15 ವರ್ಷಗಳ ಕಾಲ ಕತ್ತಲೆ ಕೋಣೆಯಲ್ಲಿ ಕಳೆದ ಮಹಿಳೆ, ಜೇಡಿಮಣ್ಣಿನಲ್ಲೇ ಹೊಸ ಜಗತ್ತು ಸೃಷ್ಟಿಸಿ ಇತಿಹಾಸ ಬರೆದ ಸೋನಾಬಾಯಿ – Kannada News | Sonabai Rajwar: Tribal Artist Who Created Art From Darkness, Won National Awards

ರಾಯ್‌ಪುರ, ಜುಲೈ 06: ಸಿನಿಮಾ ಕಥೆಯನ್ನೂ ಮೀರಿಸುವಂತಿದೆ ಛತ್ತೀಸ್‌ಗಢದ ಬುಡಕಟ್ಟು ಕಲಾವಿದೆ ಸೋನಾಬಾಯಿ ರಾಜ್‌ವರ್ ಅವರ ಜೀವನದ ನೈಜ ಕಥೆ. ಕ್ರೂರ ಪತಿಯಿಂದಾಗಿ ಬರೋಬ್ಬರಿ 15 ವರ್ಷಗಳ ಕಾಲ ಕಿಟಕಿಗಳೂ ಇಲ್ಲದ ಕತ್ತಲೆ ಕೋಣೆಯಲ್ಲಿ ಮಗನೊಂದಿಗೆ ಬಂಧಿಯಾಗಿದ್ದ ಮಹಿಳೆಯೊಬ್ಬರು, ಗೋಡೆಯ ಮಣ್ಣನ್ನೇ ಅಗೆದು ಜಗತ್ತೇ ಬೆರಗುಗೊಳ್ಳುವಂತಹ ಅದ್ಭುತ ಕಲಾ ಜಗತ್ತನ್ನು ಸೃಷ್ಟಿಸಿದ್ದಾರೆ. ಇಂದು ಅವರ ಕಥೆ ಮತ್ತು ಕಲೆ ಸಾವಿರಾರು ಜನರಿಗೆ ಸ್ಫೂರ್ತಿಯಾಗಿದೆ.

14ನೇ ವಯಸ್ಸಿಗೆ ಮದುವೆ, 25ಕ್ಕೆ ಜೈಲು ವಾಸ

ಸೋನಾಬಾಯಿ ರಾಜ್ವರ್ ಅವರು 1930 ರ ಸುಮಾರಿಗೆ ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯ ಪೂಹ್‌ಪುತ್ರ ಗ್ರಾಮದಲ್ಲಿ ಜನಿಸಿದರು. ರಾಜ್ವರ್ ಸಮುದಾಯದ ಸಂಪ್ರದಾಯದಂತೆ ಇವರಿಗೆ ಮಣ್ಣಿನ ಮನೆಗಳನ್ನು ಅಲಂಕರಿಸುವ ಕಲೆ ಒಲಿದಿತ್ತು. ಕೇವಲ 14 ನೇ ವಯಸ್ಸಿನಲ್ಲಿ ತನಗಿಂತ 10 ವರ್ಷ ದೊಡ್ಡವನಾದ ಹೋಳಿರಾಮ್ ರಾಜ್ವರ್ ಎಂಬಾತನೊಂದಿಗೆ ಇವರ ವಿವಾಹವಾಯಿತು.

ಆದರೆ, ಸೋನಾಬಾಯಿಗೆ 25 ವರ್ಷ ವಯಸ್ಸಾಗಿದ್ದಾಗ ಗಂಡು ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ, ಆಕೆಯ ಪತಿ ಯಾವುದೇ ಹೊರಗಿನ ಸಂಪರ್ಕವಿಲ್ಲದಂತೆ ಕಿಟಕಿಗಳೂ ಇಲ್ಲದ ಕತ್ತಲೆ ಕೋಣೆಯಲ್ಲಿ ಆಕೆಯನ್ನು ಮಗನೊಂದಿಗೆ ಬಂಧಿಸಿಟ್ಟನು. ಯಾರೊಂದಿಗೂ ಮಾತನಾಡುವಂತಿರಲಿಲ್ಲ, ಹೊರಗೆ ಹೋಗುವಂತಿರಲಿಲ್ಲ. ಈ ನರಕಸದೃಶ ಬಂಧನ ಸತತ 15 ವರ್ಷಗಳ ಕಾಲ ಮುಂದುವರೆಯಿತು.

