110 ಕೆಜಿ ತೂಕವಿದ್ದರೂ ನೀರಿನಲ್ಲಿ ಮುಳುಗಲ್ಲ ಈ ವ್ಯಕ್ತಿ! ಬಲರಾಮ್ ಅವರ ‘ತೇಲುವ ವಿದ್ಯೆ’ ಕಂಡು ಮಲೆನಾಡಿಗರು ಫಿದಾ – Kannada News | Shivamogga’s Balaram Floats Effortlessly for 30 Mins: A Swimming Miracle

ಶಿವಮೊಗ್ಗ, ಏ.21 : ಸಾಮಾನ್ಯವಾಗಿ ಅತಿ ಹೆಚ್ಚು ದೇಹದ ತೂಕ ಇರುವವರಿಗೆ ನಡೆಯುವುದೇ ಕಷ್ಟ, ಇನ್ನು ನೀರಿನಲ್ಲಿ ಈಜುವುದು ಅಸಾಧ್ಯದ ಮಾತು. ಜತೆಗೆ ಮುಳುಗುವುದು ಗ್ಯಾರಂಟಿ. ಆದರೆ ಮಲೆನಾಡಿನ ಈ ವ್ಯಕ್ತಿ ಮಾತ್ರ ಇದಕ್ಕೆ ವಿರೋಧವಾಗಿದ್ದಾರೆ. ಬರೋಬ್ಬರಿ 110 ಕೆಜಿ ತೂಕವಿದ್ದರೂ ನೀರಿನಲ್ಲಿ ಸುಮಾರು ಅರ್ಧ ಗಂಟೆ ಕಾಲ ಸಲೀಸಾಗಿ ತೇಲುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.ಶಿವಮೊಗ್ಗದ ಬಲರಾಮ್ (55) ಕಳೆದ ಐದಾರು ವರ್ಷಗಳಿಂದ ವಿದ್ಯಾನಗರದ ಕಂಟ್ರಿ ಕ್ಲಬ್ ಸ್ವಿಮ್ಮಿಂಗ್ ಪೂಲ್‌ನಲ್ಲಿ ನಿಯಮಿತವಾಗಿ ಈಜು ಅಭ್ಯಾಸ ಮಾಡುತ್ತಿದ್ದಾರೆ. ದಢೂತಿ ದೇಹವಿರುವ ಕಾರಣ ಸತತವಾಗಿ ಈಜುವುದು ಇವರಿಗೆ ಕಷ್ಟವಾಗುತ್ತಿತ್ತು. ಈ ಸವಾಲನ್ನು ಮೆಟ್ಟಿ ನಿಲ್ಲಲು ಬಲರಾಮ್ ಕಂಡುಕೊಂಡ ದಾರಿಯೇ ‘ನೀರಿನಲ್ಲಿ ತೇಲುವ ಕಲೆ’.

ಬಲರಾಮ್ ಅವರ ಈ ಅಚ್ಚರಿಯ ಕಲೆಯ ಹಿಂದೆ ಈಜು ಗುರು ಬಾಬು ಅವರ ಶ್ರಮವಿದೆ. ಉಸಿರಾಟವನ್ನು ಬಿಗಿಹಿಡಿದು, ದೇಹವನ್ನು ಹಗುರವಾಗಿ ಇಟ್ಟುಕೊಂಡು ನೀರಿನ ಮೇಲೆ ಮಲಗುವ ವಿದ್ಯೆಯನ್ನು ಬಲರಾಮ್ ಕರಗತ ಮಾಡಿಕೊಂಡಿದ್ದಾರೆ. ಒಮ್ಮೆ ನೀರಿನಲ್ಲಿ ಮಲಗಿದರೆ ಸಾಕು, ಯಾವುದೇ ಕೈ-ಕಾಲು ಆಡಿಸದೆ ಅರ್ಧ ಗಂಟೆ ಕಾಲ ಬಲರಾಮ್ ತೇಲಬಲ್ಲರು. ಪ್ರತಿನಿತ್ಯ ಇವರೊಂದಿಗೆ ಈಜಲು ಬರುವ ರಮೇಶ್ ಮತ್ತು ಮುತ್ತಪ್ಪ ಅವರು ಬಲರಾಮ್ ಸಾಧನೆ ಕಂಡು ಹೆಮ್ಮೆ ವ್ಯಕ್ತಪಡಿಸುತ್ತಾರೆ. ಸಂಕಷ್ಟದ ಸಮಯದಲ್ಲಿ ಅಥವಾ ದೋಣಿ ಅಪಘಾತಗಳಂತಹ ತುರ್ತು ಪರಿಸ್ಥಿತಿಯಲ್ಲಿ ಈ ‘ತೇಲುವ ವಿದ್ಯೆ’ ಜೀವ ಉಳಿಸಲು ಸಹಕಾರಿ ಎಂಬುದು ಇವರ ಅಭಿಪ್ರಾಯ.

ಇದನ್ನೂ ಓದಿ: ಬಿಸಿಲಿನಿಂದ ಪಾರಾಗಲು ಹೊಸ ಮಾರ್ಗ ಕಂಡುಕೊಂಡ ಬೆಂಗಳೂರಿನ ಯುವತಿ

ಬಲರಾಮ್ ಅವರ ಈ ವಿಶಿಷ್ಟ ಕಲೆ ಈಗ ಮಲೆನಾಡಿನ ಜನರ ಗಮನ ಸೆಳೆಯುತ್ತಿದೆ. ಪೂಲ್‌ಗೆ ಬರುವ ಇತರ ಈಜುಗಾರರು ಬಲರಾಮ್ ಅವರನ್ನು ಕಂಡು ತಾವೂ ಇಂತಹ ವಿದ್ಯೆ ಕಲಿಯಬೇಕು ಎಂದು ಉತ್ಸುಕರಾಗುತ್ತಿದ್ದಾರೆ. 110 ಕೆಜಿ ದೇಹವಿದ್ದರೂ ಆತ್ಮವಿಶ್ವಾಸವಿದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಬಲರಾಮ್ ಈಗ ಸಾಕ್ಷಿಯಾಗಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *