IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮೊದಲಾರ್ಧದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ರಚಂಡ ಪ್ರದರ್ಶನ ನೀಡಿದೆ. ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೋಲುಣಿಸಿ ಶುಭಾರಂಭ ಮಾಡಿದ್ದ ಆರ್ಸಿಬಿ ಆ ಬಳಿಕ ಸಿಎಸ್ಕೆ ತಂಡವನ್ನು ಬಗ್ಗು ಬಡಿದಿದ್ದರು.
ಇದಾದ ಬಳಿಕ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತರೂ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿಗೆ ಸೋಲುಣಿಸಿ ಕಂಬ್ಯಾಕ್ ಮಾಡಿದ್ದರು. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಗ್ಗರಿಸಿತು. ಆದರೆ ಇದೀಗ ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದು 5ನೇ ಗೆಲುವು ತನ್ನದಾಗಿಸಿಕೊಂಡಿದೆ.
ಅಂದರೆ ಮೊದಲಾರ್ಧದಲ್ಲಿ ಆರ್ಸಿಬಿ ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ 5 ಮ್ಯಾಚ್ಗಳಲ್ಲಿ 4 ರಲ್ಲಿ ಗೆಲುವು ದಾಖಲಿಸಿದೆ. ಇನ್ನೂ ಆರ್ಸಿಬಿ ತಂಡಕ್ಕೆ ಎರಡು ತವರು ಪಂದ್ಯಗಳಿವೆ. ಆದರೆ ಈ ಪಂದ್ಯವನ್ನು ರಾಯಲ್ ಪಡೆ ಆಡಲಿರುವುದು 1,376 ಕಿ.ಮೀ ದೂರದ ರಾಯ್ಪುರ್ನಲ್ಲಿ ಎಂಬುದು ವಿಶೇಷ. ಇದಕ್ಕೆ ಮುಖ್ಯ ಕಾರಣ…
ಐಪಿಎಲ್ 2025 ರಲ್ಲಿ ಆರ್ಸಿಬಿ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದ ಸಂಭ್ರಮದ ವೇಳೆ ನಡೆದ ಕಾಲ್ತುಳಿತದ ದುರಂತದ ನಂತರ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲು ಅನಿಶ್ಚಿತತೆ ಇತ್ತು. ಈ ಹಿನ್ನೆಲೆಯಲ್ಲಿ ಆರ್ಸಿಬಿ ಮ್ಯಾನೇಜ್ಮೆಂಟ್ ಛತ್ತೀಸ್ಗಢ ಸರ್ಕಾರದೊಂದಿಗೆ ರಾಯ್ಪುರದಲ್ಲಿ ಪಂದ್ಯಗಳನ್ನು ಆಡಲು ಮೊದಲೇ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಆರ್ಸಿಬಿ ತನ್ನ ಎರಡು ತವರು ಪಂದ್ಯಗಳನ್ನು ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ಆಡಲಿದೆ.
7 ತವರು ಪಂದ್ಯಗಳಲ್ಲಿ ಆರ್ಸಿಬಿ ಈಗಾಗಲೇ ಬೆಂಗಳೂರಿನಲ್ಲಿ 5 ಮ್ಯಾಚ್ಗಳನ್ನಾಡಿದೆ. ಇನ್ನುಳಿದಿರುವ ಎರಡು ತವರು ಪಂದ್ಯಗಳನ್ನು ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ಆಡಲಿದೆ. ಈ ಪಂದ್ಯಗಳು ಮೇ 10 ಮತ್ತು ಮೇ 13 ರಂದು ನಡೆಯಲಿದೆ. ಅದಕ್ಕೂ ಮುನ್ನ ಆರ್ಸಿಬಿ ಡೆಲ್ಲಿ ಕ್ಯಾಪಿಟಲ್ಸ್ (ಏ.27), ಗುಜರಾತ್ ಟೈಟಾನ್ಸ್ (ಏ.30), ಲಕ್ನೋ ಸೂಪರ್ ಜೈಂಟ್ಸ್ (ಮೇ.7) ತಂಡಗಳನ್ನು ಎದುರಿಸಲಿದೆ.
