ಟೀಮ್ ಇಂಡಿಯಾದ ಉದಯೋನ್ಮುಖ ಆಲ್-ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರು ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಗಳಿಂದ ಹೊರಬಿದ್ದಿದ್ದಾರೆ. ಎಡಗಾಲಿನ ಸ್ನಾಯು ಸೆಳೆತದ ಗಾಯದ ಸಮಸ್ಯೆಯ ಕಾರಣದಿಂದಾಗಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ಅಫ್ಘಾನಿಸ್ತಾನ್ ವಿರುದ್ಧದ ಸರಣಿಯ ವೇಳೆ ಅವರು ತೊಡೆಯ ನೋವಿನ ಸಮಸ್ಯೆ ಎದುರಿಸಿದ್ದರು. ಆ ಬಳಿಕ ಅವರ ಗಾಯದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ.
ಈ ಸಮಸ್ಯೆಯ ಹಿನ್ನಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿತೀಶ್ ಅವರ ಎಡಗಾಲಿನ ಸ್ನಾಯುವಿನಲ್ಲಿ ತೀವ್ರವಾದ ಊತ ಮತ್ತು ಹಾನಿಯಾಗಿರುವುದು ಎಂಆರ್ಐ ಸ್ಕ್ಯಾನಿಂಗ್ನಲ್ಲಿ ದೃಢಪಟ್ಟಿದೆ. ಹೀಗಾಗಿ ವೈದ್ಯರು ಹೆಚ್ಚಿನ ವಿಶ್ರಾಂತಿ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.
ಪ್ರಸ್ತುತ ಮಾಹಿತಿ ಪ್ರಕಾರ, ನಿತೀಶ್ ಕುಮಾರ್ ರೆಡ್ಡಿಗೆ ವೈದ್ಯರು ಕನಿಷ್ಠ 4 ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ಯುವ ಆಲ್ರೌಂಡರ್ನನ್ನು ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಗಳಿಂದ ಕೈ ಬಿಡಲಾಗಿದೆ.
ಪಾಂಡ್ಯ ಕೂಡ ಅಲಭ್ಯ:
ಟೀಮ್ ಇಂಡಿಯಾದ ಅನುಭವಿ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿಯೇ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಭಾರತ ಟಿ20 ಹಾಗೂ ಏಕದಿನ ತಂಡಗಳಿಗೆ ಆಯ್ಕೆ ಮಾಡಲಾಗಿತ್ತು. ಆದರೀಗ ನಿತೀಶ್ ಕುಮಾರ್ ರೆಡ್ಡಿ ಕೂಡ ಗಾಯದ ಸಮಸ್ಯೆಯಿಂದ ಹೊರಗುಳಿಯಬೇಕಾಗಿ ಬಂದಿದೆ.
ಬದಲಿ ಆಟಗಾರ ಯಾರು?
ನಿತೀಶ್ ಕುಮಾರ್ ರೆಡ್ಡಿ ಸ್ಥಾನಕ್ಕೆ ಇನ್ನೂ ಕೂಡ ಬದಲಿ ಆಟಗಾರನನ್ನು ಹೆಸರಿಸಿಲ್ಲ. ಇದಾಗ್ಯೂ ದೇಶಿ ಕ್ರಿಕೆಟ್ನಲ್ಲಿ ಆಲ್ರೌಂಡರ್ ಆಟದೊಂದಿಗೆ ಮಿಂಚಿರುವ ಸೂರ್ಯಾಂಶ್ ಶೆಡ್ಗೆ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.
Published On – 10:43 am, Tue, 23 June 26