2026-27ರಲ್ಲಿ ಭಾರತದ ಜಿಡಿಪಿ ಶೇ. 7.1ರಷ್ಟು ವೃದ್ಧಿ: ಎಸ್ ಅಂಡ್ ಪಿ ಗ್ಲೋಬಲ್ ಏಜೆನ್ಸಿ ಅಂದಾಜು

2026-27ರಲ್ಲಿ ಭಾರತದ ಜಿಡಿಪಿ ಶೇ. 7.1ರಷ್ಟು ವೃದ್ಧಿ: ಎಸ್ ಅಂಡ್ ಪಿ ಗ್ಲೋಬಲ್ ಏಜೆನ್ಸಿ ಅಂದಾಜು

ನವದೆಹಲಿ, ಮಾರ್ಚ್ 25: ಅಂತರರಾಷ್ಟ್ರೀಯ ಕ್ರೆಡಿಟ್ ರೇಟಿಂಗ್ ಏಜೆನ್ಸಿಯಾದ ಎಸ್ ಅಂಡ್ ಪಿ ಗ್ಲೋಬಲ್ ಸಂಸ್ಥೆ (S&P Global) ಭಾರತದ ಆರ್ಥಿಕ ಬೆಳವಣಿಗೆಯ ಹಾದಿ ಬಗ್ಗೆ ಸಕಾರಾತ್ಮಕವಾಗಿದೆ. 2026-27ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.1ರಷ್ಟು ಬೆಳೆಯಬಹುದು ಎಂದು ಈ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಅಂದಾಜು ಮಾಡಿದೆ. ಕಳೆದ ಬಾರಿ ಬಿಡುಗಡೆ ಮಾಡಿದ್ದ ವರದಿಯಲ್ಲಿ ಅದು ಭಾರತದ ಜಿಡಿಪಿ (Indian Economy) ಶೇ. 6.7ರಷ್ಟು ಹೆಚ್ಚಬಹುದು ಎಂದು ಹೇಳಿತ್ತು. ಈಗ ತನ್ನ ಅಭಿಪ್ರಾಯ ಬದಲಿಸಿರುವ ಅದು ಬೆಳವಣಿಗೆಯ ಅಂದಾಜನ್ನು 40 ಮೂಲಾಂಕಗಳಷ್ಟು ಹೆಚ್ಚಿಸಿದೆ.

ಇರಾನ್ ಯುದ್ಧದಿಂದ ಜಾಗತಿಕ ಅನಿಶ್ಚಿತತೆ ಇನ್ನಷ್ಟು ಬಿಗಡಾಯಿಸಿರುವುದು, ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯ ಆಗಿರುವು, ಇವೇ ಮುಂತಾದ ನಕಾರಾತ್ಮಕ ವಾತಾವರಣದ ನಡುವೆಯೂ ಭಾರತದ ಆರ್ಥಿಕತೆಯ ಬೆಳವಣಿಗೆ ಬಗ್ಗೆ ಎಸ್ ಅಂಡ್ ಪಿ ಹೆಚ್ಚು ನಿರೀಕ್ಷೆ ಇಟ್ಟಿರುವುದು ಗಮನಾರ್ಹ ಸಂಗತಿ. ದೇಶದೊಳಗೆ ಖಾಸಗಿ ಅನುಭೋಗ ಉತ್ತಮವಾಗಿರುವುದು ಆರ್ಥಿಕತೆಯ ಬೆಳವಣಿಗೆಗೆ ಪುಷ್ಟಿ ಕೊಡಬಹುದು ಎನ್ನುವುದು ಈ ಏಜೆನ್ಸಿಯ ಅನಿಸಿಕೆ.

ಇದನ್ನೂ ಓದಿ: ಭಾರತದಲ್ಲಿ ಪಿಎನ್​ಜಿ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ನಾಂದಿ ಹಾಡುತ್ತಿದೆ ಎಲ್​ಪಿಜಿ ಬಿಕ್ಕಟ್ಟು