ಒಂಟಿತನ ದೂರ ಮಾಡಲು ಮಣ್ಣಿನ ಆಟಿಕೆ

ಆ ಕತ್ತಲೆ ಮತ್ತು ಉಸಿರುಗಟ್ಟಿಸುವ ಬಿಸಿ ಕೋಣೆಯಲ್ಲಿ ತನ್ನ ಮಗನನ್ನು ರಂಜಿಸಲು ಮತ್ತು ತನ್ನ ಒಂಟಿತನವನ್ನು ಮರೆಯಲು ಸೋನಾಬಾಯಿ ಕೋಣೆಯ ನೆಲ ಹಾಗೂ ಗೋಡೆಗಳ ಜೇಡಿಮಣ್ಣನ್ನು ಅಗೆದು ಆಟಿಕೆಗಳನ್ನು ಮಾಡಲು ಪ್ರಾರಂಭಿಸಿದರು. ಪ್ರಾಣಿಗಳು, ಮನುಷ್ಯರು, ದೇವರು ಮತ್ತು ದೇವತೆಗಳ ಆಕೃತಿಗಳನ್ನು ಕೆತ್ತಿದರು. ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಬಿದಿರಿನ ಪಟ್ಟಿಗಳಿಂದ ಜಾಲರಿಗಳನ್ನು ಮಾಡಿ, ಅವುಗಳಿಗೆ ಮಣ್ಣು ಬಳಿದು, ನೈಸರ್ಗಿಕ ಬಣ್ಣಗಳಿಂದ ಅಲಂಕರಿಸಿದರು. ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಖನಿಜಗಳಿಂದಲೇ ಅವರು ಬಣ್ಣಗಳನ್ನು ಸಿದ್ಧಪಡಿಸುತ್ತಿದ್ದರು. ನೋಡನೋಡುತ್ತಿದ್ದಂತೆ ಇಡೀ ಕೋಣೆ, ಗೋಡೆ, ಛಾವಣಿ ಮೂರು ಆಯಾಮದ (3D) ಅದ್ಭುತ ಶಿಲ್ಪಕಲೆಗಳಿಂದ ತುಂಬಿಹೋಯಿತು.

ಜಗತ್ತಿಗೆ ಪರಿಚಯವಾದ ಅದ್ಭುತ ಕಲೆ

1983 ರಲ್ಲಿ ಭೋಪಾಲ್‌ನ ಭಾರತ್ ಭವನದ ಸಂಶೋಧಕರ ತಂಡ ಈ ಹಳ್ಳಿಗೆ ಭೇಟಿ ನೀಡಿದಾಗ ಸೋನಾಬಾಯಿ ಅವರ ಮನೆಯನ್ನು ನೋಡಿ ಆಶ್ಚರ್ಯಚಕಿತರಾದರು. ಯಾವುದೇ ಔಪಚಾರಿಕ ತರಬೇತಿ ಇಲ್ಲದೆ ಕತ್ತಲೆ ಕೋಣೆಯಲ್ಲಿ ಅರಳಿದ ಈ ವಿಶಿಷ್ಟ ಕಲೆ ಜಗತ್ತಿಗೆ ಪರಿಚಯವಾಯಿತು. ಅದೇ ವರ್ಷ ಭಾರತ ಸರ್ಕಾರ ಅವರಿಗೆ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಮತ್ತು ತುಳಸಿ ಸಮ್ಮಾನ್ ನೀಡಿ ಗೌರವಿಸಿತು.

ಮತ್ತಷ್ಟು ಓದಿ: ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಬಿದರಿ ಕಲೆ ಅವಸಾನದತ್ತ!

ಮಗನೂ ಕಲಾವಿದ, ಮನೆ ಈಗ ವಸ್ತುಸಂಗ್ರಹಾಲಯ

ಸೋನಾಬಾಯಿ ಅವರ ಈ ಕಲೆ ಇಡೀ ಸಮುದಾಯಕ್ಕೆ ಬದುಕಿನ ದಾರಿಯಾಯಿತು. ಅವರ ಮಗ ದರೋಗ ರಾಮ್ ಮತ್ತು ಗ್ರಾಮದ ಇತರ ಯುವಕರು ಈ ಕಲೆಯನ್ನು ಕಲಿತು ಇಂದು ತಮ್ಮ ಜೀವನೋಪಾಯವನ್ನು ಕಂಡುಕೊಂಡಿದ್ದಾರೆ. ಸೋನಾಬಾಯಿ ಅವರು 2007 ರಲ್ಲಿ ನಿಧನರಾದರು.

ಅವರ ನೆನಪಿನಲ್ಲಿ 2015 ರಲ್ಲಿ ಛತ್ತೀಸ್‌ಗಢ ಸರ್ಕಾರವು ಇಂದಿರಾ ಕಲಾ ಸಂಗೀತ ವಿಶ್ವವಿದ್ಯಾಲಯದಲ್ಲಿರುವ ಭಾರತದ ಅತಿದೊಡ್ಡ ಕಲಾ ಗ್ಯಾಲರಿಗೆ ಸೋನಾಬಾಯಿ ರಾಜವರ್ ಕಲಾ ಗ್ಯಾಲರಿ ಎಂದು ಹೆಸರಿಟ್ಟಿದೆ. ಇದು ರಾಜ್ಯದಲ್ಲಿ ಕಲಾವಿದರೊಬ್ಬರಿಗೆ ಮೀಸಲಾದ ಮೊದಲ ಮ್ಯೂಸಿಯಂ ಆಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *