IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲಾರ್ಧದಲ್ಲಿ ಸೋಲಿಲ್ಲದ ಸರದಾರನಾಗಿ ಮಿಂಚಿದ್ದ ಪಂಜಾಬ್ ಕಿಂಗ್ಸ್ ತಂಡವು ದ್ವಿತೀಯಾರ್ಧದಲ್ಲಿ ಹ್ಯಾಟ್ರಿಕ್ ಸೋಲನುಭವಿಸಿದೆ. ಈ ಸೋಲುಗಳಿಗೆ ಮುಖ್ಯ ಕಾರಣ ಪಂಜಾಬ್ ಕಿಂಗ್ಸ್ ಫೀಲ್ಡರ್‌ಗಳ ಕಳಪೆ ಪ್ರದರ್ಶನ. ಏಕೆಂದರೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೇ ಪಂಜಾಬ್ ಕಿಂಗ್ಸ್ ಫೀಲ್ಡರ್‌ಗಳು 4 ಕ್ಯಾಚ್‌ಗಳನ್ನು ಕೈಚೆಲ್ಲಿದ್ದಾರೆ. ಹೀಗೆ ಪಂಜಾಬ್ ಕಿಂಗ್ಸ್ ಫೀಲ್ಡರ್‌ಗಳು ಕ್ಯಾಚ್ ಕೈಚೆಲ್ಲುತ್ತಿರುವುದು ಯುಜ್ವೇಂದ್ರ ಚಹಲ್ ಓವರ್‌ನಲ್ಲಿ ಎಂಬುದು ಇಲ್ಲಿ ವಿಶೇಷ.
ಚಹಲ್ನ ದುರಾದೃಷ್ಟ:
ಈ ಬಾರಿಯ ಸೀಸನ್‌ನಲ್ಲಿ ಯುಜ್ವೇಂದ್ರ ಚಹಲ್ ಇದುವರೆಗೆ ಒಟ್ಟು 16 ಕ್ಯಾಚಿಂಗ್ ಅವಕಾಶಗಳನ್ನು ಸೃಷ್ಟಿಸಿದ್ದಾರೆ. ಆದರೆ ಅಚ್ಚರಿಯೆಂದರೆ, ಈ ಪೈಕಿ 8 ಕ್ಯಾಚ್‌ಗಳನ್ನು ಫೀಲ್ಡರ್‌ಗಳು ಕೈಬಿಟ್ಟಿದ್ದಾರೆ. ಅಂದರೆ ಇಲ್ಲಿ ಚಹಲ್ಗೆ 8 ವಿಕೆಟ್‌ಗಳು ನಷ್ಟವಾಗಿವೆ. ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಎದುರಾಳಿ ಬ್ಯಾಟರ್ಗಳು ಪಂಜಾಬ್ ಕಿಂಗ್ಸ್ ಸೋಲಿಗೆ ಕಾರಣರಾಗಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಯುಜ್ವೇಂದ್ರ ಚಹಲ್ ಅವರಿಗೆ ಬರಬೇಕಿದ್ದ ವಿಕೆಟ್‌ಗಳು ಕೈತಪ್ಪಿದವು. ಚಹಲ್ ಅವರ ಬೌಲಿಂಗ್‌ನಲ್ಲಿ ಪ್ರಮುಖವಾಗಿ ಈ ಕೆಳಗಿನ ಆಟಗಾರರು ಸುಲಭ ಕ್ಯಾಚ್ ಹಾಗೂ ಸ್ಟಂಪಿಂಗ್ ಕೈಬಿಟ್ಟಿದ್ದರು.
- ಶಶಾಂಕ್ ಸಿಂಗ್: ಚಹಲ್ ಎಸೆದ 8.4ನೇ ಓವರ್‌ನಲ್ಲಿ ಹೆನ್ರಿಕ್ ಕ್ಲಾಸೆನ್ ನೀಡಿದ ಅತ್ಯಂತ ಸುಲಭವಾದ ಕ್ಯಾಚ್ ಅನ್ನು ‘ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್’ನಲ್ಲಿ ಶಶಾಂಕ್ ಸಿಂಗ್ ಕೈಬಿಟ್ಟರು. ಈ ವೇಳೆ ಕೇವಲ 9 ರನ್ ಗಳಿಸಿದ್ದ ಕ್ಲಾಸೆನ್ ನಂತರ 69 ರನ್ ಬಾರಿಸಿ ಪಂದ್ಯದ ಗತಿಯನ್ನೇ ಬದಲಿಸಿದರು.
- ಲಾಕಿ ಫರ್ಗುಸನ್: ಚಹಲ್ ಎಸೆದ 11ನೇ ಓವರ್‌ನಲ್ಲಿ ಇಶಾನ್ ಕಿಶನ್ ನೀಡಿದ ಕ್ಯಾಚ್ ಅನ್ನು ಫರ್ಗುಸನ್ ಕೈಚೆಲ್ಲಿದರು. ಈ ಜೀವದಾನವನ್ನು ಬಳಸಿಕೊಂಡ ಇಶಾನ್ ಕಿಶನ್ ಈ ಮ್ಯಾಚ್ನಲ್ಲಿ 55 ರನ್ ಚಚ್ಚಿದರು.
