ನವದೆಹಲಿ, ಆಗಸ್ಟ್ 7: ಭಾರತದ ಆರ್ಥಿಕತೆ (Indian Economy) ಸದ್ಯ ಇತರ ದೇಶಗಳಿಗಿಂತ ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿದೆ. 2047ಕ್ಕೆ ಮುಂದುವರಿದ ದೇಶವಾಗುವ ಕನಸು ನನಸಾಗುತ್ತದೋ ಇಲ್ಲವೋ, ಆದರೆ ಭಾರತವು ಅಷ್ಟರೊಳಗೆ ವೃದ್ಧಾಪ್ಯಕ್ಕೆ ಕಾಲಿಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ, 2050ರ ವೇಳೆಗೆ ದೇಶದ ಸುಮಾರು 70% ಹಿರಿಯ ನಾಗರಿಕರು ಗ್ರಾಮೀಣ ಭಾಗದಲ್ಲೇ ವಾಸಿಸಲಿದ್ದಾರೆ. ಪ್ರತೀ ಐವರಲ್ಲಿ ಒಬ್ಬರು ಹಿರಿಯ ನಾಗರಿಕರಿರಲಿದ್ದಾರಂತೆ.
ಟ್ರಾನ್ಸ್ಫಾರ್ಮ್ ರೂರಲ್ ಇಂಡಿಯಾ (TRI) ಇಂದು ಶುಕ್ರವಾರ ಬಿಡುಗಡೆ ಮಾಡಿದ ಶ್ವೇತಪತ್ರದಲ್ಲಿ ಈ ಕೆಲ ಕುತೂಹಲಕಾರಿಯಾದ ಮತ್ತು ಆಘಾತಕಾರಿ ಎನಿಸುವ ಸಂಗತಿಗಳಿವೆ. 2050ರ ವೇಳೆಗೆ ಭಾರತದಲ್ಲಿ 34.7 ಕೋಟಿ ಜನರು ವೃದ್ಧರಾಗಿರುತ್ತಾರೆ. ಅಂದರೆ, ಅವರ ವಯಸ್ಸು 60 ವರ್ಷ ದಾಟಿರುತ್ತದೆ. ಅಂದಿನ ಜನಸಂಖ್ಯೆಯ ಶೇ. 20ರಷ್ಟು ಮಂದಿ ವೃದ್ಧರಿರುತ್ತಾರೆ. ಈ ವೃದ್ಧರಲ್ಲಿ ಬಹುತೇಕ ಮುಕ್ಕಾಲು ಭಾಗದಷ್ಟು ಜನರು ಗ್ರಾಮೀಣ ಭಾಗದಲ್ಲಿರುತ್ತಾರೆ ಎಂದು ಈ ವರದಿ ಹೇಳುತ್ತದೆ.
ಇದನ್ನೂ ಓದಿ: ಜುಲೈನಲ್ಲಿ ಇವಿ ಮಾರಾಟದಲ್ಲಿ ಹೊಸ ದಾಖಲೆ; ಒಂದೇ ತಿಂಗಳಲ್ಲಿ 3.28 ಲಕ್ಷ ಎಲೆಕ್ಟ್ರಿಕ್ ವಾಹನಗಳು ಸೇಲ್
ಧನಿಕರಾಗುವ ಮೊದಲೇ ವೃದ್ಧಾಪ್ಯ
ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಜನಸಂಖ್ಯೆ ವಯಸ್ಸಾಗುವ ಮುನ್ನವೇ ಆರ್ಥಿಕವಾಗಿ ಸಮೃದ್ಧಿ ಸಾಧಿಸಿದ್ದವು. ಆದರೆ ಭಾರತವು ಕಡಿಮೆ ಆದಾಯದ ಹಂತದಲ್ಲಿದ್ದಾಗಲೇ ಈ ಜನಸಂಖ್ಯಾ ಬದಲಾವಣೆಗೆ (Demographic Transition) ಒಳಪಡುತ್ತಿದೆ. ಭಾರತದ ಆರ್ಥಿಕತೆ ಇಷ್ಟೇ ವೇಗದಲ್ಲಿ ಸಾಗಿದರೆ ಮುಂದಿನ ಎರಡು ದಶಕದಲ್ಲಿ ದೇಶವು ಮೇಲ್ಮಧ್ಯಮ ಹಂತಕ್ಕೆ ಏರಬಹುದು ಅಷ್ಟೇ ಹೊರತು ಶ್ರೀಮಂತ ದೇಶಗಳ ತಲಾದಾಯ ಮಟ್ಟ ತಲುಪಲು ಸಾಧ್ಯವಾಗದೇ ಹೋಗಬಹುದು.
ಕುಟುಂಬ ವ್ಯವಸ್ಥೆ ಮತ್ತು ವಲಸೆ ಪ್ರಭಾವ
ಗ್ರಾಮೀಣ ಭಾಗಗಳಿಂದ ಯುವಕರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುತ್ತಿರುವುದು ಮತ್ತು ಅವಿಭಕ್ತ ಕುಟುಂಬಗಳು ಸಣ್ಣ ಕುಟುಂಬಗಳಾಗಿ ಬದಲಾಗುತ್ತಿರುವುದರಿಂದ, ಹಿರಿಯರಿಗೆ ಸಾಂಪ್ರದಾಯಿಕವಾಗಿ ಸಿಗುತ್ತಿದ್ದ ಕುಟುಂಬದ ಆರೈಕೆ ಮತ್ತು ಬೆಂಬಲ ಕಡಿಮೆಯಾಗುತ್ತಿದೆ ಎಂಬ ಸಂಗತಿಯನ್ನು ಟಿಆರ್ಐ ಅಧ್ಯಯನ ವರದಿಯಲ್ಲಿ ಗುರುತಿಸಲಾಗಿದೆ.
ಇದನ್ನೂ ಓದಿ: ಆರ್ಥಿಕ ಸಂಕಷ್ಟದಲ್ಲೂ ವಿದೇಶಿಗರ ನೆರವಿನ ಹಸ್ತಕ್ಕೆ ಕೈಚಾಚದ ಬೆಂಗಳೂರು ಸ್ಟಾರ್ಟಪ್; ಭಾರತದ ಮೊದಲ ಎಂಆರ್ಐ ನಿರ್ಮಿಸಿದವನ ಕಥೆ
ಆರೋಗ್ಯ ರಕ್ಷಣೆಯ ಅಗತ್ಯತೆ
ಅಸಾಂಕ್ರಾಮಿಕ ರೋಗಗಳು (Non-communicable diseases) ಹೆಚ್ಚಾಗುತ್ತಿದ್ದು, ಗ್ರಾಮೀಣ ಮಟ್ಟದಲ್ಲಿ ಹಿರಿಯರ ಆರೋಗ್ಯ ತಪಾಸಣೆ ಮತ್ತು ದಿನನಿತ್ಯದ ಆರೈಕೆಗೆ ಅನುಕೂಲವಾಗುವಂತೆ ಗ್ರಾಮೀಣ ಸಂಸ್ಥೆಗಳನ್ನು ಒಳಗೊಂಡ ‘ಸಮುದಾಯ ಆಧಾರಿತ ಆರೈಕೆ ಮಾದರಿ’ (Community-based care model) ರೂಪಿಸುವುದು ಅಗತ್ಯವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