ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ 15 ಸದಸ್ಯರುಗಳ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ಹದಿನೈದು ಸದಸ್ಯರುಗಳ ಪಟ್ಟಿಯಲ್ಲಿ ಜಮ್ಮು-ಕಾಶ್ಮೀರದ ವೇಗಿ ಆಖಿಬ್ ನಬಿ ಹೆಸರು ಕಾಣಿಸಿಕೊಂಡಿಲ್ಲ. ದೇಶಿ ಕ್ರಿಕೆಟ್‌ನಲ್ಲಿ ಸತತ ಅದ್ಭುತ ಪ್ರದರ್ಶನ ನೀಡಿದರೂ ನಬಿ ಅವರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗದಿರುವುದು ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಕಳೆದ ಎರಡು ರಣಜಿ ಸೀಸನ್ಗಳಲ್ಲಿ ಆಖಿಬ್ ನಬಿ ಪಡೆದಿರುವ ವಿಕೆಟ್ಗಳ ಸಂಖ್ಯೆ.
‘ಬಾರಾಮುಲ್ಲಾ ಎಕ್ಸ್‌ಪ್ರೆಸ್’:
ದೇಶೀಯ ಕ್ರಿಕೆಟ್‌ನಲ್ಲಿ ಬಾರಾಮುಲ್ಲಾ ಎಕ್ಸ್‌ಪ್ರೆಸ್ ಎಂದೇ ಖ್ಯಾತಿ ಪಡೆದಿರುವ ಆಖಿಬ್ ನಬಿ ಯಾವುದೇ ಪ್ರಮುಖ ಕ್ರಿಕೆಟ್ ಸೌಲಭ್ಯಗಳಿಲ್ಲದ ಜಮ್ಮು-ಕಾಶ್ಮೀರದ ಬಾರಾಮುಲ್ಲಾದಿಂದ ಬಂದ ಬೌಲರ್. ತನ್ನ ಊರಿನಲ್ಲಿ ಅಂತಹ ಅತ್ಯಾಧುನಿಕ ಸೌಲಭ್ಯಗಳು ಇಲ್ಲದಿದ್ದರೂ ಆಖಿಬ್ ನಬಿ ದೇಶಿ ಕ್ರಿಕೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.
- ಐತಿಹಾಸಿಕ ರಣಜಿ ಟ್ರೋಫಿ ಸಾಧನೆ: 2025-26ರ ರಣಜಿ ಟ್ರೋಫಿ ಸೀಸನ್‌ನಲ್ಲಿ ಆಖಿಬ್ ನಬಿ ಕೇವಲ 12.65 ರ ಸರಾಸರಿಯಲ್ಲಿ 60 ವಿಕೆಟ್‌ಗಳನ್ನು ಕಬಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
- ಜಮ್ಮು ಮತ್ತು ಕಾಶ್ಮೀರಕ್ಕೆ ಮೊದಲ ಕಿರೀಟ: ಆಖಿಬ್ ನಬಿ ಅವರ ಮಾರಕ ಬೌಲಿಂಗ್ ನೆರವಿನಿಂದಲೇ ಜಮ್ಮು ಮತ್ತು ಕಾಶ್ಮೀರ ತಂಡ ಇತಿಹಾಸದಲ್ಲೇ ಮೊದಲ ಬಾರಿಗೆ ರಣಜಿ ಟ್ರೋಫಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಮಧ್ಯಪ್ರದೇಶ ವಿರುದ್ಧ 110 ರನ್‌ಗಳಿಗೆ 12 ವಿಕೆಟ್ ಹಾಗೂ ಕರ್ನಾಟಕ ವಿರುದ್ಧದ ಫೈನಲ್‌ನಲ್ಲಿ 54 ರನ್‌ಗಳಿಗೆ 5 ವಿಕೆಟ್ ಪಡೆದು ಪಂದ್ಯದ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು.
- ಐತಿಹಾಸಿಕ 60 ವಿಕೆಟ್‌ಗಳು: 2025-26ರ ರಣಜಿ ಸೀಸನ್‌ನಲ್ಲಿ ಬರೋಬ್ಬರಿ 60 ವಿಕೆಟ್ ಪಡೆದು, ರಣಜಿ ಇತಿಹಾಸದಲ್ಲೇ ಒಂದೇ ಸೀಸನ್‌ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ 3ನೇ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಬರೋಬ್ಬರಿ 104 ವಿಕೆಟ್‌ಗಳು!
