18 ತಂಡಗಳು… ಹೀಗಿರಲಿದೆ ಏಷ್ಯನ್ ಗೇಮ್ಸ್​ ಟಿ20 ಟೂರ್ನಿ – Kannada News | Asian Games 2026: 18 Teams Ready for Cricket Showdown

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ ಕ್ರಿಕೆಟ್ ಟೂರ್ನಿಯ ಅಧಿಕೃತ ವೇಳಾಪಟ್ಟಿ ಮತ್ತು ಸ್ವರೂಪ ಪ್ರಕಟಗೊಂಡಿದೆ. ಈ ಬಾರಿ ಒಟ್ಟು 18 ತಂಡಗಳು (10 ಪುರುಷರ ಮತ್ತು 8 ಮಹಿಳಾ ತಂಡಗಳು) ಪದಕದ ಬೇಟೆಗಾಗಿ ಅಖಾಡಕ್ಕಿಳಿಯುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಟೂರ್ನಿ ಕುರಿತಾದ ಸಂಪೂರ್ಣ ಮಾಹಿತಿ ಈ ಕಳಗಿನಂತಿದೆ…

10 ತಂಡಗಳ ಪುರುಷರ ಟೂರ್ನಿ:

ಪುರುಷರ ವಿಭಾಗದಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿದ್ದು, ಐಸಿಸಿ ಟಿ20 ಶ್ರೇಯಾಂಕದ ಆಧಾರದ ಮೇಲೆ ಬಲಿಷ್ಠ ತಂಡಗಳನ್ನು ದ್ವಿತೀಯ ಸುತ್ತಿನಲ್ಲಿ ಕಣಕ್ಕಿಳಿಸಲಾಗುತ್ತಿದೆ.

  •  ನೇರ ಕ್ವಾರ್ಟರ್ ಫೈನಲ್ ಪ್ರವೇಶ:ಏಷ್ಯಾದ ನಾಲ್ಕು ಪ್ರಮುಖ ಟಿ20 ತಂಡಗಳಾದ ಭಾರತ, ಪಾಕಿಸ್ತಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ್ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆದಿವೆ.
  • ಪ್ರಾಥಮಿಕ ಸುತ್ತಿನ ಲೀಗ್: ಉಳಿದ 6 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಲಿವೆ.

ಇದನ್ನೂ ಓದಿ: ವಿಂಬಲ್ಡನ್ ಕೋರ್ಟ್‌ನಲ್ಲಿ ರಾರಾಜಿಸುವ ‘ಮೇಡ್ ಇನ್ ಇಂಡಿಯಾ’!

  • ಗ್ರೂಪ್ A:
  • ಅಫ್ಘಾನಿಸ್ತಾನ್
  • ನೇಪಾಳ
  • ಜಪಾನ್
  • ಗ್ರೂಪ್ B:
  • ಒಮಾನ್
  • ಹಾಂಗ್ ಕಾಂಗ್
  • ಮಲೇಷ್ಯಾ

ಟೂರ್ನಿಯ ಸ್ವರೂಪವೇನು?

ಪ್ರಾಥಮಿಕ ಸುತ್ತಿನಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿವೆ. ಅಂದರೆ ಗ್ರೂಪ್ ಎ ಮತ್ತು ಗ್ರೂಪ್ ಬಿ ನಲ್ಲಿ ಕಾಣಿಸಿಕೊಂಡಿರುವ ತಂಡಗಳು ಮೊದಲ ಸುತ್ತು ಆಡಲಿದೆ. ಈ ಸುತ್ತಿನ ಪಂದ್ಯಗಳ ಬಳಿಕ ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ಮೊದಲ ಎರಡು ತಂಡಗಳು (ಒಟ್ಟು 4 ತಂಡಗಳು) ಮುಂದಿನ ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆಯಲಿವೆ.