- ಪ್ರಭ್‌ಸಿಮ್ರಾನ್ ಸಿಂಗ್: ಇದೇ ಪಂದ್ಯದಲ್ಲಿ ಚಹಲ್ ಎಸೆತವೊಂದರಲ್ಲಿ ಇಶಾನ್ ಕಿಶನ್ ಅವರನ್ನು ಸ್ಟಂಪಿಂಗ್ ಮಾಡುವ ಅವಕಾಶವನ್ನೂ ವಿಕೆಟ್ ಕೀಪರ್ ಪ್ರಭ್‌ಸಿಮ್ರಾನ್ ಸಿಂಗ್ ಕೈಚೆಲ್ಲಿ ಕೊಂಡರು.
- ಕೂಪರ್ ಕೊನೊಲಿ: ಲಾಕಿ ಫರ್ಗುಸನ್ ಎಸೆತದಲ್ಲಿ ಇಶಾನ್ ಕಿಶನ್ ನೀಡಿದ ಮತ್ತೊಂದು ಕ್ಯಾಚ್ ಅನ್ನು ಕೂಪರ್ ಕೊನೊಲಿ ಕೈಚೆಲ್ಲಿದ್ದರು.
ಹತಾಶೆಯ ಪರಾಕಾಷ್ಠೆ:
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಪಡೆಯಲು ಯುಜ್ವೇಂದ್ರ ಚಹಲ್ ಹಲವು ಅವಕಾಶಗಳನ್ನು ಸೃಷ್ಟಿಸಿದರೂ ಪಂಜಾಬ್ ಕಿಂಗ್ಸ್ ಫೀಲ್ಡರ್‌ಗಳು ಈ ಅವಕಾಶಗಳನ್ನು ಕೈಚೆಲ್ಲಿದ್ದರು. ಇದರಿಂದ ಚಹಲ್ ಅವರ ಮುಖದಲ್ಲಿ ಹತಾತೆ ಎದ್ದು ಕಾಣುತ್ತಿತ್ತು.
ಇದನ್ನೂ ಓದಿ: Pat Cummins: ನಮ್ಮ ಎದುರಾಳಿಯಾಗಿದ್ದರೂ ಅಬ್ಬರಿಸಿದ್ದು ಆಸ್ಟ್ರೇಲಿಯಾದವ!
ಅಂದರೆ ಕಳೆದ 10 ಪಂದ್ಯಗಳಲ್ಲಿ ಯುಜ್ವೇಂದ್ರ ಚಹಲ್ 16 ಅವಕಾಶಗಳನ್ನು ಸೃಷ್ಟಿಸಿದರೂ ಪಂಜಾಬ್ ಕಿಂಗ್ಸ್ ಫೀಲ್ಡರ್‌ಗಳು ಹಿಡಿದಿರುವುದು ಕೇವಲ 8 ಕ್ಯಾಚ್‌ಗಳನ್ನು ಮಾತ್ರ. ಇನ್ನುಳಿದ 8 ಕ್ಯಾಚ್‌ಗಳನ್ನು ಕೈಚೆಲ್ಲಿದ್ದಾರೆ. ಅಂದರೆ ಇಲ್ಲಿ ಚಹಲ್ ಸ್ಪಿನ್ ಮೋಡಿ ಮಾಡುತ್ತಿದ್ದರೂ ಫೀಲ್ಡರ್ಗಳಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿಲ್ಲ.
ಯಾರು ‘ವಿಲನ್’!
ಈ ಸೀಸನ್‌ನಲ್ಲಿ ಯುಜ್ವೇಂದ್ರ ಚಹಲ್ ಬೌಲಿಂಗ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಬಿಟ್ಟಿರುವುದು ಶಶಾಂಕ್ ಸಿಂಗ್. ಅವರು ಈವರೆಗೆ ಒಟ್ಟು ನಾಲ್ಕು ಕ್ಯಾಚ್‌ಗಳನ್ನು ಕೈಚೆಲ್ಲುವ ಮೂಲಕ ಚಹಲ್ ಅವರ ವಿಕೆಟ್ ಸಂಖ್ಯೆ ಏರಿಕೆಯಾಗದಂತೆ ತಡೆದಿದ್ದಾರೆ.
ಇತ್ತ ಪಂಜಾಬ್ ಕಿಂಗ್ಸ್ ಫೀಲ್ಡಿಂಗ್ಗಳಿಂದ ಉತ್ತಮ ಬೆಂಬಲವಿಲ್ಲದಿದ್ದರೂ ಚಹಲ್ ವೈಯಕ್ತಿಕವಾಗಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ. ಅಂದರೆ ಈ ಬಾರಿ ಪಡೆದ 8 ವಿಕೆಟ್ಗಳ ಮೂಲಕ ಭಾರತದಲ್ಲಿ 300 ಟಿ20 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
ಹಾಗೆಯೇ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವ ಯುಜ್ವೇಂದ್ರ ಚಹಲ್ (229+ ವಿಕೆಟ್), ಫೀಲ್ಡರ್‌ಗಳ ಸಹಕಾರಯೊಂದಿಗೆ ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದಿತ್ತು. ಆದರೆ ಕಳಪೆ ಫೀಲ್ಡಿಂಗ್ ಕಾರಣ 8 ವಿಕೆಟ್‌ಗಳು ಕೈ ತಪ್ಪಿದೆ. ಈ ವಿಕೆಟ್ಗಳ ಕೈ ತಪ್ಪುವಿಕೆಯೊಂದಿಗೆ ಪಂಜಾಬ್ ಕಿಂಗ್ಸ್ ಸೋಲಿನತ್ತ ಮುಖ ಮಾಡುತ್ತಿರುವುದು ಮಾತ್ರ ವಿಪರ್ಯಾಸ.
