IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಚಂಡ ಜಯ ಸಾಧಿಸಿದೆ. ಧರ್ಮಶಾಲಾದ ಹೆಚ್ಪಿಸಿಎ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಗುಜರಾತ್ ಟೈಟಾನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ ಬರೋಬ್ಬರಿ 254 ರನ್ ಕಲೆಹಾಕಿದ್ದರು.
ಈ ಕಠಿಣ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 19.3 ಓವರ್ಗಳಲ್ಲಿ 162 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಬರೋಬ್ಬರಿ 92 ರನ್ಗಳ ಅಂತರದಿಂದ ಹೀನಾಯವಾಗಿ ಸೋಲೊಪ್ಪಿಕೊಂಡಿದೆ. ಈ ಸೋಲಿನ ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಆಗಲಿ ಅಥವಾ ಮುಖ್ಯ ಕೋಚ್ ಆಶಿಶ್ ನೆಹ್ರಾ ಕಾಣಿಸಿಕೊಂಡಿರಲಿಲ್ಲ. ಬದಲಿಗೆ ಪ್ಲೇಯಿಂಗ್ ಇಲೆವೆನ್ನ ಭಾಗವಾಗಿರ ಗ್ಲೆನ್ ಫಿಲಿಪ್ಸ್ ಅವರನ್ನು ಕಳುಹಿಸಲಾಗಿತ್ತು.
ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಗ್ಲೆನ್ ಫಿಲಿಪ್ಸ್ಗೆ ವರದಿಗಾರರೊಬ್ಬರು, ಆರ್ಸಿಬಿ ನೀಡಿದ 254 ರನ್ಗಳ ಕಠಿಣ ಗುರಿ ನೋಡಿ ಗುಜರಾತ್ ಟೈಟಾನ್ಸ್ ಆಟಗಾರರು ಮಾನಸಿಕವಾಗಿಯೇ ಸೋಲು ಒಪ್ಪಿಕೊಂಡ್ರಾ? ಎಂದು ಪ್ರಶ್ನೆ ಮುಂದಿಟ್ಟಿದ್ದರು.
ಈ ಪ್ರಶ್ನೆ ಕೇಳುತ್ತಿರುವಂತೆ ಅಸಮಾಧಾನ ಹೊರಹಾಕಿದ ಗ್ಲೆನ್ ಫಿಲಿಪ್ಸ್, ಇದು ತಂಡದ ವೃತ್ತಿಪರತೆಗೆ ಧಕ್ಕೆ ತರುವಂತಹ ಪ್ರಶ್ನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನೀವು ಕೇಳಿರುವುದು ಅತ್ಯಂತ ಮೂರ್ಖತನದ ಪ್ರಶ್ನೆ. ನಿಜಕ್ಕೂ ಇಂತಹ ಪ್ರಶ್ನೆಗಳೇ ಮೂರ್ಖತನದ್ದು! ಯಾವೊಬ್ಬರ ವೃತ್ತಿಪರ ಕ್ರಿಕೆಟಿಗನೂ ಕೂಡ ಹೀಗೆ ಯೋಚಿಸಲ್ಲ. ಯಾರೂ ಸಹ ಸ್ಕೋರ್ ನೋಡಿ, ಈ ಪಂದ್ಯವನ್ನು ಇಲ್ಲೇ ಕೈ ಬಿಡುತ್ತಿದ್ದೇವೆ ಎಂದು ಮೈದಾನಕ್ಕೆ ಇಳಿಯುವುದಿಲ್ಲ. ಪಂದ್ಯವಾಡಲು ಬಂದವರು ಹಾಗೆ ಏಕೆ ಯೋಚಿಸುತ್ತಾರೆ ಹೇಳಿ”.
“250 ಕ್ಕೂ ಹೆಚ್ಚಿನ ಬೃಹತ್ ಮೊತ್ತವನ್ನು ಬೆನ್ನಟ್ಟುವಾಗ ಪ್ರತಿ ಹಂತದಲ್ಲೂ ನಾವು ಪಾಸಿಟಿವ್ ಆಗಿಯೇ ಯೋಚಿಸಬೇಕಾಗುತ್ತದೆ. ಆದರೆ ಕೆಲವೊಮ್ಮೆ ನಮ್ಮ ಪ್ಲ್ಯಾನ್ಗಳು ವರ್ಕ್ ಆಗಲ್ಲ. ಅದೇ ರೀತಿ ಈ ಮ್ಯಾಚ್ನಲ್ಲಿ ನಾವು ಅಂದುಕೊಂಡಂತೆ ನಡೆದಿಲ್ಲ ಅಷ್ಟೇ” ಎಂದು ಗ್ಲೆನ್ ಫಿಲಿಪ್ಸ್ ಗುಜರಾತ್ ಟೈಟಾನ್ಸ್ ತಂಡದ ಆಟಗಾರರ ಪ್ರದರ್ಶನವನ್ನು ಸಮರ್ಥಿಸಿಕೊಂಡಿದ್ದಾರೆ.
ಫೈನಲ್ ಮೇಲೆ ಗುಜರಾತ್ ಕಣ್ಣು:
ಈ ಬಾರಿಯ ಐಪಿಎಲ್ನ ಫೈನಲ್ ಪಂದ್ಯ ನಡೆಯುವುದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ. ಈ ಸ್ಟೇಡಿಯಂ ಗುಜರಾತ್ ಟೈಟಾನ್ಸ್ ತಂಡದ ತವರು ಮೈದಾನ. ಹೀಗಾಗಿ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಜಯಗಳಿಸುವ ಮೂಲಕ ಗುಜರಾತ್ ಟೈಟಾನ್ಸ್ ತಂಡವು ಫೈನಲ್ಗೇರಲು ಪ್ಲ್ಯಾನ್ ರೂಪಿಸುತ್ತಿದೆ.
ಇದನ್ನೂ ಓದಿ: ಈ ಸಲನೂ ಕಪ್ ನಮ್ದೆ: ಈ ಲೆಕ್ಕಾಚಾರಕ್ಕಿದೆ ಬಲವಾದ ಕಾರಣ!
ಇಲ್ಲಿ ಗುಜರಾತ್ ಟೈಟಾನ್ಸ್ ತಂಡದ ಮುಂದಿನ ಎದುರಾಳಿಯಾಗಿ ಸನ್ರೈಸರ್ಸ್ ಹೈದರಾಬಾದ್ ಅಥವಾ ರಾಜಸ್ಥಾನ್ ರಾಯಲ್ಸ್ ಕಣಕ್ಕಿಳಿಯಲಿದೆ. ಅಂದರೆ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಮ್ಯಾಚ್ನಲ್ಲಿ ಗೆಲ್ಲುವ ಮೂಲಕ ಗುಜರಾತ್ ಟೈಟಾನ್ಸ್ ತಂಡಕ್ಕೆ ಫೈನಲ್ಗೇರಲು ಅವಕಾಶವಿದೆ.