ಪ್ರಾಥಮಿಕ ಹಂತ ಮುಗಿದ ಬಳಿಕ ಅಸಲಿ ಜಿದ್ದಾಜಿದ್ದಿ ಆರಂಭವಾಗಲಿದ್ದು, ಇಲ್ಲಿ ಒಟ್ಟು 8 ತಂಡಗಳು ಮುಖಾಮುಖಿಯಾಗಲಿವೆ. ಅಂದರೆ ಭಾರತ, ಪಾಕಿಸ್ತಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ್ ತಂಡಗಳ ವಿರುದ್ಧ 4 ತಂಡಗಳು ಸೆಣಸಲಿದೆ.

ಇಂಡೋ-ಪಾಕ್ ಪಂದ್ಯ ಯಾವಾಗ?:

ಅಧಿಕೃತ ಡ್ರಾ ಪ್ರಕಾರ, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳನ್ನು ವೇಳಾಪಟ್ಟಿಯ ವಿರುದ್ಧ ಬದಿಗಳಲ್ಲಿ ಇರಿಸಲಾಗಿದೆ. ಹೀಗಾಗಿ, ಉಭಯ ತಂಡಗಳು ಮುಖಾಮುಖಿಯಾಗಬೇಕಾದರೆ ಕನಿಷ್ಠ ಸೆಮಿಫೈನಲ್ ಅಥವಾ ಫೈನಲ್ ಹಂತದವರೆಗೆ ಸಾಗಬೇಕಾಗುತ್ತದೆ.

ಪುರುಷರ ಟೂರ್ನಿ ಯಾವಾಗ ಶುರು?

2026ರ ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಟೂರ್ನಿಯು ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 1, 2026 ರವರೆಗೆ ಜಪಾನ್‌ನಲ್ಲಿ ಜರುಗಲಿದೆ.

  • ಪ್ರಾಥಮಿಕ ಲೀಗ್ ಹಂತ (ಗ್ರೂಪ್ ಪಂದ್ಯಗಳು): ಸೆಪ್ಟೆಂಬರ್ 24 ರಿಂದ ಸೆಪ್ಟೆಂಬರ್ 27, 2026
  • ಕ್ವಾರ್ಟರ್ ಫೈನಲ್ ಪಂದ್ಯಗಳು: ಸೆಪ್ಟೆಂಬರ್ 28 ಮತ್ತು 29, 2026
  • ಸೆಮಿಫೈನಲ್ ಪಂದ್ಯಗಳು: ಅಕ್ಟೋಬರ್ 1, 2026
  • ಪದಕದ ಪಂದ್ಯಗಳು (ಫೈನಲ್ ಮತ್ತು ಕಂಚಿನ ಪದಕದ ಪಂದ್ಯ): ಅಕ್ಟೋಬರ್ 1, 2026

ಎಲ್ಲಾ 10 ತಂಡಗಳ ಪಂದ್ಯಗಳು ಜಪಾನ್‌ನ ಐಚಿ ಪ್ರಾಂತ್ಯದ ಕೋಗಿ ಅಥ್ಲೆಟಿಕ್ ಪಾರ್ಕ್ ಮೈದಾನದಲ್ಲಿ ಟಿ20 ಮಾದರಿಯಲ್ಲಿ ನಡೆಯಲಿವೆ.

ಹೇಗಿರಲಿದೆ ಮಹಿಳಾ ಟಿ20 ಟೂರ್ನಿ?

2026ರ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಟೂರ್ನಿಯು ನೇರ ನಾಕೌಟ್ ಮಾದರಿಯಲ್ಲಿ ನಡೆಯಲಿದ್ದು, ಲೀಗ್ ಹಂತದ ಪಂದ್ಯಗಳು ಇರುವುದಿಲ್ಲ. ಟೂರ್ನಿಯಲ್ಲಿ ಒಟ್ಟು 8 ದೇಶಗಳ ಮಹಿಳಾ ತಂಡಗಳು ಭಾಗವಹಿಸುತ್ತಿದ್ದು, ಎಲ್ಲಾ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಹಂತದಿಂದಲೇ ತಮ್ಮ ಅಭಿಯಾನವನ್ನು ಆರಂಭಿಸಲಿವೆ.

ಮಹಿಳಾ ಟಿ20 ಟೂರ್ನಿಯ ವೇಳಾಪಟ್ಟಿ:

ಮಹಿಳಾ ಕ್ರಿಕೆಟ್ ಪಂದ್ಯಗಳು ಸೆಪ್ಟೆಂಬರ್ 17 ರಿಂದ ಸೆಪ್ಟೆಂಬರ್ 22, 2026 ರವರೆಗೆ ನಡೆಯಲಿವೆ. ಟಿ20 ಮಾದರಿಯಲ್ಲಿ ಜರುಗಲಿರುವ ಈ ಟೂರ್ನಿಯು ನಾಕೌಟ್ ಹಂತದಿಂದಲೇ ಶುರುವಾಗಲಿದೆ. ಈ ಟೂರ್ನಿಯ ವೇಳಾಪಟ್ಟಿ ಈ ಕೆಳಗಿನಂತಿದೆ:

ದಿನಾಂಕ  ಪಂದ್ಯದ ಹಂತ ತಂಡಗಳು ಸ್ಥಳ
ಸೆಪ್ಟೆಂಬರ್ 17 ಕ್ವಾರ್ಟರ್ ಫೈನಲ್ 1 ಭಾರತ vs ಜಪಾನ್ ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 18 ಕ್ವಾರ್ಟರ್ ಫೈನಲ್ 2 ಬಾಂಗ್ಲಾದೇಶ್ vs ಚೀನಾ ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 19 ಕ್ವಾರ್ಟರ್ ಫೈನಲ್ 3 ಶ್ರೀಲಂಕಾ vs ಮಲೇಷ್ಯಾ ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 19 ಕ್ವಾರ್ಟರ್ ಫೈನಲ್ 4 ಪಾಕಿಸ್ತಾನ್ vs ಥೈಲ್ಯಾಂಡ್ ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 20 ಸೆಮಿಫೈನಲ್ 1 QF 1 ವಿಜೇತರು vs QF 2 ವಿಜೇತರು ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 20 ಸೆಮಿಫೈನಲ್ 2 QF 3 ವಿಜೇತರು vs QF 4 ವಿಜೇತರು ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 22 ಕಂಚಿನ ಪದಕದ ಪಂದ್ಯ ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳು ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 22 ಚಿನ್ನದ ಪದಕದ ಪಂದ್ಯ (ಫೈನಲ್) ಸೆಮಿಫೈನಲ್‌ನಲ್ಲಿ ಗೆದ್ದ ಎರಡು ತಂಡಗಳು ಕೋಗಿ ಅಥ್ಲೆಟಿಕ್ ಪಾರ್ಕ್

ಚೀನಾ ದೇಶದ ಹ್ಯಾಂಗ್‌ಝೌನಲ್ಲಿ ನಡೆದ ಕಳೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡವು ಚಿನ್ನದ ಪದಕ ಮುಡಿಗೇರಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿತ್ತು. ಈ ಬಾರಿಯೂ ಭಾರತ ತಂಡವು ಹರ್ಮನ್‌ಪ್ರೀತ್ ಕೌರ್ ನೇತೃತ್ವದಲ್ಲಿ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಮತ್ತು ಸತತ ಎರಡನೇ ಬಾರಿಗೆ ಚಿನ್ನದ ಪದಕವನ್ನು ಭಾರತದ ಮುಡಿಗೆ ಏರಿಸುವ ಬಲವಾದ ವಿಶ್ವಾಸದಲ್ಲಿದೆ.

Source link

Leave a Reply

Your email address will not be published. Required fields are marked *