ಆಖಿಬ್ ನಬಿ ಕಳೆದ ಎರಡು ರಣಜಿ ಸೀಸನ್ಗಳಿಂದ ಪಡೆದಿರುವ ಒಟ್ಟು ವಿಕೆಟ್ಗಳ ಸಂಖ್ಯೆ ಬರೋಬ್ಬರಿ 104.
- 2024-25 ರ ರಣಜಿ ಸೀಸನ್‌ನಲ್ಲಿ 9 ಪಂದ್ಯಗಳಿಂದ 44 ವಿಕೆಟ್ ಕಬಳಿಸಿದ್ದರು.
- 2025-26ರ ರಣಜಿ ಸೀಸನ್‌ನಲ್ಲಿ 9 ಮ್ಯಾಚ್ಗಳಿಂದ ಬರೋಬ್ಬರಿ 60 ವಿಕೆಟ್ ಪಡೆದಿದ್ದಾರೆ.
ಕೇವಲ ಬೌಲಿಂಗ್ ಮಾತ್ರವಲ್ಲದೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಹೈದರಾಬಾದ್ ವಿರುದ್ಧ ಕೇವಲ 82 ಎಸೆತಗಳಲ್ಲಿ ಅಜೇಯ 114 ರನ್ ಸಿಡಿಸಿ ತಾವೊಬ್ಬ ಅತ್ಯುತ್ತಮ ಆಲ್‌ರೌಂಡರ್ ಎಂಬುದನ್ನು ಸಹ ಸಾಬೀತುಪಡಿಸಿದ್ದಾರೆ.
ಇದರ ಜೊತೆಗೆ ಶ್ರೀಲಂಕಾ ‘ಎ’ ವಿರುದ್ಧದ ಅನ್‌ಅಫಿಶಿಯಲ್ ಟೆಸ್ಟ್ ಪಂದ್ಯದಲ್ಲಿ ಇಂಡಿಯಾ ‘ಎ’ ಪರ ಪದಾರ್ಪಣೆ ಮಾಡಿದ ಆಖಿಬ್ ನಬಿ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ (4/58) ಪಡೆದು ಎಲ್ಲರ ಗಮನ ಸೆಳೆದಿದ್ದರು.
ಮಾಜಿ ಕ್ರಿಕೆಟಿಗರು ಫಿದಾ:
ದೇಶೀಯ ಕ್ರಿಕೆಟ್ ಅಂಗಳದಲ್ಲಿ ಆಖಿಬ್ ನಬಿ ಅವರ ಪ್ರಚಂಡ ಪ್ರದರ್ಶನವನ್ನು ಗಮನಿಸಿದ್ದ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಮಾಜಿ ಮುಖ್ಯ ಆಯ್ಕೆಗಾರ ದಿಲೀಪ್ ವೆಂಗ್‌ಸರ್ಕರ್ ಹಾಗೂ ಸಂಜಯ್ ಮಂಜ್ರೇಕರ್ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು, ಜಮ್ಮು-ಕಾಶ್ಮೀರದ ಈ ವೇಗಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಲೇಬೇಕು ಎಂದು ಬಲವಾಗಿ ಒತ್ತಾಯಿಸಿದ್ದರು.
ಇದಾಗ್ಯೂ 18 ಪಂದ್ಯಗಳಲ್ಲಿ ಬರೋಬ್ಬರಿ 104 ವಿಕೆಟ್ ಪಡೆದಿರುವ ಆಖಿಬ್ ನಬಿ ಅವರನ್ನು ಭಾರತ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡದಿರುವುದು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಟೀಮ್ ಇಂಡಿಯಾಗೆ 33 ವರ್ಷದ ಆಲ್‌ರೌಂಡರ್ ಎಂಟ್ರಿ!
ಭಾರತ ಟೆಸ್ಟ್ ತಂಡ: ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸರಂಶ್ ಜೈನ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್.