‘2027ರ ಮಾರ್ಚ್​ಗೆ ಅಂತ್ಯವಾಗುವ ಹಣಕಾಸು ವರ್ಷದಲ್ಲಿ ನೈಜ ಜಿಡಿಪಿ ಶೇ. 7.1ರಷ್ಟು ಹೆಚ್ಚಬಹುದು ಎಂಬುದು ನಮ್ಮ ಅಂದಾಜು. 2025-26ರಲ್ಲಿ ಜಿಡಿಪಿಯ ಶೇ. 7.6ರ ಬೆಳವಣಿಗೆಗಿಂತ 2026-27ರಲ್ಲಿ ಬೆಳವಣಿಗೆ ಮಂದಗೊಳ್ಳಬಹುದು. ಆ ವರ್ಷ ಆರ್ಥಿಕ ಬೆಳವಣಿಗೆಗೆ ಪುಷ್ಟಿ ಕೊಡುವ ಸಂಗತಿಗಳೆಂದರೆ ಉತ್ತಮ ಖಾಸಗಿ ಅನುಭೋಗ, ಖಾಸಗಿ ಹೂಡಿಕೆ ಮತ್ತು ಉತ್ತಮ ರಫ್ತು’ ಎಂದು ಎಸ್ ಅಂಡ್ ಪಿ ಗ್ಲೋಬಲ್ ಸಂಸ್ಥೆಯ ಇತ್ತೀಚಿನ ಏಷ್ಯಾ ಪೆಸಿಫಿಕ್ ಆರ್ಥಿಕ ವಿಶ್ಲೇಷಣೆಯ ವರದಿಯಲ್ಲಿ ತಿಳಿಸಿದೆ.

ಜಾಗತಿಕ ಸಂಘರ್ಷಗಳ ಪರಿಣಾಮ ಇಲ್ಲದಿಲ್ಲ…

ಜಾಗತಿಕ ಸಂಘರ್ಷಗಳು ಮತ್ತು ವ್ಯಾಪಾರ ಅಸ್ಥಿರತೆಯ ಅಂಶಗಳು ಭಾರತದಲ್ಲಿ ಬೆಲೆ ಏರಿಕೆಗೆ ಎಡೆ ಮಾಡಿಕೊಡಬಹುದು. ಹೂಡಿಕೆಗಳು ಸಂಕುಚಿತಗೊಳ್ಳುವಂತೆ ಮಾಡಬಹುದು ಎಂದು ಎಸ್ ಅಂಡ್ ಪಿ ಗ್ಲೋಬಲ್ ಏಜೆನ್ಸಿಯ ವರದಿಯಲ್ಲಿ ಎಚ್ಚರಿಸಲಾಗಿದೆ.

ಇದನ್ನೂ ಓದಿ: ಪೆಟ್ರೋಲ್, ಡೀಸಲ್ ಕೊರತೆ ಇಲ್ಲ, ಗಾಬರಿ ಬೇಡ: ಪೆಟ್ರೋಲಿಯಂ ಕಂಪನಿಗಳಿಂದ ಸ್ಪಷ್ಟನೆ

ಭಾರತದ ಜಿಡಿಪಿ ವೃದ್ಧಿ ಬಗ್ಗೆ ಎಸ್ ಅಂಡ್ ಪಿ ಗ್ಲೋಬಲ್ ಅಂದಾಜು

  • 2025-26ಕ್ಕೆ ಶೇ. 7.6 ಜಿಡಿಪಿ ಹೆಚ್ಚಳ
  • 2026-27ಕ್ಕೆ ಶೇ. 7.1 ಜಿಡಿಪಿ ಹೆಚ್ಚಳ
  • 2027-28ಕ್ಕೆ ಶೇ. 7.2 ಜಿಡಿಪಿ ಹೆಚ್ಚಳ
  • 2028-29ಕ್ಕೆ ಶೇ. 7.0 ಜಿಡಿಪಿ ಹೆಚ್ಚಳ

‘ಅಧಿಕ ಇಂಧನ ಬೆಲೆಗಳಿಂದಾಗಿ ಆರ್ಥಿಕತೆಗಳ ಖರೀದಿ ಶಕ್ತಿ ಕುಂಠಿತಗೊಳ್ಳುತ್ತದೆ. ಆಂತರಿಕ ಬೇಡಿಕೆ ತಗ್ಗುತ್ತದೆ. ಭಾರತ, ಇಂಡೋನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್ ಇತ್ಯಾದಿ ದೇಶಗಳಲ್ಲಿ ಅಧಿಕ ತೈಲ ಬೆಲೆಗಳಿಂದಾಗಿ ಸರ್ಕಾರಗಳು ಸಬ್ಸಿಡಿಗಳಿಗೆ ಹೆಚ್ಚು ವ್ಯಯಿಸುವಂತಾಗಬಹುದು. ಇದರಿಂದ ಹಣಕಾಸು ಸ್ಥಿತಿ ದುರ್ಬಲಗೊಳ್ಳಬಹುದು ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿಯ ವರದಿಯು ಅಭಿಪ್ರಾಯಪಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *