ್ಡಮ್ಗಳಿಗೆ ಅವರೇ ಅಧಿಪತಿಗಳಾಗಿರುತ್ತಾರೆ. ಆದರೆ ಅದೇ ಕುಟುಂಬದ ಕೆಲವರ ನಡುವೆ ಅಧಿಕಾರಕ್ಕಾಗಿ, ಸಿಂಹಾಸನಕ್ಕಾಗಿ ಯುದ್ಧ ಶುರುವಾಗಿದೆ. ಈ ಯುದ್ಧದಲ್ಲಿ ತಂತ್ರ, ಕುತಂತ್ರ, ನಂಬಿಕೆ ದ್ರೋಹ ಎಲ್ಲವೂ ಇವೆ. ಅವೆಲ್ಲವುಗಳ ಕತೆಯನ್ನು ಈ ‘ಹೌಸ್ ಆಫ್ ದಿ ಡ್ರ್ಯಾಗನ್ಸ್’ ಒಳಗೊಂಡಿದೆ.
ಇದೀಗ ಮೂರನೇ ಸೀಸನ್ ಟೀಸರ್ ಬಿಡುಗಡೆಯಾಗಿದ್ದು, ಇದರಲ್ಲಿ ರಾಣಿ ರೇನಿರಾ ಟಾರ್ಗೇರಿಯನ್ ತನ್ನ ಅಧಿಕಾರವನ್ನು ಮರಳಿ ಪಡೆಯಲು ದೃಢನಿಶ್ಚಯ ಮಾಡಿದಂತೆ ತೋರುತ್ತಿದೆ. ತನ್ನ ಮಗನ ಸಾವು ಮತ್ತು ತನಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ರೇನಿರಾ ಈಗ ಯುದ್ಧಭೂಮಿಗೆ ಧುಮುಕಿದ್ದಾಳೆ. ಟೀಸರ್‌ನಲ್ಲಿ ಕಂಡುಬರುವ ದೃಶ್ಯಗಳು ಯುದ್ಧವು ಎಷ್ಟು ಭೀಕರವಾಗಿರಲಿದೆ ಎಂಬುದರ ಮುನ್ಸೂಚನೆ ನೀಡುತ್ತಿವೆ. ಮಗ-ತಾಯಿಯ ನಡುವೆ, ಪತಿ-ಪತ್ನಿಯ ನಡುವೆಯೇ ಅಪನಂಬಿಕೆ, ಕಿತ್ತಾಟಗಳು ಶುರುವಾಗಿರುವ ಸೂಚನೆಯನ್ನು ಟೀಸರ್ ನೀಡುತ್ತಿದೆ.
ಇದನ್ನೂ ಓದಿ:ಪ್ರಿಯಾಂಕಾ ಚೋಪ್ರಾರನ್ನು ಮಹಾನ್ ವ್ಯಕ್ತಿಗೆ ಹೋಲಿಸಿದ ಹಾಲಿವುಡ್ ಸ್ಟಾರ್ ವಿನ್ ಡೀಸೆಲ್
‘ಗೇಮ್ ಆಫ್ ಥ್ರೋನ್ಸ್’ನ ಮತ್ತೊಂದು ಪ್ರೀಕ್ವೆಲ್ ಆಗಿರುವ ‘ನೈಟ್ ಆಫ್ ದಿ ಸೆವೆನ್ ಕಿಂಗ್ಡಮ್ಸ್’ ಈಗಾಗಲೇ ಜಿಯೋ ಹಾಟ್ಸ್ಟಾರ್ನಲ್ಲಿ ಪ್ರಸಾರ ಆಗುತ್ತಿದೆ. ಇದು ಈ ಸರಣಿಯ ಮೊದಲ ಸೀಸನ್ ಆಗಿದೆ. ಅದು ಮುಗಿದ ಬಳಿಕ ‘ಹೌಸ್ ಆಫ್ ದಿ ಡ್ರ್ಯಾಗನ್ಸ್’ ಮೂರನೇ ಸೀಸನ್ ಪ್ರಸಾರ ಆಗಲಿದೆ. ಇದೀಗ ಬಿಡುಗಡೆ ಆಗಿರುವ ಟೀಸರ್‌ನಲ್ಲಿ ನಿರ್ದಿಷ್ಟ ಬಿಡುಗಡೆ ದಿನಾಂಕ ಘೋಷಿಸಿಲ್ಲವಾದರೂ, ಜೂನ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿಸಲಾಗಿದೆ. ಕಳೆರಡು ಸೀಸನ್ಗಳಿಗಿಂತಲೂ ಅದ್ಧೂರಿಯಾಗಿ ಮೂರನೇ ಸೀಸನ್ ಇರುವುದು ಟೀಸರ್ ನಿಂದ ಖಾತ್ರಿ ಆಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 3:41 pm, Sat, 21 February 26
