ದಳಪತಿ ವಿಜಯ್ ಅವರ (Thalapathy Vijay) ರಾಜಕೀಯ ಜೀವನದ ಬಹುದೊಡ್ಡ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರ ‘ತಮಿಳಗ ವೆಟ್ರಿ ಕಳಗಮ್’ (TVK) ಪಕ್ಷ ಬರೋಬ್ಬರಿ 106 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ರಾಜ್ಯದ ಅಧಿಕಾರದ ಗದ್ದುಗೆ ಏರುವುದು ಈಗ ಬಹುತೇಕ ಖಚಿತವಾಗಿದೆ. ಈ ಭರ್ಜರಿ ಯಶಸ್ಸಿನ ಬೆನ್ನಲ್ಲೇ, ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವಿಜಯ್ ಅವರ ಕಾರಿನ ನಂಬರ್ ಪ್ಲೇಟ್‌ನ ವಿಷಯ ಮತ್ತೆ ಚರ್ಚೆಗೆ ಬಂದಿದೆ.
2024ರಲ್ಲಿ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್’ (GOAT) ಸಿನಿಮಾ ಬಿಡುಗಡೆಯ ಸಮಯದಲ್ಲಿ ವಿಜಯ್ ಅವರು ಕಾರೊಂದರಲ್ಲಿ ಕಾಣಿಸಿಕೊಂಡಿದ್ದರು. ಆ ಕಾರಿನ ನಂಬರ್ ಪ್ಲೇಟ್ TN 07 CM 2026 ಎಂದಿತ್ತು. ಇದು ನಿರ್ದೇಶಕ ವೆಂಕಟ್ ಪ್ರಭು ಅವರ ಕಾರಾಗಿತ್ತು. ವಿಜಯ್ ಮೇಲಿನ ಅಭಿಮಾನಕ್ಕೋಸ್ಕರ ಅವರು ಈ ಸಂಖ್ಯೆ ತೆಗೆದುಕೊಂಡಿದ್ದರು ಎನ್ನಲಾಗಿದೆ. ವಿಶೇಷ ಎಂದರೆ ‘ಗೋಟ್’ ಸಿನಿಮಾದ ದೃಶ್ಯವೊಂದರಲ್ಲೂ ಇದೇ ಕಾರು ಬಳಕೆ ಆಗಿತ್ತು. ವಿಜಯ್ ಅವರು ಈ ಕಾರನ್ನು ಡ್ರೈವ್ ಮಾಡಿಕೊಂಡು ಹೋಗುವ ದೃಶ್ಯ ಇದೆ.
‘CM 2026’ ಎಂಬ ಕಾರು ಸಂಖ್ಯೆ ಈಗ ನಿಜವಾಗಿದೆ. ಅಂದುಕೊಂಡಂತೆಯೇ 2026ರ ಚುನಾವಣೆಯಲ್ಲಿ ವಿಜಯ್ ಕಿಂಗ್ ಆಗಿ ಹೊರಹೊಮ್ಮಿದ್ದಾರೆ.ವಿಜಯ್ ಈಗಾಗಲೇ ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟವಾಗಿದ್ದಾರೆ. ‘ಜನ ನಾಯಗನ್’ ಅವರ ಕೊನೆಯ ಚಿತ್ರವಾಗಲಿದೆ ಎಂದು ಘೋಷಿಸಿರುವ ವಿಜಯ್, ಪೂರ್ಣ ಪ್ರಮಾಣದಲ್ಲಿ ಜನಸೇವೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ. 2025ರಿಂದಲೇ ಪಕ್ಷ ಸಂಘಟನೆಯಲ್ಲಿ ಹಗಲಿರುಳು ಶ್ರಮಿಸಿದ್ದ ವಿಜಯ್ ಅವರಿಗೆ ತಮಿಳುನಾಡಿನ ಮತದಾರರು ಈಗ ಕೈ ಹಿಡಿದಿದ್ದಾರೆ.
ಇದನ್ನೂ ಓದಿ: ದಳಪತಿ ವಿಜಯ್ ಮನೆ ಎದುರು ಜಮಾಯಿಸಿದ ಅಭಿಮಾನಿಗಳು; ಧನ್ಯವಾದ ತಿಳಿಸಿದ ನಟ
ವಿಜಯ್ ಅವರ ಕೊನೆಯ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಕೆವಿಎನ್ (KVN) ಪ್ರೊಡಕ್ಷನ್ಸ್‌ಗೆ ಇದು ಸಂಭ್ರಮದ ಸಮಯ. ಒಂದು ಕಡೆ ಅವರ ನಿರ್ಮಾಣದ ‘ಕೆಡಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದರೆ, ಮತ್ತೊಂದೆಡೆ ತಮ್ಮ ಮುಂದಿನ ಚಿತ್ರದ ನಾಯಕ ವಿಜಯ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ಸಂಸ್ಥೆಗೆ ಅತೀವ ಸಂತಸ ತಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 7:43 am, Tue, 5 May 26
