ಮಹಿಳಾ ಟಿ20 ವಿಶ್ವಕಪ್ನಿಂದ ಪಾಕಿಸ್ತಾನ್ ತಂಡವು ಅಧಿಕೃತವಾಗಿ ಹೊರಬಿದ್ದಿದೆ. ಸೌತಾಂಪ್ಟನ್‌ನ ಆ್ಯಜಿಯಾಸ್ ಬೌಲ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ 23 ರನ್‌ಗಳ ಆಘಾತಕಾರಿ ಸೋಲಿನೊಂದಿಗೆ ಪಾಕ್ ಪಡೆಯ ವಿಶ್ವಕಪ್ ಕನಸು ನುಚ್ಚುನೂರಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು.
- ಮೊದಲ ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡ 20 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 123 ರನ್ಗಳು ಮಾತ್ರ.
- 124 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡ 20 ಓವರ್ಗಳಲ್ಲಿ ಕೇವಲ 100 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ.
ಈ ಮೂಲಕ ಬಾಂಗ್ಲಾದೇಶ್ ತಂಡವು 23 ರನ್‌ಗಳ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ ರೇಸ್ನಲ್ಲಿ ಉಳಿದುಕೊಂಡಿದೆ. ಅತ್ತ ಬಾಂಗ್ಲಾ ವಿರುದ್ಧ ಹೀನಾಯವಾಗಿ ಸೋತಿರುವ ಪಾಕಿಸ್ತಾನ್ ತಂಡವು ಕೊನೆಯ ಎರಡು ಪಂದ್ಯಗಳಿರುವಾಗಲೇ ಟೂರ್ನಿಯಿಂದ ಹೊರಬಿದ್ದಿದೆ.
2 ಪಂದ್ಯಗಳು ಬಾಕಿ ಇರುವಾಗಲೇ ಹೊರಬಿದ್ದಿದ್ದೇಗೆ?
ಮಹಿಳಾ ಟಿ20 ವಿಶ್ವಕಪ್ ನಿಯಮಾವಳಿಗಳ ಪ್ರಕಾರ, ಪ್ರತಿ ಗ್ರೂಪ್‌ನಿಂದ ಕೇವಲ 2 ತಂಡಗಳು ಮಾತ್ರ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಅದರಂತೆ ಲೀಗ್ ಹಂತದ ಪಂದ್ಯಗಳ ಮುಕ್ತಾಯದ ವೇಳೆಗೆ ಟಾಪ್-2 ನಲ್ಲಿ ಕಾಣಿಸಿಕೊಳ್ಳುವ ತಂಡಗಳು ಸೆಮಿಫೈನಲ್ಗೇರಲಿದೆ.
ಇತ್ತ ಮೊದಲ ಮೂರು ಮ್ಯಾಚ್ಗಳಲ್ಲೂ ಸೋಲನುಭವಿಸಿರುವ ಪಾಕಿಸ್ತಾನ್ ತಂಡವು ಕೊನೆಯ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದರೂ ಪ್ರಸ್ತುತ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ (6 ಅಂಕಗಳು) ತಂಡವನ್ನು ಹಿಂದಿಕ್ಕಲು ಸಾಧ್ಯವಿಲ್ಲ. ಹಾಗೆಯೇ ಭಾರತ (4 ಅಂಕಗಳು) ತಂಡದ ನೆಟ್ ರನ್ ರೇಟ್ ಮೀರಿ ದ್ವಿತೀಯ ಸ್ಥಾನಕ್ಕೇರಲು ಕೂಡ ಸಾಧ್ಯವಾಗುವುದಿಲ್ಲ.
ಏಕೆಂದರೆ ಪಾಕಿಸ್ತಾನದ ನೆಟ್ ರನ್ ರೇಟ್ -1.857 ನಲ್ಲಿದ್ದರೆ, ಭಾರತ ತಂಡ +3.975 ಬಲಿಷ್ಠ ನೆಟ್ ರನ್ ರೇಟ್ ಹೊಂದಿದೆ. ಇದರಿಂದ ಕೊನೆಯ ಎರಡು ಪಂದ್ಯಗಳಲ್ಲಿ ಗೆದ್ದರೂ ಪಾಕ್ ಪಡೆಗೆ ಟೀಮ್ ಇಂಡಿಯಾವನ್ನು ನೆಟ್ ರನ್ ರೇಟ್ನಲ್ಲಿ ಹಿಂದಕ್ಕಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೊನೆಯ ಎರಡು ಪಂದ್ಯಗಳಿಗೂ ಮುನ್ನವೇ ಪಾಕಿಸ್ತಾನ್ ತಂಡವು ಅಧಿಕೃತವಾಗಿ ಟಿ20 ವಿಶ್ವಕಪ್ನಿಂದ ಹೊರಬಿದ್ದಂತಾಗಿದೆ.
ಪಾಕಿಸ್ತಾನ್ ತಂಡದ ಹ್ಯಾಟ್ರಿಕ್ ಸೋಲು:
- 14 ಜೂನ್ 2026: ಭಾರತದ ವಿರುದ್ಧ 64 ರನ್‌ಗಳ ಹೀನಾಯ ಸೋಲು.
- 17 ಜೂನ್ 2026: ಸೌತ್ ಆಫ್ರಿಕಾ ವಿರುದ್ಧ 2 ವಿಕೆಟ್‌ಗಳ ರೋಚಕ ಸೋಲು.
- 20 ಜೂನ್ 2026: ಬಾಂಗ್ಲಾದೇಶ್ ವಿರುದ್ಧ 23 ರನ್‌ಗಳ ಆಘಾತಕಾರಿ ಸೋಲು.
ಇದನ್ನೂ ಓದಿ: 90 ಓವರ್, 5 ವಿಕೆಟ್, 281 ರನ್‌ಗಳ ಟಾರ್ಗೆಟ್: ರೋಚಕ ಘಟ್ಟದಲ್ಲಿ ENG vs NZ ಟೆಸ್ಟ್
ಈ ಮೂರು ಸೋಲುಗಳೊಂದಿಗೆ ಪಾಕಿಸ್ತಾನ್ ತಂಡದ ವಿಶ್ವಕಪ್ ಕನಸು ನುಚ್ಚುನೂರಾಗಿದೆ. ಇನ್ನು ಜೂನ್ 23 ರಂದು ಆಸ್ಟ್ರೇಲಿಯಾ ಹಾಗೂ ಜೂನ್ 27 ರಂದು ನೆದರ್ಲ್ಯಾಂಡ್ಸ್ ತಂಡಗಳ ವಿರುದ್ಧ ಪಾಕಿಸ್ತಾನ್ ಔಪಚಾರಿಕ ಪಂದ್ಯಗಳನ್ನಾಡಿ ವಿಶ್ವಕಪ್ ಅಭಿಯಾನ ಅಂತ್ಯಗೊಳಿಸಲಿದೆ.
